ಬಂಟ್ವಾಳ, ಫೆ. 26, 2021 (ಕರಾವಳಿ ಟೈಮ್ಸ್) : ರಾಜ್ಯ ಸರಕಾರದ ಪರಿಷ್ಕೃತ ತೆರಿಗೆ ಸಂಗ್ರಹ ಸುತ್ತೋಲೆಯನ್ನು ಬಂಟ್ವಾಳ ಪುರಸಭೆಯಲ್ಲಿ ಜಾರಿಗೆ ಅವಕಾಶ ನೀಡುವುದೇ ಇಲ್ಲ ಎಂದು ಪಕ್ಷ ಬೇಧ ಮರೆತು ಸದಸ್ಯರು ವಿರೋಧ ವ್ಯಕ್ತಪಡಿಸಿದರು.
ಗುರುವಾರ ಪುರಸಭಾ ಸಭಾಂಗಣದಲ್ಲಿ ಅಧ್ಯಕ್ಷ ಮುಹಮ್ಮದ್ ಶರೀಫ್ ಶಾಂತಿಅಂಗಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸರಕಾರದ ಪರಿಷ್ಕೃತ ತೆರಿಗೆ ಸಂಗ್ರಹದ ಸುತ್ತೋಲೆಯನ್ನು ಕಂದಾಯ ನಿರೀಕ್ಷಕ ಪುರುಷೋತ್ತಮ ಅವರು ಸಭೆಗೆ ಮಂಡಿಸಿ ಸಭೆಯ ಅಂಗೀಕಾರ ಕೋರಿದರಲ್ಲದೆ ಮುಂದಿನ ಎಪ್ರಿಲ್ ತಿಂಗಳಲ್ಲಿ ನೂತನ ಸುತ್ತೋಲೆಯಂತೆ ತೆರಿಗೆ ಸಂಗ್ರಹಕ್ಕೆ ನಿರ್ಣಯ ಕೈಗೊಳ್ಳುವಂತೆ ಸೂಚಿಸಿದರು. ಈ ಸಂದರ್ಭ ತೀವ್ರ ಗರಂ ಆದ ಸರ್ವ ಸದಸ್ಯರು ಸರಕಾರದ ನೂತನ ಸುತ್ತೋಲೆಗೆ ನಮ್ಮ ಎಲ್ಲಾ ಸದಸ್ಯರ ವಿರೋಧವಿದೆ. ಇದೊಂದು ಜನವಿರೋಧಿ ತೆರಿಗೆ ಸಂಗ್ರಹ ನಿಯಮ. ಈ ಬಗ್ಗೆ ನಿರ್ಣಯ ಕೈಗೊಳ್ಳಲು ಸಾಧ್ಯವೇ ಇಲ್ಲ ಎಂದು ಪಟ್ಟು ಹಿಡಿದರು. ನೂತನ ಸುತ್ತೋಲೆಯಂತೆ 1964 ರ ತೆರಿಗೆ ಸಂಗ್ರಹ ನಿಯಮವನ್ನು ಸರಕಾರ ರದ್ದುಗೊಳಿಸಿದ್ದು, 2021-21ನೇ ನಿಯಮ ಜಾರಿಗೊಳಿಸಿದ್ದು, ಈ ಪ್ರಕಾರ ಮನೆ ತೆರಿಗೆ ಜೊತೆಗೆ ಮನೆಯ ಸುತ್ತ ಇರುವ ಖಾಲಿ ಪರಿವರ್ತಿತ ಜಾಗಕ್ಕೂ ಪ್ರಸ್ತುತ ಮಾರುಕಟ್ಟೆ ಮೌಲ್ಯ ಆಧರಿಸಿ ತೆರಿಗೆ ಸಂದಾಯ ಮಾಡಬೇಕು ಎಂದಿದೆ ಎಂದು ಕಂದಾಯ ನಿರೀಕ್ಷಕ ವಿವರಿಸಿದರು. ಈ ಸಂದರ್ಭ ಆಕ್ರೋಶ ವ್ಯಕ್ತಪಡಿಸಿದ ಸದಸ್ಯರು ಇದೊಂದು ಪಕ್ಕಾ ಜನರನ್ನು ದೋಚುವ ನಿಯಮವಾಗಿದ್ದು, ನೇರವಾಗಿ ಈ ಬಗ್ಗೆ ಸಾರ್ವಜನಿಕ ಪ್ರಕಟಣೆ ನೀಡಿ ಜನರ ಅಭಿಪ್ರಾಯ ಸಂಗ್ರಹಿಸಿ ಮತ್ತೆ ಈ ಬಗ್ಗೆ ನಿರ್ಣಯ ಕೈಗೊಳ್ಳುವ. ಅದು ಬಿಟ್ಟು ಜನರಿಂದ ಆಯ್ಕೆಯಾಗಿರುವ ಸದಸ್ಯರು ಜನವಿರೋಧಿ ನಿರ್ಣಯ ಕೈಗೊಳ್ಳುವುದು ಸಾಧ್ಯವಿಲ್ಲ ಎಂದು ಸದಸ್ಯರಾದ ಲುಕ್ಮಾನ್, ಮೂನಿಶ್ ಅಲಿ, ವಾಸು ಪೂಜಾರಿ, ಅಬೂಬಕ್ಕರ್ ಸಿದ್ದೀಕ್ , ಮುಹಮ್ಮದ್ ನಂದರಬೆಟ್ಟು, ಜನಾರ್ದನ ಚೆಂಡ್ತಿಮಾರ್, ಗಂಗಾಧರ ಸಹಿತ ಆಡಳಿತ ಪಕ್ಷದ ಸದಸ್ಯರು ಪಟ್ಟು ಹಿಡಿದರು. ಇದಕ್ಕೆ ವಿರೋಧ ಪಕ್ಷದ ಸದಸ್ಯ ಗೋವಿಂದ ಪ್ರಭು ಧ್ವನಿಗೂಡಿಸಿದರು. ಈ ಸಂದರ್ಭ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಮಾರ್ಚ್ 5 ರೊಳಗೆ ನಿರ್ಣಯ ಕೈಗೊಳ್ಳಬೇಕು ಎಂದು ಸರಕಾರ ಸುತ್ತೋಲೆ ಹೊರಡಿಸಿದೆ ಎಂದಾಗ ಮತ್ತಷ್ಟು ಗರಂ ಆದ ಸದಸ್ಯರು ಹಾಗೆಲ್ಲ ನಿರ್ಣಯ ಕೈಗೊಳ್ಳಲಾಗುವುದಿಲ್ಲ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಮಧ್ಯಪ್ರವೇಶಿಸಿದ ಅಧ್ಯಕ್ಷ ಶರೀಫ್ ಈ ಬಗ್ಗೆ ವಿಶೇಷ ಸಭೆ ಕರೆದು ಚರ್ಚಿಸುವುದಾಗಿ ತಿಳಿಸಿ ಚರ್ಚೆಗೆ ತೆರೆ ಎಳೆದರು.
ತ್ಯಾಜ್ಯ ಎಸೆತ ಪತ್ತೆ ಹಚ್ಚಲು ಸೀಸಿ ಕ್ಯಾಮೆರಾ*
ಪುರಸಭಾ ವ್ಯಾಪ್ತಿಯ ಗಡಿ ಪ್ರದೇಶಗಳಲ್ಲಿ ಪಂಚಾಯತ್ ವ್ಯಾಪ್ತಿಯ ಜನ ವಾಹನಗಳಲ್ಲಿ ತ್ಯಾಜ್ಯ ತಂದು ಎಸೆಯುತ್ತಾರೆ ಎಂಬ ವ್ಯಾಪಕ ಆರೋಪದ ಹಿನ್ನಲೆಯಲ್ಲಿ ಪುರಸಭಾ ವ್ಯಾಪ್ತಿಯಲ್ಲಿ ಇತರ ಕಾಮಗಾರಿ ತಡೆಹಿಡಿದಾದರೂ ಹಣಕಾಸು ವ್ಯವಸ್ಥೆ ಮಾಡಿ ಸೀಸಿ ಕ್ಯಾಮೆರಾ ಅಳವಡಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು. ಈ ಸಂದರ್ಭ ಮಾತನಾಡಿದ ಸದಸ್ಯ ಮೂನಿಶ್ ಅಲಿ ಮೊದಲಿಗೆ ಪುರಸಭಾ ವ್ಯಾಪ್ತಿಯ ಮನೆ ಮನೆ ಕಸ ಸಂಗ್ರಹ ಹಾಗೂ ತ್ಯಾಜ್ಯ ವಿಲೇವಾರಿ ಸಮಪರ್ಕವಾಗಿ ನಡೆಯಲಿ. ಆ ಬಳಿಕ ಹೊರಗಿನ ತ್ಯಾಜ್ಯ ಎಸೆಯುವವರ ಪತ್ತೆ ಕಾರ್ಯ ನಡೆಸಿದರೆ ಇನ್ನಷ್ಟು ಅರ್ಥ ಬರುತ್ತದೆ ಎಂದು ಸಲಹೆ ನೀಡಿದರು.
ಬಂಟ್ವಾಳ ಪುರಸಭೆಯಲ್ಲಿ ಪರವಾನಿಗೆ ಪಡೆಯದೆ ಕಟ್ಟಿದ ಅನಧಿಕೃತ ವಾಸ್ತವ್ಯದ ಮನೆಗಳಿಗೆ ಈ ಹಿಂದೆ ನೀಡಲಾಗುತ್ತಿದ್ದ ಡಬಲ್ ಟ್ಯಾಕ್ಸ್ ಕದ ನಂಬ್ರ ನೀಡುವುದನ್ನು ನಿಲ್ಲಿಸಲಾಗಿರುವ ಕ್ರಮ ಸರಿಯಲ್ಲ. ಅದನ್ನು ಮತ್ತೆ ಅಳವಡಿಸಿಕೊಂಡು ವಾಸ್ತವ್ಯದ ಉದ್ದೇಶಕ್ಕೆ ದುಪ್ಪಟ್ಟು ಕರ ವಿಧಿಸಿ ಕದ ನಂಬ್ರ ನೀಡಬೇಕು ರಂದು ಸದಸ್ಯ ಅಬೂಬಕ್ಕರ್ ಸಿದ್ದೀಕ್ ಬರಕೊಂಡ ನಿರ್ಣಯದಂತೆ ಮತ್ತೆ ಡಬಲ್ ಟ್ಯಾಕ್ಸ್ ಡೋರ್ ನಂಬ್ರ ನೀಡಲು ಸಭೆ ನಿರ್ಣಯ ಕೈಗೊಂಡಿತು.
ಉಪಾಧ್ಯಕ್ಷೆ ಜೆಸಿಂತಾ ಡಿ'ಸೋಜ, ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ, ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೊ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು.
25 February 2021
- Blogger Comments
- Facebook Comments
Subscribe to:
Post Comments (Atom)
0 comments:
Post a Comment