ಬಂಟ್ವಾಳ, ಫೆ. 03, 2021 (ಕರಾವಳಿ ಟೈಮ್ಸ್) : ಅಸಹಜ ಸಾವು ಎಂದು ಮುಚ್ಚಿ ಹೋಗಬಹುದಾಗಿದ್ದ ವೃದ್ದೆಯ ಸಾವಿನ ಬಗ್ಗೆ ಪುತ್ರ ವ್ಯಕ್ತಪಡಿಸಿದ ಸಂಶಯವನ್ನು ಸವಾಲಾಗಿ ಸ್ವೀಕರಿಸಿದ ಬಂಟ್ವಾಳ ಪೊಲೀಸರು ತನಿಖೆ ನಡೆಸಿ ಕೊಲೆ ಪ್ರಕರಣ ಎಂಬುದನ್ನು ಪತ್ತೆ ಹಚ್ಚಿ ಮೂರು ಮಂದಿ ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ.
ಅಮ್ಟಾಡಿ ಗ್ರಾಮದ ನಿವಾಸಿ ಪ್ರಶ್ಚಿತ ಬರೆಟ್ಟೋ (25), ನರಿಕೊಂಬು ಗ್ರಾಮದ ನಿವಾಸಿಗಳಾದ ಸತೀಶ ಹಾಗೂ ಚರಣ್ ಬಂಧಿತ ಕೊಲೆ ಆರೋಪಿಗಳು.
ಜ 26 ರಂದು ತಾಲೂಕಿನ ಅಮ್ಮುಂಜೆ ಗ್ರಾಮದಲ್ಲಿ ಬೆನೆಡಿಕ್ಟ್ ಕಾರ್ಲೋ (72) ಅವರ ಸಾವು ಸಂಭವಿಸಿತ್ತು. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಯುಡಿಆರ್ ಸಂಖ್ಯೆ 03/2021 ರಂತೆ ಪ್ರಕರಣ ದಾಖಲಾಗಿತ್ತು. ಮೃತ ಮಹಿಳೆಯ ಸಾವಿನ ಬಗ್ಗೆ ಫೆ 2 ರಂದು ಅವರ ಪುತ್ರ ಸಂಶಯ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದರು. ಪುತ್ರನ ದೂರಿನ ಅನ್ವಯ ಪ್ರಕರಣವನ್ನು ಕಲಂ 302, 392 ಜೊತೆಗೆ 34 ಐಪಿಸಿ ಸೆಕ್ಷನ್ ಆಗಿ ಪರಿವರ್ತಿಸಿದ ಬಂಟ್ವಾಳ ಡಿವೈಎಸ್ಪಿ ವೆಲೆಂಟೈನ್ ಡಿ’ಸೋಜ ಹಾಗೂ ವೃತ್ತ ನಿರೀಕ್ಷಕ ಟಿ ಡಿ ನಾಗರಾಜ್ ನೇತತ್ವದ ಪೊಲೀಸರು ತನಿಖೆ ಕೈಗೊಂಡು ಕೊಲೆ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೃತ ಮಹಿಳೆಯನ್ನು ನೋಡಿಕೊಳ್ಳಲು ನೇಮಿಸಿದ್ದ ಎಲ್ಮಾ ಪ್ರಶ್ಚಿತ ಬರೆಟ್ಟೋ ಎಂಬಾಕೆ ವೃದ್ದೆಯ ಮೇಲಿದ್ದ ಆಭರಣ ದೋಚುವ ಸಂಚು ರೂಪಿಸಿ ನರಿಕೊಂಬು ನಿವಾಸಿಯಾದ ಸತೀಶ ಮತ್ತು ಚರಣ್ ಅವರೊಂದಿಗೆ ಸೇರಿಕೊಂಡು ಜ 25 ರಂದು ತಲೆದಿಂಬಿನ ಮೂಲಕ ಉಸಿರುಗಟ್ಟಿಸಿ ಕೊಲೆ ಮಾಡಿರುವ ಬಗ್ಗೆ ಪೊಲೀಸರು ಬಯಲಿಗೆಳೆದಿದ್ದಾರೆ. ಈ ಸಂಬಂಧ ಮೂರೂ ಮಂದಿ ಆರೋಪಿಗಳನ್ನು ಮಾಡಿರುವ ಪೊಲೀಸರು ಆರೋಪಿಗಳು ದೋಚಿದ್ದ 98 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ಪೊಲೀಸರು ನಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
3 February 2021
- Blogger Comments
- Facebook Comments
Subscribe to:
Post Comments (Atom)
0 comments:
Post a Comment