ಶೈಕ್ಷಣಿಕ ಕ್ಷೇತ್ರಕ್ಕೆ ಮಾತ್ರ ಸೀಮಿತಗೊಂಡ ಕೊರೋನಾ ಕರಿ ಛಾಯೆ : ಡಾ ಮೋಹನ್ ಆಳ್ವ ತೀವ್ರ ವಿಷಾದ - Karavali Times ಶೈಕ್ಷಣಿಕ ಕ್ಷೇತ್ರಕ್ಕೆ ಮಾತ್ರ ಸೀಮಿತಗೊಂಡ ಕೊರೋನಾ ಕರಿ ಛಾಯೆ : ಡಾ ಮೋಹನ್ ಆಳ್ವ ತೀವ್ರ ವಿಷಾದ - Karavali Times

728x90

12 February 2021

ಶೈಕ್ಷಣಿಕ ಕ್ಷೇತ್ರಕ್ಕೆ ಮಾತ್ರ ಸೀಮಿತಗೊಂಡ ಕೊರೋನಾ ಕರಿ ಛಾಯೆ : ಡಾ ಮೋಹನ್ ಆಳ್ವ ತೀವ್ರ ವಿಷಾದ

ಬಿ.ಸಿ.ರೋಡಿನಲ್ಲಿ ಕರಾವಳಿ ಕಲೋತ್ಸವಕ್ಕೆ ವಿದ್ಯುಕ್ತ ಚಾಲನೆ
ಬಂಟ್ವಾಳ, ಫೆ. 12, 2021 (ಕರಾವಳಿ ಟೈಮ್ಸ್) : ಕೊರೋನಾ ಮಾಹಾಮಾರಿ ಹೆಸರಿನಲ್ಲಿ ಶಿಕ್ಷಣ ಕ್ಷೇತ್ರ ಸ್ಥಬ್ಧಗೊಂಡಿದ್ದು, ವಿದ್ಯಾರ್ಥಿಗಳ ಭವಿಷ್ಯದ ಮೇಲೆಯೇ ಕರಿಛಾಯೆ ಆವರಿಸಿದೆ ಎಂದು ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ ಮೋಹನ್ ಆಳ್ವ ತೀವ್ರ ವಿಷಾದ ವ್ಯಕ್ತಪಡಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ (ರಿ) ಬಂಟ್ವಾಳ ಇದರ ಜಂಟಿ ಆಶ್ರಯದಲ್ಲಿ ಬಿ ಸಿ ರೋಡಿನ ಗೋಲ್ಡನ್ ಪಾರ್ಕ್ ಮೈದಾನದಲ್ಲಿ ಗುರುವಾರ ಸಂಜೆ ಕೃಷಿ ಉತ್ಸವ ಹಾಗೂ ಕರಾವಳಿ ಕಲೋತ್ಸವ-2021 ಮೆಗಾ ಕಾರ್ಯಕ್ರಮವನ್ನು ಇಲ್ಲಿನ ಡಾ ಎಪಿಜೆ ಅಬ್ದುಲ್ ಕಲಾಂ ವೇದಿಕೆಯಲ್ಲಿ ಉದ್ಘಾಟಿಸಿ ಮಾತನಾಡಿದ ಅವರು ಸಮಾಜದಲ್ಲಿ ಎಲ್ಲಿ ಹೋದರೂ ಪರಿಸ್ಥಿತಿ ಸಹಜ ಸ್ಥಿತಿಯಲ್ಲಿದೆ. ಆದರೆ ಶೈಕ್ಷಣಿಕ ಸಂಸ್ಥೆಗಳನ್ನು ತೆರೆಯಲು ಮಾತ್ರ ಸಾಂಕ್ರಾಮಿಕ ರೋಗ ಭೀತಿಯನ್ನು ಛೂ ಬಿಡಲಾಗುತ್ತಿದೆ. ಇದು ಸರಿಯಲ್ಲ. ಸರಕಾರಗಳು ಶೈಕ್ಷಣಿಕ ಕ್ಷೇತ್ರಕ್ಕೆ ಮಾತ್ರ ಸೀಮಿತಗೊಂಡಂತೆ ನಿರ್ಬಂಧ ಹೇರಿರುವ ಕ್ರಮದ ಬಗ್ಗೆ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದರು. ಮಕ್ಕಳ ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಮುಂಚೂಣಿಯಲ್ಲಿ ಪ್ರಾರಂಭಗೊಂಡಾಗ ಮಾತ್ರ ಕೊರೋನಾ ಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯಪಟ್ಟ ಡಾ ಮೋಹನ್ ಆಳ್ವ ಅವರು ಕಲೆ, ಸಾಹಿತ್ಯ, ಕ್ರೀಡೆಗಳ ಮೂಲಕ ಜನ ಯಥಾಸ್ಥಿತಿ ಜೀವನಕ್ಕೆ ಮರಳಬೇಕಾದ ಅನಿವಾರ್ಯತೆ ಇದೆ ಎಂದು ಆಶಿಸಿದರಲ್ಲದೆ ಯುವ ಜನತೆಗೆ ಉನ್ನತ ಹಾಗೂ ಮೌಲ್ಯಯುತ ಶಿಕ್ಷಣದ ಜೊತೆಗೆ ಮನಸ್ಸುಗಳನ್ನು ಕಟ್ಟುವ ಸಂಸ್ಕಾರ, ಸಂಸ್ಕೃತಿಯನ್ನು ನೀಡಬೇಕಾದ ಅನಿವಾರ್ಯತೆಯನ್ನು ಒತ್ತಿ ಹೇಳಿದರು. ಕರಾವಳಿ ಸೌರಭ ರಾಜ್ಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಟ-ನಿರ್ಮಾಪಕ ತೋನ್ಸೆ ವಿಜಯಕುಮಾರ್ ಶೆಟ್ಟಿ, ಇಂದಿನ ಶಿಕ್ಷಣ ಕೇವಲ ಪುಸ್ತಕದ ಬದನೆ ಕಾಯಿಯಾಗಿದ್ದು, ಮಕ್ಕಳನ್ನು ಮನುಷ್ಯನಾಗಿ ಬೆಳೆಸುವ, ಬದುಕು ಕಟ್ಟುವ ಶಿಕ್ಷಣಕ್ಕಾಗಿ ಕಲೆ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರವನ್ನು ನೆಚ್ಚಿಕೊಳ್ಳಬೇಕಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಬಿ ರಮಾನಾಥ ರೈ ಮಾತನಾಡಿ ಮಕ್ಕಳ ಮನಸ್ಸು ದೇವರಿಗೆ ಸಮಾನ. ದೇವ ಸಮಾನವಾದ ಮಕ್ಕಳ ವ್ಯಕ್ತಿತ್ವ ಬೆಳೆಸುವ ನಿಟ್ಟಿನಲ್ಲಿ ಚಿಣ್ಣರೋತ್ಸವ ಹಮ್ಮಿಕೊಂಡಿರುವುದು ಶ್ಲಾಘನೀಯ. ಮಕ್ಕಳ ನಿಷ್ಕಲ್ಮಶ ಮನಸ್ಸಿನಲ್ಲಿ ವಿಶ್ವ ಮಾನವೀಯತೆ ಬೆಳೆಸಲು ಇಂತಹ ಕಲಾ ಕಾರ್ಯಕ್ರಮಗಳು ಹೆಚ್ಚು ಅನುಕೂಲಕರ ಎಂದು ಅಭಿಪ್ರಾಯಪಟ್ಟರು. ತಾನೋರ್ವ ಯಕ್ಷಗಾನ ಪ್ರೇಮಿ, ನಾಟಕ ಪ್ರೇಮಿ, ಕಂಬಳ ಪ್ರಿಯ ಒಟ್ಟಿನಲ್ಲಿ ಕಲೆ, ಸಂಸ್ಕøತಿ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದು, ಓರ್ವ ಹವ್ಯಾಸಿ ಕಲಾವಿದ ಕೂಡಾ ಹೌದು ಎಂಬುದನ್ನು ಹಳೆಯ ನೆನಪುಗಳ ಮೆಲುಕು ಹಾಕುವ ಮೂಲಕ ಸಭೆಯಲ್ಲಿ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಜಗನ್ನಾಥ ಚೌಟ, ಚಂದ್ರಹಾಸ ಶೆಟ್ಟಿ ರಂಗೋಲಿ, ಉತ್ಸವ ಸಮಿತಿ ಅಧ್ಯಕ್ಷ ಸುದರ್ಶನ್ ಜೈನ್, ಗೌರವಾಧ್ಯಕ್ಷ ಪಿ ಜಯರಾಮ ರೈ, ಪುರಸಭಾ ಸದಸ್ಯೆ ಶೋಭಾವತಿ ಕಾಮಾಜೆ, ಚಿಣ್ಣರ ಅಧ್ಯಕ್ಷೆ ಕು ಭಾಗ್ಯಶ್ರೀ, ಪ್ರಮುಖರಾದ ಅಶೋಕ್ ಶೆಟ್ಟಿ ಸರಪಾಡಿ, ಪ್ರಕಾಶ್ ಶೆಟ್ಟಿ ಶ್ರೀ ಶೈಲ ತುಂಬೆ, ಎಚ್ಕೆ ನಯನಾಡು, ಮುಹಮ್ಮದ್ ನಂದಾವರ, ಲೋಕೇಶ್ ಸುವರ್ಣ ಮೊದಲಾದವರು ಭಾಗವಹಿಸಿದ್ದರು. ಇದೇ ವೇಳೆ ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದ ಬಾಲಕಿ ಕು ದಿಯಾ ರಾವ್ ಕುಂಬ್ಲೆ ಅವರಿಗೆ ಚಿಣ್ಣರ ಸೌರಭ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಚಿಣ್ಣರ ಲೋಕ ಸೇವಾ ಸಂಸ್ಥೆಯ ‘ಐಸಿರಿ’ ಕನ್ನಡ-ತುಳು ಆಲ್ಬಂ ಗೀತೆ ಬಿಡುಗಡೆಗೊಳಿಸಲಾಯಿತು. ಬಳಿಕ ಚಿಣ್ಣರ ಲೋಕ ಸಂಸ್ಥೆಯ ವಿದ್ಯಾರ್ಥಿಗಳಿಂದ ಸುದರ್ಶನ ವಿಜಯ ಯಕ್ಷಗಾನ ನಡೆಯಿತು. ಫೆ 25ರವರೆಗೆ ವಿವಿಧ ಕಲಾ ಸಾಂಸ್ಕೃತಿಕ ಕಾರ್ಯಕ್ರಮಗಳು, ವಸ್ತು ಪ್ರದರ್ಶನ ಹಾಗೂ ಅಮ್ಯೂಸ್ ಮೆಂಟ್ ಪಾರ್ಕ್ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿದೆ.
  • Blogger Comments
  • Facebook Comments

0 comments:

Post a Comment

Item Reviewed: ಶೈಕ್ಷಣಿಕ ಕ್ಷೇತ್ರಕ್ಕೆ ಮಾತ್ರ ಸೀಮಿತಗೊಂಡ ಕೊರೋನಾ ಕರಿ ಛಾಯೆ : ಡಾ ಮೋಹನ್ ಆಳ್ವ ತೀವ್ರ ವಿಷಾದ Rating: 5 Reviewed By: karavali Times
Scroll to Top