ಬಂಟ್ವಾಳ, ಜ. 08, 2021 (ಕರಾವಳಿ ಟೈಮ್ಸ್) : ರೈತ ವಿರೋಧಿ ಕೃಷಿ ಕಾಯಿದೆಗಳನ್ನು ಹಾಗೂ ಜನ ವಿರೋಧಿ ವಿದ್ಯುತ್ ಮಸೂದೆಯನ್ನು ಹಿಂಪಡೆಯಲು ಒತ್ತಾಯಿಸಿ ದೇಶದ ರೈತ ಸಮೂಹವು ನಡೆಸುತ್ತಿರುವ ಹೋರಾಟ ತೀವ್ರವಾಗುತ್ತಿರುವ ಹಿನ್ನಲೆಯಲ್ಲಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ರಾಷ್ಟ್ರಾದ್ಯಂತ ಪ್ರತಿಭಟನೆ ನಡೆಸುತ್ತಿರುವ ಭಾಗವಾಗಿ ಶುಕ್ರವಾರ ಬಿ ಸಿ ರೋಡಿನ ಮಿನಿ ವಿಧಾನಸೌಧ ಮುಂಭಾಗ ಸಿಐಟಿಯು ಬಂಟ್ವಾಳ ತಾಲೂಕು ಘಟಕದ ವತಿಯಿಂದ ಪ್ರತಿಭಟನೆ ನಡೆಸಿ ಬಂಟ್ವಾಳ ತಹಶೀಲ್ದಾರ್ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ರಾಮಣ್ಣ ವಿಟ್ಲ, ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ತನ್ನ ಹಠಮಾರಿ ಧೋರಣೆ ಮುಂದುವರಿಸಿದೆ. ಇದುವರೆಗೂ ಏಳು ಬಾರಿ ಮಾತುಕತೆಗಳನ್ನು ರೈತ ಸಂಘಟನೆಗಳ ಜೊತೆ ನಡೆಸಿದ್ದರೂ ಅದು ಮೂರು ಕೃಷಿ ಮುಸೂದೆಗಳನ್ನು ಮಾತ್ರ ವಾಪಸ್ಸು ಪಡೆಯಲು ಸಿದ್ಧವಿಲ್ಲ. ಇದರಿಂದ ಸ್ಪಷ್ಟವಾಗುವುದೇನೆಂದರೆ ಮೋದಿ ಸರಕಾರ ರೈತರ ಬೆಳೆಗೆ ಬೆಂಬಲ ಖಾತ್ರಿಯಾದ ಬೆಂಬಲ ಬೆಲೆ ಖಾತ್ರಿಗೊಳಿಸಲು ತಯಾರಿಲ್ಲ ಎನ್ನುವುದು. ಹೀಗಾಗಿ ಕೇಂದ್ರ ಸರಕಾರದ ಈ ಗೋಸುಂಬೆತನವನ್ನು ಚೆನ್ನಾಗಿ ಬಲ್ಲ ರೈತರು ತಮ್ಮ ದೇಶವ್ಯಾಪಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಿದ್ದಾರೆ. ಅನ್ನದಾತರ ಈ ಹೋರಾಟವನ್ನು ಸಿಐಟಿಯು ಸಂಪೂರ್ಣವಾಗಿ ಬೆಂಬಲಿಸಿತ್ತದೆ ಎಂದರು.
“ಕಾರ್ಮಿಕ ಹಕ್ಕುಗಳನ್ನು ಉಳಿಸುತ್ತೇವೆ, ರೈತರ ಬದುಕನ್ನು ರಕ್ಷಿಸುತ್ತೇವೆ- ಕಾರ್ಪೋರೇಟ್ ಹಿಡಿತದಿಂದ ದೇಶವನ್ನು ಕಾಪಾಡುತ್ತೇವೆ” ಎಂಬ ಪ್ರತಿಜ್ಞೆಯೊಂದಿಗೆ ನಡೆಯುತ್ತಿರುವ ಪ್ರತಿಭಟನೆಯ ನೇತೃತ್ವವನ್ನು ದೇಜಪ್ಪ ಪೂಜಾರಿ, ಲಿಯಾಖತ್ ಖಾನ್, ವಿನಯ ನಡುಮೊಗರು, ಉದಯ ಬಂಟ್ವಾಳ, ಜಯಂತಿ, ರಾಮ ಯಾನೆ ರವೀಂದ್ರ, ಶ್ರೀನಿವಾಸ ಮೂಲ್ಯ, ಜಯಂತಿ ಶಂಭೂರು, ಲೋಲಾಕ್ಷಿ ಬಂಟ್ವಾಳ ಮೊದಲಾದವರು ವಹಿಸಿದ್ದರು.
ಪ್ರತಿಭಟನಾಕಾರರು ಎಲ್ಲಾ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಬೇಕು, ಮೂರು ಕೃಷಿ ಕಾನೂನುಗಳನ್ನು ವಾಪಾಸ್ ಪಡೆಯಬೇಕು, ವಿದ್ಯುತ್ ಮಸೂದೆ 2020 ನ್ನು ಹಿಂಪಡೆಯಬೇಕು, ಎಲ್ಲಾ ರೀತಿಯ ಖಾಸಗೀಕರಣವನ್ನು ಕೂಡಲೇ ನಿಲ್ಲಿಸಬೇಕು, ಆದಾಯ ತೆರಿಗೆಯ ಮಿತಿಯಿಂದ ಹೊರಗಿರುವ ಎಲ್ಲಾ ಕುಟುಂಬಗಳಿಗೂ ಮಾಸಿಕ ರೂ 7,500/- ನಗದು ಹಣ ವರ್ಗಾವಣೆ ಮಾಡಬೇಕು, ಪ್ರತಿಯೊಬ್ಬರಿಗೂ ಪ್ರತಿ ತಿಂಗಳು 10 ಕೆಜಿ ಆಹಾರ ಧಾನ್ಯಗಳನ್ನು ಉಚಿತವಾಗಿ ನೀಡಬೇಕು, ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ವಾರ್ಷಿಕ 200 ದಿನಗಳ ಕೆಲಸ ಮತ್ತು ದಿನಕ್ಕೆ ರೂ. 700/- ವೇತನ ನೀಡಬೇಕು. ನಗರ ಪ್ರದೇಶಗಳಿಗೂ ಈ ಯೋಜನೆಯನ್ನು ವಿಸ್ತರಿಸಬೇಕು, ಹೊಸ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೆ ಪಿಂಚಣಿಯನ್ನು ಪುನಃ ಜಾರಿಗೆ ತರಬೇಕು, ಎಲ್ಲಾ ಅಸಂಘಟಿತ ಕಾರ್ಮಿಕರಿಗೂ ಸಾಮಾಜಿಕ ರಕ್ಷಣಾ ಯೋಜನೆಗಳನ್ನು ವಿಸ್ತರಿಸಬೇಕು, ಉಚಿತ ಸಾರ್ವತ್ರಿಕ ಆರೋಗ್ಯ ರಕ್ಷಣೆಯನ್ನು ಎಲ್ಲರಿಗೂ ಜಾರಿಗೊಳಿಸಬೇಕು ಇವೇ ಮೊದಲಾದವ ಬೇಡಿಕೆಗಳನ್ನು ಸರಕಾರದ ಮುಂದಿಟ್ಟರು.
0 comments:
Post a Comment