ಬೆಂಗಳೂರು, ಜ. 10, 2021 (ಕರಾವಳಿ ಟೈಮ್ಸ್) : ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಹುದ್ದೆಯ ಚುನಾವಣೆಗೆ ಒಂದೆರಡು ದಿನ ಮಾತ್ರ ಬಾಕಿ ಇರುತ್ತಲೇ ಕಾಂಗ್ರೆಸ್ ನಾಯಕರ ವಲಯದಲ್ಲಿ ಮಹತ್ವದ ಬೆಳವಣಿಗೆಗೆ ಚಾಲನೆ ನೀಡಲಾಗಿರುವ ಬಗ್ಗೆ ಮಾಹಿತಿಗಳು ಲಭ್ಯವಾಗುತ್ತಿದೆ.
ರಾಜ್ಯದ ಮಾಜಿ ಸಚಿವ ಬಿ ರಮಾನಾಥ ರೈ ಅವರ ಸ್ವ ಕ್ಷೇತ್ರ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಬ್ಲಾಕ್ ಮಟ್ಟದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಪಟ್ಟಕ್ಕೆ ಬಹಳಷ್ಟು ಮಂದಿ ಪ್ರಭಾವಿ ಆಕಾಂಕ್ಷಿಗಳಿದ್ದರೂ ಎಲ್ಲವನ್ನು ಚಾಣಾಕ್ಷತನದಿಂದ ನಿಭಾಯಿಸಿದ ರೈ ಅವರು ಕೊನೆಗೂ ಯಾವುದೇ ಜಂಘೀ ಕುಸ್ತಿಗೆ ಅವಕಾಶ ಕಲ್ಪಿಸದೆ ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಯುವ ಕಾಂಗ್ರೆಸ್ ಸಮಿತಿಗೆ ಇಬ್ಬರು ಉತ್ಸಾಹಿ ಯುವಕರನ್ನು ಅವಿರೋಧ ಅಯ್ಕೆಗೆ ವ್ಯವಸ್ಥೆಗೊಳಿಸುವ ಮೂಲಕ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರ ಮಧ್ಯೆ ಒಮ್ಮತ ಮೂಡಿಸುವಲ್ಲಿ ಸಫಲರಾಗಿದ್ದಾರೆ.
ಇದೀಗ ರಾಜ್ಯಮಟ್ಟದಲ್ಲೂ ಕೈ ನಾಯಕರು ರಮಾನಾಥ ರೈ ಹಾದಿಯೇ ಪಕ್ಷದಲ್ಲಿ ಜಂಜಾಟ ಇಲ್ಲವಾಗಿಸಿ ಒಮ್ಮತ ಮೂಡಿಸಲು ಸೈ ಎಂಬ ಚಿಂತನೆಗೆ ಬಂದಂತಿದೆ. ರಾಜ್ಯ ಯುವ ಕಾಂಗ್ರೆಸ್ ಪಟ್ಟಕ್ಕೆ ನಡೆಯುವ ಚುನಾವಣೆಯಲ್ಲೂ ಯುವ ನಾಯಕರಲ್ಲಿ ಒಮ್ಮತ ಮೂಡಿಸಿ ಅವಿರೋಧ ಆಯ್ಕೆ ಮಾಡಲಿದ್ದಾರೆಯೇ ಎಂಬ ಸುದ್ದಿ ಕೈ ಪಡಸಾಲೆಯಿಂದ ಕೇಳಿ ಬರುತ್ತಿದೆ. ಯುವ ರಾಜ್ಯಾಧ್ಯಕ್ಷ ಪಟ್ಟದ ಪ್ರಬಲ ಆಕಾಂಕ್ಷಿ ಮಿಥುನ್ ರೈ ಅವರು ಶನಿವಾರ ಹಠಾತ್ ಆಗಿ ಕಣದಿಂದ ನಿರ್ಗಮಿಸಿದ್ದು ಈ ಸುದ್ದಿಗೆ ಪುಷ್ಠಿ ನೀಡಿದೆ.
ಜನವರಿ 12 ರಂದು ನಡೆಯುವ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ರಕ್ಷಾ ರಾಮಯ್ಯ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಯ ಬಗ್ಗೆ ಮಾತುಗಳು ಕೇಳಿ ಬರುತ್ತಿದೆ.
ಜನವರಿ 12 ರಂದು ಆನ್ ಲೈನ್ ಚುನಾವಣೆ ನಡೆಸಬೇಕೆ ಅಥವಾ ಬೇಡವೇ ಎಂದು ಅಖಿಲ ಭಾರತ ಕಾಂಗ್ರೆಸ್ ಕಮಿಟಿ ತೀವ್ರ ಚರ್ಚೆ ನಡೆಸುತ್ತಿದ್ದು, ನಾಯಕರ ಮಧ್ಯೆ ಒಮ್ಮತ ಮೂಡಿದರೆ ಆನ್ ಲೈನ್ ಚುನಾವಣೆ ಕೊನೆ ಕ್ಷಣದಲ್ಲಿ ರದ್ದಾಗಿ ಅವಿರೋಧ ಆಯ್ಕೆ ಸಂಭವ ನಿಚ್ಚಳವಾಗಿದೆ ಎನ್ನಲಾಗುತ್ತಿದೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿದಂತೆ ಇತರೆ ಹಿರಿಯ ಕೈ ನಾಯಕರು ಹೆಚ್ಚುವರಿ ಅಭ್ಯರ್ಥಿಗಳ ನಾಮಪತ್ರ ವಾಪಸ್ ತೆಗೆದುಕೊಳ್ಳಲು ಮನವೊಲಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮೊಹಮದ್ ನಲಪಾಡ್, ಎಚ್ ಎಸ್ ಮಂಜುನಾಥ್ ಸ್ಪರ್ಧಿಸಲು ಮುಂದಾಗಿದ್ದಾರೆ. ಮಿಥುನ್ ರೈ ಈಗಾಗಲೇ ನಾಮಪತ್ರ ವಾಪಸ್ ಪಡೆದಿದ್ದಾರೆ.
2018 ರ ವಿಧಾನ ಸಭೆ ಚುನಾವಣೆಯಲ್ಲಿ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದ ಎನ್ ಎಸ್ ಯು ಐ ಅಧ್ಯಕ್ಷ ಎಚ್ ಎಸ್ ಮಂಜುನಾಥ ಗೌಡ ಅವರ ಪರವಾಗಿ ಪಕ್ಷದ
ನಾಯಕರು ಒಲವು ತೋರುತ್ತಿಲ್ಲ. ನಲಪಾಡ್ ಹ್ಯಾರಿಸ್ ಬಗ್ಗೆ ಪಕ್ಷದ ಹೈ ಕಮಾಂಡ್ ಅನುಮೋದನೆ ನೀಡಿಲ್ಲ.
ತಮ್ಮ ನಾಮಪತ್ರ ವಾಪಸ್ ಪಡೆಯುವುದಾಗಿ ಮಿಥುನ್ ರೈ ಫೇಸ್ ಬುಕ್ ನಲ್ಲಿ ಬರೆದು ಕೊಂಡಿದ್ದಾರೆ. 2023ರ ವಿಧಾನ ಸಭೆ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. 35 ವರ್ಷದ ರಕ್ಷ ರಾಮಯ್ಯ ಕಾಂಗ್ರೆಸ್ ಹಿರಿಯ ನಾಯಕ ಎಂ ಆರ್ ಸೀತಾರಾಮ್ ಪುತ್ರರಾಗಿದ್ದು ಪಕ್ಷದ ನಾಯಕರು ಇವರ ಅವಿರೋಧ ಆಯ್ಕೆಗೆ ಒಲವು ತೋರುತ್ತಿದ್ದಾರೆ ಎನ್ನಲಾಗುತ್ತಿದೆ. ಯಾವುದಕ್ಕೂ ಭಾನುವಾರ ಸಂಜೆ ಅಥವಾ ಸೋಮವಾರ ಬೆಳಿಗ್ಗೆ ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.
9 January 2021
- Blogger Comments
- Facebook Comments
Subscribe to:
Post Comments (Atom)
0 comments:
Post a Comment