ಬ್ರಿಸ್ಬೇನ್, ಜ. 19, 2021 (ಕರಾವಳಿ ಟೈಮ್ಸ್) : ಇಲ್ಲಿನ ಗಾಬ್ಬಾ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ದದ 4ನೇ ಮತ್ತು ಅಂತಿಮ ಟೆಸ್ಟ್ ಪಂದ್ಯ ಅಂತಿಮ ದಿನದಾಟದಲ್ಲಿ ಪ್ರವಾಸಿ ಭಾರತ ತಂಡ ಅತಿಥೇಯ ಆಸ್ಟ್ರೇಲಿಯಾ ತಂಡವನ್ನು ರೋಮಾಂಚಕ 3 ವಿಕೆಟ್‍ಗಳಿಂದ ಪರಾಭವಗೊಳಿಸಿ ಟೆಸ್ಟ್ ಸರಣಿಯನ್ನು 2-1 ಅಂತರದಲ್ಲಿ ತನ್ನದಾಗಿಸಿಕೊಂಡಿತು.
ಆಸ್ಟ್ರೇಲಿಯಾ ನೀಡಿದ್ದ 328 ರನ್‍ಗಳ ಸವಾಲಿನ ಗುರಿಯನ್ನು ಭಾರತ ತಂಡ 7 ವಿಕೆಟ್ ಕಳೆದುಕೊಂಡು ಮೆಟ್ಟಿ ನಿಲ್ಲುವ ಮೂಲಕ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲೂ ಟೀಂ ಇಂಡಿಯ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಗೆದ್ದುಕೊಂಡಿತು.
ಶುಭಮನ್ ಗಿಲ್-ಚೇತೇಶ್ವರ ಪೂಜಾರ ಜೋಡಿ ಶತಕದ ಜೊತೆಯಾಟ ಪಂದ್ಯದ ಪ್ರಮುಖ ಹೈಲೈಟ್ಸ್ ಆಗಿದೆ. ಗಿಲ್ (91) ಶತಕದ ಅಂಚಿನಲ್ಲಿ ಎಡವಿದರಾದರೂ ಪಂದ್ಯ ಹಾಗೂ ಸರಣಿ ಜಯಿಸಿದ ತೃಪ್ತಿ ಅನುಭವಿಸಿದರು. ನಾಯಕ ಅಜಿಂಕ್ಯಾ ರಹಾನೆ (24 ರನ್), ಪೂಜಾರ (56 ರನ್), ಮಯಾಂಕ್ ಅಗರ್ವಾಲ್ (9 ರನ್) ತಂಡಕ್ಕೆ ಅಮೂಲ್ಯ ಕೊಡುಗೆ ನೀಡಿದರು. ಡ್ರಾದತ್ತ ಸಾಗಿದ್ದ ಪಂದ್ಯದಲ್ಲಿ ರಿಷಬ್ ಪಂತ್ 138 ಎಸೆತಗಳಲ್ಲಿ 9 ಬೌಂಡರಿ ಹಾಗೂ ಒಂದು ಸಿಕ್ಸರ್ ಒಳಗೊಂಡ ಅಜೇಯ 89 ರನ್ ಗಳಿಸಿ ಭಾರತವನ್ನು ಗೆಲುವಿನ ದಡ ಸೇರಿಸಿದರು. ವಾಷಿಂಗ್ಟನ್ ಸುಂದರ್ (22 ರನ್) ಪಂತ್‍ಗೆ ಸೂಕ್ತ ಬೆಂಬಲ ನೀಡಿದರು.
ಆ ಮೂಲಕ ಕಳೆದ ಮೂರು ದಶಕಗಳಿಂದ ಅಬೇಧ್ಯವಾಗಿದ್ದ ಗಾಬಾ ಮೈದಾನದಲ್ಲಿ ಆಸ್ಟ್ರೇಲಿಯನ್ನರಿಗೆ ಟೀಂ ಇಂಡಿಯಾ ಯುವಕರು ಮರೆಯಲಾಗದ ಸೋಲುಣಿಸಿದರು.
19 January 2021
- Blogger Comments
- Facebook Comments
Subscribe to:
Post Comments (Atom)
0 comments:
Post a Comment