ಬೆಂಗಳೂರು, ಜ. 26, 2021 (ಕರಾವಳಿ ಟೈಮ್ಸ್) : ಅರವಿಂದ ಕೇಜ್ರಿವಾಲ್ ಆಡಳಿತದಲ್ಲಿ ಕೈಗೊಂಡ ಅಭಿವೃದ್ದಿ ಹಾಗೂ ಜನಪರ ಕಾರ್ಯಗಳಾದ ಮೊಹಲ್ಲಾ ಕ್ಲಿನಿಕ್, ಸರಕಾರಿ ಶಾಲೆಗಳ ಸೌಲಭ್ಯ ಮೊದಲಾದವುಗಳನ್ನು ನೋಡಿ ನಾನು ಆಶ್ಚರ್ಯಗೊಂಡಿದ್ದೆ. ಅರವಿಂದ್ ಕೇಜ್ರಿವಾಲ್ ಅವರ ಕ್ರಾಂತಿಕಾರಕ ಬದಲಾವಣೆಗಳನ್ನು ನೋಡಿ ಅವರ ದೊಡ್ಡ ಅಭಿಮಾನಿಯಾದೆ ಎಂದು ಕರ್ನಾಟಕ ಮಾಜಿ ಸ್ಪೀಕರ್, ಶಾಸಕ ರಮೇಶ್ ಕುಮಾರ್ ಕೊಂಡಾಡಿದ್ದಾರೆ.
ಬೆಂಗಳೂರು-ಶಾಂತಿನಗರದ ಬಸಪ್ಪ ರಸ್ತೆಯಲ್ಲಿರುವ ಆಮ್ ಆದ್ಮಿ ಕ್ಲಿನಿಕ್ ಕಾರ್ಯವೈಖರಿ ವೀಕ್ಷಿಸಿದ ಬಳಿಕ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಅರವಿಂದ್ ಕೇಜ್ರಿವಾಲ್ ಅವರಿಗೆ ದೆಹಲಿ ಜನತೆ ಒಂದೇ ಒಂದು ಬಾರಿ ಅವಕಾಶ ಕೊಟ್ಟರು. ಈ ಅವಕಾಶವನ್ನು ಅವರು ಜನಪರ ಸೇವೆ ಮಾಡುವುದಕ್ಕೆ ಬಳಸಿಕೊಂಡರು. ಕೇಜ್ರಿವಾಲ್ ಅವರು ಬದಲಾವಣೆ ತಂದಿರುವ ಆರೋಗ್ಯ, ಶಿಕ್ಷಣ, ಉಚಿತ ನೀರು, ವಿದ್ಯುತ್, ಅಗತ್ಯ ಮೂಲ ಸೌಕರ್ಯಗಳು ಎಲ್ಲಾ ರಾಜ್ಯಗಳಲ್ಲೂ ಆದ್ಯತೆ ಮೇರೆಗೆ ಆಗಬೇಕು ಎಂದರು.
ಇದೇ ವೇಳೆ ಆಮ್ ಆದ್ಮಿ ಪಕ್ಷ ಸೇರುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ರಮೇಶ್ ಕುಮಾರ್, ನಾನೂ ಒಬ್ಬ ಆಮ್ ಆದ್ಮಿ ಅಂದರೆ ಜನ ಸಾಮಾನ್ಯ. ಜನ ಸಾಮಾನ್ಯರಿಗೆ ಯಾರು ಒಳ್ಳೆಯದನ್ನು ಮಾಡುತ್ತಾರೋ ಅವರ ಜೊತೆ ನಾನು ಸದಾ ಇರುತ್ತೇನೆ ಎಂದು ಸಾಂದರ್ಭಿಕವಾಗಿ ಉತ್ತರಿಸಿದರು.
ಬೆಂಗಳೂರಿನ ಶಾಂತಿನಗರದಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಸೇರಿ ಪ್ರಾರಂಭಿಸಿರುವ ಈ ದೆಹಲಿ ಮಾದರಿಯ ಮೊಹಲ್ಲಾ ಕ್ಲಿನಿಕ್ ಮಾದರಿ ನೋಡಿ ನನಗೆ ಅಪಾರ ಸಂತೋಷವಾಗಿದೆ. ಯಾವುದೇ ರೀತಿಯ ಅಂತಸ್ತು, ಆದಾಯ, ಜಾತಿ ಕೇಳದೆ ಎಲ್ಲರಿಗೂ ಈ ಸೌಲಭ್ಯ ವಿಸ್ತರಿಸಿರುವುದು ಅತ್ಯಂತ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ರಮೇಶ್ ಕುಮಾರ್ ಕೊರೋನಾ ಸಂಕಷ್ಟದ ನಂತರ ಸಣ್ಣ ಪುಟ್ಟ ಖಾಯಿಲೆಗಳಿಗೂ ಮಾತ್ರೆ ತೆಗೆದುಕೊಳ್ಳಲು ಜನಸಾಮಾನ್ಯ ಕಷ್ಟಪಡುತ್ತಿದ್ದಾನೆ. ಆಮ್ ಆದ್ಮಿ ಕ್ಲಿನಿಕ್ ಒಳಗೆ ಬಂದರೆ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳೇ ಇದ್ದಾರೆ, ಇವರೆಲ್ಲ ಮನೆಗೆಲಸಕ್ಕೆ ಹೋಗುವಂತಹ ಹೆಣ್ಣುಮಕ್ಕಳು. ಇಂತಹ ಕಟ್ಟ ಕಡೆಯ ಜನರ ಸೇವೆಗೆ ನಿಂತಿರುವ ಆಮ್ ಆದ್ಮಿಗಳಿಗೆ ಅಭಿನಂದನೆಗಳು ಎಂದರು. ಬಳಿಕ ಆಮ್ ಆದ್ಮಿ ಕ್ಲಿನಿಕ್‍ಗೆ ಬಂದ ರೋಗಿಗಳ ಕುಶಲೋಪರಿ ವಿಚಾರಿಸಿದರು.
ಈ ಸಂದರ್ಭ ಎಎಪಿ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ, ರಾಜ್ಯ ಕಾರ್ಯದರ್ಶಿ ಸಂಚಿತ್ ಸಹಾನಿ, ಜಂಟಿ ಕಾರ್ಯದರ್ಶಿ ದರ್ಶನ್, ಮುಖ್ಯ ವಕ್ತಾರ ಶರತ್ ಖಾದ್ರಿ, ಉಪಾಧ್ಯಕ್ಷ ಸುರೇಶ್ ರಾಥೋಡ್, ಪ್ರಮುಖರಾದ ಗೋಪಾಲ್ ರೆಡ್ಡಿ, ಹರಿಹರನ್, ರೇಣುಕಾ ವಿಶ್ವನಾಥನ್ ಮೊದಲಾದವರು ಜೊತೆಗಿದ್ದರು.
26 January 2021
- Blogger Comments
- Facebook Comments
Subscribe to:
Post Comments (Atom)
0 comments:
Post a Comment