ಕ್ಷಿಪ್ರ ಕಾರ್ಯಾಚರಣೆ ಪಡೆ ಘಟಕ ಶಿವಮೊಗ್ಗಕ್ಕೆ ಸ್ಥಳಾಂತರ ಸಂಸದ ಕಟೀಲ್ ವೈಫಲ್ಯ‌ದ ಕೈಗನ್ನಡಿ : ಮುನೀರ್ ಕಾಟಿಪಳ್ಳ ಆಕ್ರೋಶ - Karavali Times ಕ್ಷಿಪ್ರ ಕಾರ್ಯಾಚರಣೆ ಪಡೆ ಘಟಕ ಶಿವಮೊಗ್ಗಕ್ಕೆ ಸ್ಥಳಾಂತರ ಸಂಸದ ಕಟೀಲ್ ವೈಫಲ್ಯ‌ದ ಕೈಗನ್ನಡಿ : ಮುನೀರ್ ಕಾಟಿಪಳ್ಳ ಆಕ್ರೋಶ - Karavali Times

728x90

17 January 2021

ಕ್ಷಿಪ್ರ ಕಾರ್ಯಾಚರಣೆ ಪಡೆ ಘಟಕ ಶಿವಮೊಗ್ಗಕ್ಕೆ ಸ್ಥಳಾಂತರ ಸಂಸದ ಕಟೀಲ್ ವೈಫಲ್ಯ‌ದ ಕೈಗನ್ನಡಿ : ಮುನೀರ್ ಕಾಟಿಪಳ್ಳ ಆಕ್ರೋಶ

ಮಂಗಳೂರು, ಜ.17, 2021 (ಕರಾವಳಿ ಟೈಮ್ಸ್) : ನಗರದ ಹೊರವಲಯದ ಬಡಗ ಎಕ್ಕಾರಿನಲ್ಲಿ ನಿರ್ಮಾಣಗೊಳ್ಳಬೇಕಿದ್ದ, ಗಲಭೆಗಳನ್ನು ನಿಯಂತ್ರಿಸುವುದರಲ್ಲಿ ಮಹತ್ವದ ಪಾತ್ರ ವಹಿಸುವ ಕ್ಷಿಪ್ರ ಕಾರ್ಯಾಚರಣೆ ಪಡೆ (ಆರ್. ಎ.ಎಫ್.) ಘಟಕ ಯಾರ ಅರಿವಿಗೂ ಬಾರದಂತೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಗೆ ಸ್ಥಳಾಂತರಗೊಂಡಿರುವುದು ದ.ಕ. ಜಿಲ್ಲೆಗೆ ಆಗಿರುವ ಅನ್ಯಾಯ. ಇದು ಸಂಸದ ನಳಿನ್ ಕುಮಾರ್ ಕಟೀಲ್ ಅವರ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಸಂಸದರು ಈ ವೈಫಲ್ಯದ ಹೊಣೆ ಹೊತ್ತು ಜಿಲ್ಲೆಯ ಜನತೆಯ ಕ್ಷಮೆ ಕೋರಬೇಕು ಮತ್ತು ವಿವರಣೆ ನೀಡಬೇಕು ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕ್ಷಿಪ್ರ ಕಾರ್ಯಾಚರಣೆ ಪಡೆಯ ಘಟಕ ಕೋಮು ಸೂಕ್ಷ್ಮ ಪ್ರದೇಶವಾಗಿರುವ ದ.ಕ. ಜಿಲ್ಲೆಯಲ್ಲಿ ಅತೀ ಅಗತ್ಯವಾಗಿತ್ತು. ಸದಾ ಮತೀಯ ಉದ್ವಿಗ್ನತೆ ತಲೆದೋರುವ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ಮಂಗಳೂರು ಕೇಂದ್ರ ಭಾಗವಾಗಿದೆ. ಕ್ಷಿಪ್ರ ಕಾರ್ಯಾಚರಣೆ ಪಡೆಯ ಘಟಕ ಮಂಗಳೂರಿನಲ್ಲಿ ಸ್ಥಾಪನೆಗೊಂಡರೆ ಅದು ವಿಮಾನ ನಿಲ್ದಾಣ ಸಹಿತ ಸಾರಿಗೆ ಸಂಪರ್ಕದ ಸೌಲಭ್ಯದಿಂದಾಗಿ ದೂರದ ಜಿಲ್ಲೆಗಳಿಗೂ ತಲುಪಲು ಅನುಕೂಲಕರವಾಗಿತ್ತು. ದ.ಕ. ಜಿಲ್ಲೆಯಲ್ಲಂತೂ ಈ ಘಟಕದ ಕಾರ್ಯಾಚರಣೆಯು ಹಲವು ಹಿಂಸಾಚಾರಗಳಿಗೆ ಕಡಿವಾಣ ಹಾಕುವ ನೈತಿಕ ಶಕ್ತಿಯನ್ನು ಒದಗಿಸುತ್ತಿತ್ತು. ಆ ಹಿನ್ನಲೆಯಲ್ಲಿಯೇ ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಮಂಗಳೂರು ತಾಲೂಕಿನ ಬಡಗ ಎಕ್ಕಾರು ಗ್ರಾಮದಲ್ಲಿ ಐವತ್ತು ಎಕರೆ ಸ್ಥಳವನ್ನು ಗುರುತಿಸಿ ಕ್ಷಿಪ್ರ ಕಾರ್ಯಾಚರಣೆ ಪಡೆ ಘಟಕಕ್ಕಾಗಿ ಕಾದಿರಿಸಲಾಗಿತ್ತು. ಹೆಚ್ಚುವರಿ ಭೂಮಿ ಅಗತ್ಯ ಬಿದ್ದಲ್ಲಿ ಒದಗಿಸುವ ಸಿದ್ಧತೆಗಳನ್ನು ಮಾಡಲಾಗಿತ್ತು. ಈಗ ಏಕಾಏಕಿ ಯಾವ ಚರ್ಚೆಗಳೂ ಇಲ್ಲದೆ, ಜಿಲ್ಲೆಯ ಜನರನ್ನು ಕತ್ತಲಲ್ಲಿಟ್ಟು ಕ್ಷಿಪ್ರ ಕಾರ್ಯಾಚರಣೆ ಪಡೆಯ ಘಟಕವನ್ನು ಯಾವ ರೀತಿಯಿಂದಲೂ ಸೂಕ್ತವಲ್ಲದ ಭದ್ರಾವತಿಗೆ ರಾತ್ರೋರಾತ್ರಿ ಸ್ಥಳಾಂತರಿಸಿ ಶಿಲಾನ್ಯಾಸ ನೆರವೇರಿಸಲಾಗಿದೆ. ಇದು ಸದಾ ಕೋಮು ಉದ್ವಿಗ್ನತೆಯಿಂದ ಕೂಡಿರುವ ದ.ಕ. ಜಿಲ್ಲೆಗೆ ಆಗಿರುವ ಅನ್ಯಾಯವಾಗಿದೆ ಎಂದು ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ. ಈ ಕತ್ತಲ ಕಾರ್ಯಾಚರಣೆಗೆ ಉದ್ರೇಕಕಾರಿ ಭಾಷಣಗಳಿಗೆ ಪ್ರಸಿದ್ಧರಾದ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲರ ಅಸಮರ್ಥತೆಯೇ ನೇರ ಕಾರಣವಾಗಿದೆ. ಜಿಲ್ಲೆಗೆ ಮಾರಕವಾದ ಹಲವು ಮಾಲಿನ್ಯಕಾರಿ ಯೋಜನೆಗಳನ್ನು ಮಂಗಳೂರಿಗೆ ಡಂಪ್ ಮಾಡಲು ಅವಕಾಶ ನೀಡುವ ಸಂಸದರು, ಜನೋಪಯೋಗಿ ಯೋಜನೆಗಳು ಕೈತಪ್ಪುವಾಗ ಧ್ವನಿ ಎತ್ತದೆ ಜಿಲ್ಲೆಗೆ ಸತತ ಅನ್ಯಾಯವಾಗಲು ಕಾರಣರಾಗಿದ್ದಾರೆ. ಈ ಹಿಂದೆ ಕರಾವಳಿಯ ಬ್ಯಾಂಕುಗಳು ಉತ್ತರ ಭಾರತದ ಬ್ಯಾಂಕುಗಳೊಂದಿಗೆ ವಿಲೀನ, ಮಂಗಳೂರು ವಿಮಾನ ನಿಲ್ದಾಣ ಅದಾನಿ ಕಂಪೆನಿಗೆ ಹಸ್ತಾಂತರ, ಇದೀಗ ಕ್ಷಿಪ್ರ ಕಾರ್ಯಾಚರಣೆ ಪಡೆಯ ಘಟಕ ಸ್ಥಳಾಂತರ ಸಂಸದರ ವೈಫಲ್ಯಗಳ ಪಟ್ಟಿಯನ್ನು ವೃದ್ಧಿಸುತ್ತಿದೆ ಎಂದು ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಕ್ಷಿಪ್ರ ಕಾರ್ಯಾಚರಣೆ ಪಡೆ ಘಟಕ ಶಿವಮೊಗ್ಗಕ್ಕೆ ಸ್ಥಳಾಂತರ ಸಂಸದ ಕಟೀಲ್ ವೈಫಲ್ಯ‌ದ ಕೈಗನ್ನಡಿ : ಮುನೀರ್ ಕಾಟಿಪಳ್ಳ ಆಕ್ರೋಶ Rating: 5 Reviewed By: karavali Times
Scroll to Top