ಬೆಂಗಳೂರು, ಜ. 26, 2021 (ಕರಾವಳಿ ಟೈಮ್ಸ್) : ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾ ವತಿಯಿಂದ ಮತೀಯ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನೀಡಲ್ಪಡುವ ಪ್ರಿಮೆಟ್ರಿಕ್, ಪೋಸ್ಟ್ ಮೆಟ್ರಿಕ್ ಹಾಗೂ ಮೆರಿಟ್ ಕಂ ಮೀನ್ಸ್ ಸ್ಕಾಲರ್ ಶಿಪ್ ಮತ್ತು ಅರಿವು ಯೋಜನೆಯ ಶೈಕ್ಷಣಿಕ ಸಾಲದ ಮೊತ್ತಗಳು ವಿದ್ಯಾರ್ಥಿಗಳಗೆ ಸಮರ್ಪಕವಾಗಿ ದೊರೆಯದ ಹಿನ್ನಲೆಯಲ್ಲಿ ವಿದ್ಯಾರ್ಥಿ ಸಮೂಹ ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಈ ಮಧ್ಯೆ ಸಚಿವರುಗಳು ಹಾಗೂ ಇಲಾಖಾಧಿಕಾರಿಗಳ ಮಧ್ಯೆ ಹೊಂದಾಣಿಕೆಯೂ ಇಲ್ಲದಂತಾಗಿದ್ದು, ಇದು ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಸೂಕ್ತ ಉತ್ತರವನ್ನೂ ಸಿಗದಂತಹ ಪರಿಸ್ಥಿತಿ ನಿರ್ಮಾಣ ಮಾಡಿ ಹಾಕಿದೆ.
ಕಳೆದೆರಡು ವರ್ಷಗಳ ವಿದ್ಯಾರ್ಥಿ ವೇತನ ಮೊತ್ತಗಳೇ ಇನ್ನೂ ವಿದ್ಯಾರ್ಥಿಗಳ ಖಾತೆಗೆ ಜಮೆಯಾಗದೆ ಇದ್ದು, ಇದೀಗ ಈ ಬಾರಿಯ ವಿದ್ಯಾರ್ಥಿ ವೇತನ ಸವಲತ್ತಿಗಾಗಿ ಅರ್ಜಿ ಆಹ್ವಾನಿಸಿ ಅದರ ಅಂತಿಮ ದಿನಾಂಕವೂ ಮುಕ್ತಾಯ ಕಂಡಿದೆ. ಕೊರೋನಾ ಶೈಕ್ಷಣಿಕ ವರ್ಷವಾಗಿರುವ ಹಿನ್ನಲೆಯಲ್ಲಿ ವಿದ್ಯಾರ್ಥಿಗಳ ಬೇಡಿಕೆಗೆ ತಕ್ಕಂತೆ ಕಾಲಾವಕಾಶ ವಿಸ್ತರಿಸಿ ನೀಡದೆ ಇರುವ ಪರಿಣಾಮ ಶಾಲಾ-ಕಾಲೇಜು ತೆರೆಯದೆ ಇದ್ದು, ಅಂಕಪಟ್ಟಿ, ಶುಲ್ಕ ರಶೀದಿಗಳನ್ನು ಪಡೆಯಲಾಗದೆ ಹಲವು ಮಂದಿ ವಿದ್ಯಾರ್ಥಿಗಳು ನಿಗದಿತ ದಿನಾಂಕದೊಳಗೆ ಸ್ಕಾಲರ್‍ಶಿಪ್‍ಗಾಗಿ ಅರ್ಜಿ ಸಲ್ಲಿಸಲು ಸಾಧ್ಯವಾಗದೆ ಪರಿತಪಿಸುವಂತಾಗಿದೆ.
ಈ ಮಧ್ಯೆ ಈ ಬಾರಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಅರ್ಜಿಗಳು ಸಮಪರ್ಕವಾಗಿದ್ದು, ಶಾಲಾ-ಕಾಲೇಜುಗಳು ಪರಿಶೀಲನೆ ನಡೆಸಿ ಮುಂದಿನ ಹಂತಕ್ಕೆ ರವಾನಿಸಿದ್ದರೂ ಇದೀಗ ರಾಜ್ಯ ನೋಡಲ್ ಅಧಿಕಾರಿಗಳು ಇಂತಹ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಅರ್ಜಿಗಳನ್ನು ಮತ್ತೆ ಶಾಲಾ-ಕಾಲೇಜುಗಳ ಲಾಗಿನ್‍ಗೆ ಮರು ರವಾನಿಸಿದ್ದಾರೆ. ಅರ್ಜಿಗಳನ್ನು ಮರು ಪರಿಶೀಲನೆ ನಡೆಸಿ ಫೆ. 5ರೊಳಗೆ ರಾಜ್ಯ ನೋಡಲ್ ಅಧಿಕಾರಿಗಳಿಗೆ ರವಾನಿಸುವಂತೆ ಸೂಚಿಸಿ ವಿನಾ ಕಾರಣ ವಿದ್ಯಾರ್ಥಿ ವೇತನ ಅರ್ಜಿಗಳ ವಿಲೇವಾರಿ ವಿಳಂಬ ಮಾಡಲಾಗುತ್ತಿದೆ ಎಂಬ ಆರೋಪ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಾಲಾ-ಕಾಲೇಜು ಮುಖ್ಯಸ್ಥರಿಂದ ಕೇಳಿ ಬರುತ್ತಿದೆ.
ಈ ಬಗ್ಗೆ ಸಂಬಂಧಪಟ್ಟ ಇಲಾಖಾ ಜಿಲ್ಲಾ ಅಧಿಕಾರಿಗಳಲ್ಲಿ ಪ್ರತಿಕ್ರಿಯೆ ಕೇಳಿದರೆ ಅಧಿಕಾರಿಗಳು ಅಸಹಾಯಕತೆ ಪ್ರದರ್ಶಿಸುತ್ತಿದ್ದಾರೆ. ರಾಜ್ಯ ನೋಡಲ್ ಅಧಿಕಾರಿಗಳು ಯಾವ ಕಾರಣಕ್ಕಾಗಿ ಈ ರೀತಿಯ ಮರು ರವಾನೆ ಕ್ರಮ ಕೈಗೊಂಡಿದ್ದಾರೆ ಎಂಬುದು ಸ್ವತಃ ಜಿಲ್ಲಾ ಮಟ್ಟದ ಅಧಿಕಾರಿಗಳಿಗೇ ಗೊತ್ತಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಬಾರಿಯ ವಿದ್ಯಾರ್ಥಿ ವೇತನ ಮೊತ್ತ ಬಾಕಿ ಇರುವ ಬಗ್ಗೆ ಅಧಿಕಾರಿಗಳಲ್ಲಿ ಕೇಳಿದರೆ ಸರಕಾರ ಸಾಕಷ್ಟು ಹಣದ ಮಂಜೂರಾತಿ ನೀಡುತ್ತಿಲ್ಲ ಎಂದು ಉತ್ತರಿಸುತ್ತಿದ್ದಾರೆ. ಸರಕಾರ ಅನುದಾನ ಕಡಿತ ಮಾಡಿದ ಪರಿಣಾಮ ಈ ಬಾರಿಯ ಅರಿವು ಶೈಕ್ಷಣಿಕ ಸಾಲದ ಅರ್ಜಿಯನ್ನೂ ಆಹ್ವಾನಿಸಿಲ್ಲ. ಇದರಿಂದ ಇದನ್ನೇ ನಂಬಿಕೊಂಡು ವಿದ್ಯಾಭ್ಯಾಸ ಮುಂದುವರಿಸಲು ಅಪೇಕ್ಷಿಸುವ ಸಹಸ್ರಾರು ಸಂಖ್ಯೆಯ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕೇ ಡೋಲಾಯಮಾನದ ಹಂತದಲ್ಲಿದೆ.
ಈ ಬಗ್ಗೆ ಶಾಸಕರು, ಸಂಸದರಾದಿಯಾಗಿ ಜನಪ್ರತಿನಿಧಿಗಳಲ್ಲಿ ವಿಚಾರಿಸಿದರೆ ಯಾರೂ ಕೂಡಾ ತುಟಿಪಿಟಕ್ಕೆನ್ನುತ್ತಿಲ್ಲ ಎಂದು ವಿದ್ಯಾರ್ಥಿ ಸಮೂಹ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತಕ್ಷಣ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ವಿದ್ಯಾರ್ಥಿಗಳ ಹಿತ ಕಾಯದೆ ಇದ್ದಲ್ಲಿ ವಿದ್ಯಾರ್ಥಿ ಸಮೂಹ ಕೂಡಾ ಅನ್ನದಾತರ ಹಾದಿಯನ್ನೇ ತುಳಿಯುವ ಮೂಲಕ ತಮ್ಮ ನ್ಯಾಯೋಚಿತ ಹಕ್ಕುಗಳಿಗಾಗಿ ಉಗ್ರ ಹೋರಾಟಕ್ಕೆ ಇಳಿಯುವುದು ಅನಿವಾರ್ಯವಾಗಲಿದೆ ಎಂದು ವಿದ್ಯಾರ್ಥಿಗಳು ಸರಕಾರಕ್ಕೆ ಎಚ್ಚರಿಸಿದ್ದಾರೆ.
26 January 2021
- Blogger Comments
- Facebook Comments
Subscribe to:
Post Comments (Atom)
0 comments:
Post a Comment