ಗುತ್ತಿಗೆದಾರರ ಸಂಕಷ್ಟಕ್ಕೆ ಸ್ಪಂದಿಸಿ, ತಪ್ಪಿದಲ್ಲಿ ಹೋರಾಟ ಎದುರಿಸಿ : ಸರಕಾರಕ್ಕೆ ಗುತ್ತಿಗೆದಾರರ ಸಂಘದ ಎಚ್ಚರಿಕೆ - Karavali Times ಗುತ್ತಿಗೆದಾರರ ಸಂಕಷ್ಟಕ್ಕೆ ಸ್ಪಂದಿಸಿ, ತಪ್ಪಿದಲ್ಲಿ ಹೋರಾಟ ಎದುರಿಸಿ : ಸರಕಾರಕ್ಕೆ ಗುತ್ತಿಗೆದಾರರ ಸಂಘದ ಎಚ್ಚರಿಕೆ - Karavali Times

728x90

20 January 2021

ಗುತ್ತಿಗೆದಾರರ ಸಂಕಷ್ಟಕ್ಕೆ ಸ್ಪಂದಿಸಿ, ತಪ್ಪಿದಲ್ಲಿ ಹೋರಾಟ ಎದುರಿಸಿ : ಸರಕಾರಕ್ಕೆ ಗುತ್ತಿಗೆದಾರರ ಸಂಘದ ಎಚ್ಚರಿಕೆ

ಬೆಂಗಳೂರು, ಜ 21, 2021 (ಕರಾವಳಿ ಟೈಮ್ಸ್) : ಕೋವಿಡ್-19 ಸಂಕಷ್ಟ ರಾಜ್ಯದಲ್ಲಿ ಆವರಿಸಿದ ನಂತರ ರಾಜ್ಯ ಸರಕಾರವು ನಮ್ಮೆಲ್ಲಾ ವಹಿವಾಟುಗಳಿಗೆ ತಾತ್ಕಾಲಿಕವಾಗಿ ಕೆಲವು ತಿಂಗಳುಗಳಿಂದ ಹಲವಾರು ನಿರ್ಬಂಧಗಳನ್ನು ಹೇರಿದೆ. ಇದರ ಪರಿಣಾಮ ರಾಜ್ಯದ ಒಂದು ಲಕ್ಷಕ್ಕೂ ಅಧಿಕ ನೋಂದಾಯಿತ ಗುತ್ತಿಗೆದಾರರು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ವಿವಿಧ ಸರಕಾರಿ ಇಲಾಖೆಗಳಲ್ಲಿ ಗುತ್ತಿಗೆದಾರರಿಗೆ ಬಾಕಿ ಉಳಿದಿರುವ ಬಿಲ್ಲುಗಳಿಗೆ ಹಣ ಬಿಡುಗಡೆ ಮಾಡುವುದು ಹಾಗೂ ಪ್ಯಾಕೇಜ್ ಪದ್ದತಿಯ ಅಡಿಯಲ್ಲಿ ಟೆಂಡರ್ ಕರೆಯುವುದನ್ನು ರದ್ದುಪಡಿಸುವಂತೆ ಹಲವಾರು ಬಾರಿ ಮುಖ್ಯಮಂತ್ರಿಯಾದಿಯಾಗಿ ಸಚಿವರುಗಳಿಗೆ ಹಾಗೂ ಉನ್ನತಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಉಪಯೋಗವಾಗಿಲ್ಲ. ನಮ್ಮ ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದಿಸದೇ ಇದ್ದಲ್ಲಿ ರಾಜ್ಯದ ಗುತ್ತಿಗೆದಾರರು ತೀವ್ರ ಸಂಕಷ್ಟಕ್ಕೆ ಈಡಾಗಲಿದ್ದು, ಸಮಸ್ಯೆಗಳ ಪರಿಹಾರಕ್ಕೆ ಕೂಡಲೇ ಕ್ರಮ ಕೈಗೊಳ್ಳಿ ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟಕ್ಕೆ ಮುಂದಾಗುವುದಾಗಿ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣ ಎಚ್ಚರಿಸಿದರು. ಗುತ್ತಿಗೆದಾರರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಗುತ್ತಿಗೆದಾರರು ಎದುರಿಸುತ್ತಿರುವ ಹಲವಾರು ಸಮಸ್ಯೆಗಳ ಬಗ್ಗೆ ವಿವರಿಸಿದರು. ರಾಜಕೀಯ ಪ್ರಭಾವವನ್ನು ಬಳಸಿಕೊಂಡು ಕೆಲವು ಅಧಿಕಾರಿಗಳು ಗುತ್ತಿಗೆದಾರರಿಗೆ ಸರಕಾರಿ ಟೆಂಡರ್‍ಗಳಲ್ಲಿ ಭಾಗವಹಿಸದಂತೆ ನಿರ್ಬಂಧ ಹೇರುತ್ತಿದ್ದಾರೆ. ಇದರ ಹೊರತಾಗಿ ಗುತ್ತಿಗೆದಾರರು ಟೆಂಡರ್‍ನಲ್ಲಿ ಭಾಗವಹಿಸಿ ಬಿಡ್ ಸಲ್ಲಿಸಿದ ನಂತರವೂ ಟೆಂಡರನ್ನು ಹಿಂಪಡೆಯುವಂತೆ ಒತ್ತಡ ತಂತ್ರವನ್ನು ಅನುಸರಿಸುತ್ತಿದ್ದಾರೆ. ಇದರಿಂದ ಟೆಂಡರ್‍ನಲ್ಲಿ ಸ್ಪರ್ಧಾತ್ಮಕ ದರಗಳಿಂದ ವಂಚಿತವಾಗಿ ಹೆಚ್ಚಿನ ಪಾರದರ್ಶಕತೆಗೆ ಅವಕಾಶವಿಲ್ಲದೆ ರಾಜ್ಯದ ತೆರಿಗೆದಾರರ ಹಣ ವ್ಯರ್ಥವಾಗುತ್ತಿದ್ದು ಗುತ್ತಿಗೆದಾರರ ಮೂಲಭೂತ ಹಕ್ಕಿಗೆ ಧಕ್ಕೆಯಾಗುತ್ತಿದೆ ಎಂದರು. ಕಳೆದ ಹಲವಾರು ತಿಂಗಳುಗಳಿಂದ ಸರಕಾರದ ಹಲವಾರು ಇಲಾಖೆಗಳಿಂದ ಗುತ್ತಿಗೆದಾರರಿಗೆ ಬಿಲ್ಲುಗಳನ್ನು ನೀಡಲಾಗಿರುವುದಿಲ್ಲ. ಬಾಕಿ ಬಿಲ್‍ಗಳಿಗೆ ಹಣಪಾವತಿಸುವ ಸಮಯದಲ್ಲಿ ಸರಕಾರದ ಆದೇಶದಲ್ಲಿ ಸೂಚಿಸಿರುವಂತೆ ಗುತ್ತಿಗೆದಾರರ ಬಾಕಿ ಉಳಿದಿರುವ ಬಿಲ್ಲುಗಳಿಗೆ ಶೇ. 80 ರಷ್ಟು ಹಣ ಬಿಡುಗಡೆ ಮಾಡುವುದನ್ನು ಜೇಷ್ಠತೆ ಆಧಾರದ ಮೇಲೆ ಕಡ್ಡಾಯ ಮಾಡಿದೆ. ಈ ಆಧಾರದಲ್ಲಿ ಅಂದರೆ ಡಿ.ಬಿ.ಆರ್. ಸಂಖ್ಯೆಗೆ ಅನುಗುಣವಾಗಿ ಜೇಷ್ಟತೆ ಮೇಲೆ ಹಣ ಬಿಡುಗಡೆ ಮಾಡಬೇಕು. ಅಲ್ಲದೆ, ಸ್ಟಾಂಡರ್ಡ್ ಬಿಡ್ ಟೆಂಡರ್ ಡಾಕ್ಯುಮೆಂಟ್‍ನಲ್ಲಿ 90 ದಿನಗಳ ಸಮಯದ ಒಳಗಾಗಿ ಗುತ್ತಿಗೆದಾರ ನಿರ್ವಹಿಸಿದ ಕಾಮಗಾರಿಗಳಿಗೆ ಹಣ ಪಾವತಿಸುವಂತೆ ತಿಳಿಸಲಾಗಿರುತ್ತದೆ. ಆ ಸಮಯದ ನಂತರ ಪಾವತಿ ವಿಳಂಬಕ್ಕೆ ಬಡ್ಡಿ ದರವನ್ನು ಸೇರಿಸಿ ನೀಡಬೇಕು ಎಂದರು. ಪ್ಯಾಕೇಜ್ ಪದ್ದತಿಯಲ್ಲಿ ಟೆಂಡರ್‍ಗಳನ್ನು ಕರೆಯುತ್ತಿರುವುದರಿಂದ ನಮ್ಮ ರಾಜ್ಯದ ಸ್ಥಳೀಯ ಗುತ್ತಿಗೆದಾರರಿಗೆ ಟೆಂಡರ್‍ನಲ್ಲಿ ಭಾಗವಹಿಸದಂತಹ ಸ್ಥಿತಿ ನಿರ್ಮಾಣವಾಗಿದ್ದು, ಸ್ಥಳೀಯ ಗುತ್ತಿಗೆದಾರರಿಗೆ ಕಾಮಗಾರಿ ದೊರೆಯದಂತಹ ಪರಿಸ್ಥಿತಿ ಎದುರಾಗಿದೆ. ಅಲ್ಲದೆ, ಇದು ಹೊರ ರಾಜ್ಯದ ಗುತ್ತಿಗೆದಾರರಿಗೆ ಹೆಚ್ಚು ಅನುಕೂಲವಾಗುತ್ತಿದೆ. ಆದ್ದರಿಂದ ಸಣ್ಣ ಸಣ್ಣ ಕಾಮಗಾರಿಗಳನ್ನು ಒಟ್ಟುಗೂಡಿಸಿ ಪ್ಯಾಕೇಜ್ ಪದ್ದತಿಯಲ್ಲಿ ಟೆಂಡರ್ ಕರೆಯುವುದನ್ನು ನಿಲ್ಲಿಸಿ ಒಂದೊಂದು ಕಾಮಗಾರಿಗಳಿಗೂ ಪ್ರತ್ಯೇಕವಾಗಿ ಟೆಂಡರ್ ಕರೆಯುವಂತೆ ಅವರು ಮನವಿ ಮಾಡಿದರು. ದ್ವಿ ಲಕೋಟೆ ಪ್ಯಾಕೇಜ್ ಪದ್ದತಿಯ ಸ್ಟಾಂಡರ್ಡ್ ಟೆಂಡರ್ ಡಾಕ್ಯುಮೆಂಟ್‍ನಲ್ಲಿ ಸರಿಯಾದ ಮಾನದಂಡಗಳಿಲ್ಲದೆ ಎಲ್ಲಾ ಷರತ್ತುಗಳನ್ನು ತಮ್ಮ ಇಚ್ಚೆಗೆ ಬಂದಂತೆ ಪ್ರತ್ಯೇಕ ನಿಯಮಗಳನ್ನು ರೂಪಿಸುತ್ತಿರುವುದು ವಿವಿಧ ಸರಕಾರಿ ಇಲಾಖೆಗಳಲ್ಲಿ ಕಂಡು ಬಂದಿದೆ. ಕರ್ನಾಟಕ ರಾಜ್ಯ ಟೆಂಡರ್‍ನಲ್ಲಿ ಭಾಗವಹಿಸುವ ಗುತ್ತಿಗೆದಾರರಿಗೆ ಸ್ಟಾಂಡರ್ಡ್ ಟೆಂಡರ್ ಡಾಕ್ಯುಮೆಂಟ್‍ನಲ್ಲಿ ಏಕರೂಪ ನಿಯಮವನ್ನು ಇಡಿ ರಾಜ್ಯಕ್ಕೆ ಅನ್ವಯವಾಗುವಂತಹ ನಿಯಮಾವಳಿಗಳನ್ನು ರೂಪಿಸಬೇಕೆಂದು ಮನವಿ ಮಾಡಿದರು. ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಜಿ ಎಂ ರವೀಂದ್ರ ಮಾತನಾಡಿ, ನೆರೆ ರಾಜ್ಯವಾದ ಕೇರಳದಲ್ಲಿ ರೂ. 5.00 ಕೋಟಿ ವರೆಗಿನ ಕಾಮಗಾರಿಯನ್ನು ಒಂದು ಲಕೋಟೆ ಪದ್ದತಿಯಲ್ಲಿ ಯಾವುದೇ ಪೂರ್ವಭಾಗಿ ಷರತ್ತುಗಳಿಲ್ಲದೆ ಗುತ್ತಿಗೆದಾರರು ನೊಂದಾವಣಿಯಾಗಿರುವ ಆಯಾ ದರ್ಜೆಗೆ ಅನುಗುಣವಾಗಿ ಟೆಂಡರ್‍ನಲ್ಲಿ ಭಾಗವಹಿಸುವ ನಿಯಮ ಜಾರಿಯಲ್ಲಿರುತ್ತದೆ. ಇದೇ ಮಾದರಿಯ ನಿಯಮವನ್ನು ನಮ್ಮ ರಾಜ್ಯದಲ್ಲೂ ಅಳವಡಿಸಿದರೆ ಸ್ಥಳೀಯ ನಿವಾಸಿಗಳಾದ ರಾಜ್ಯದ ಗುತ್ತಿಗೆದಾರರು ಟೆಂಡರ್‍ನಲ್ಲಿ ಭಾಗವಹಿಸಿ ಕಾಮಗಾರಿ ಪಡೆಯುವಂತಹ ಅವಕಾಶ ಕಲ್ಪಿಸಿದಂತಾಗುತ್ತದೆ ಎಂದರಲ್ಲದೆ ಸ್ಟಾಂಡರ್ಡ್ ಬಿಡ್ ಡಾಕ್ಯುಮೆಂಟ್‍ನಲ್ಲಿ ಅದೇ ಸ್ವರೂಪದ ಕಾಮಗಾರಿಯನ್ನು ಹಾಲಿ ಇರುವ ಶೇಕಡಾ 50 ರಷ್ಟು ನಿಯಮಕ್ಕೆ ಮಹರಾಷ್ಟ್ರ ಸರಕಾರ ಲೋಕೋಪಯೋಗಿ ಇಲಾಖೆಯ ಆದೇಶದಂತೆ ಶೇ. 30ಕ್ಕೆ ಇಳಿಸಬೇಕು. ಹಾಗೆಯೇ, ಗುತ್ತಿಗೆದಾರರು ಸ್ವಂತ ಯಂತ್ರೋಪಕರಣಗಳನ್ನು ಹೊಂದಿರಬೇಕೆಂಬ ನಿಯಮವನ್ನು ಎಸ್‍ಬಿಟಿಡಿ (ಸ್ಟಾಂಡರ್ಡ್ ಟೆಂಡರ್ ಡಾಕ್ಯುಮೆಂಟ್) ನಲ್ಲಿ ಸಡಿಲಿಸಿ ಅದರ ಬದಲಾಗಿ ಬಾಡಿಗೆ ರೂಪದಲ್ಲಿ ಕರಾರು ಮಾಡಿಕೊಂಡ ಪತ್ರವನ್ನು ಮಾನ್ಯ ಮಾಡಬೇಕು. 90 ದಿನಗಳ ಒಳಗಾಗಿ ಟೆಂಡರ್ ಅನುಮೋದಿಸಿ ಅರ್ಹ ಗುತ್ತಿಗೆದಾರರಿಗೆ ಕಾಮಗಾರಿಯ ಕಾರ್ಯಾದೇಶವನ್ನು ನೀಡುವ ಮೂಲಕ ಅನಾವಶ್ಯಕ ವಿಳಂಬ ನೀತಿಯನ್ನು ಬಿಡಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಎಸೋಸಿಯೇಶನ್ ಉಪಾಧ್ಯಕ್ಷರಾದ ಅಂಬಿಕಾಪತಿ, ದಿನೇಶ್, ಕೋಶಾಧಿಕಾರಿ ನಟರಾಜ್, ಜಂಟಿ ಕಾರ್ಯದರ್ಶಿ ರಮೇಶ್ ಉಪಸ್ಥಿತರಿದ್ದರು.
  • Blogger Comments
  • Facebook Comments

0 comments:

Post a Comment

Item Reviewed: ಗುತ್ತಿಗೆದಾರರ ಸಂಕಷ್ಟಕ್ಕೆ ಸ್ಪಂದಿಸಿ, ತಪ್ಪಿದಲ್ಲಿ ಹೋರಾಟ ಎದುರಿಸಿ : ಸರಕಾರಕ್ಕೆ ಗುತ್ತಿಗೆದಾರರ ಸಂಘದ ಎಚ್ಚರಿಕೆ Rating: 5 Reviewed By: karavali Times
Scroll to Top