ಮೈಕ್ರೋ ಫೈನಾನ್ಸ್ ಗಳ ಬಲವಂತದ ವಸೂಲಾತಿಗೆ ಆಡಳಿತ ವ್ಯವಸ್ಥೆ ತಕ್ಷಣದ ಕ್ರಮ ಕೈಗೊಳ್ಳಬೇಕು : ರಾಮಣ್ಣ ವಿಟ್ಲ ಆಗ್ರಹ - Karavali Times ಮೈಕ್ರೋ ಫೈನಾನ್ಸ್ ಗಳ ಬಲವಂತದ ವಸೂಲಾತಿಗೆ ಆಡಳಿತ ವ್ಯವಸ್ಥೆ ತಕ್ಷಣದ ಕ್ರಮ ಕೈಗೊಳ್ಳಬೇಕು : ರಾಮಣ್ಣ ವಿಟ್ಲ ಆಗ್ರಹ - Karavali Times

728x90

20 January 2021

ಮೈಕ್ರೋ ಫೈನಾನ್ಸ್ ಗಳ ಬಲವಂತದ ವಸೂಲಾತಿಗೆ ಆಡಳಿತ ವ್ಯವಸ್ಥೆ ತಕ್ಷಣದ ಕ್ರಮ ಕೈಗೊಳ್ಳಬೇಕು : ರಾಮಣ್ಣ ವಿಟ್ಲ ಆಗ್ರಹ

ಬಂಟ್ವಾಳ, ಜ. 20, 2021 (ಕರಾವಳಿ ಟೈಮ್ಸ್) : ತಾಲೂಕಿನ ಹಾಗೂ ಜಿಲ್ಲೆಯ ಇತರ ಕೆಲವು ತಾಲೂಕುಗಳ ಗ್ರಾಮ ಗ್ರಾಮಗಳಲ್ಲಿ ಖಾಸಗಿ ಫೈನಾನ್ಸ್‍ಗಳಾದ ಎಲ್ ಟಿ, ಮುತ್ತೂಟ್, ಎಸ್ ಕೆ ಎಸ್, ಸಮಸ್ತ, ಗ್ರಾಮೀಣ ಕೂಟ, ಸ್ಪಂದನ ಸ್ಪೂರ್ತಿ, ಆಶೀರ್ವಾದ, ಭಾರತ್ ಆಕ್ಸಿಸ್ ಮೊದಲಾದ ಹಲವು ಖಾಸಗಿ ಫೈನಾನ್ಸ್‍ಗಳಿಂದ ಹಳ್ಳಿಯ ಮನೆ-ಮನೆಗಳಿಗೆ ತೆರಳಿ ಬಡ ಮಹಿಳೆಯರನ್ನೇ ಗುರಿಯಾಗಿಟ್ಟುಕೊಂಡು ದುಬಾರಿ ಬಡ್ಡಿಯಲ್ಲಿ ಸಾಲ ನೀಡುತ್ತಾ ಬಡ ಜನರನ್ನು ಸುಲಿಗೆ ಮಾಡುತ್ತಾರೆ. ಶ್ರೀಮಂತ ವ್ಯಕ್ತಿಗಳ ಭ್ರಷ್ಟಾಚಾರದ ಮೂಲಕ ಗಳಿಸಿದ ಹಣವನ್ನು ಬಡ ಮಹಿಳೆಯರಿಗೆ ದುಬಾರಿ ಬಡ್ಡಿ ವಿಧಿಸಿ ಸಾಲ ನೀಡಿ ನಂತರ ಪ್ರತಿವಾರ ಅವರಿಂದ ಬಲತ್ಕಾರದ ವಸೂಲಿ ನಡೆಸುತ್ತದೆ. ಸಾಲ ವಸೂಲಿಗಾರರು ಮಹಿಳೆಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಸಾಲ ಪಡೆದು ಸಾಲದ ಮೂರು ಪಟ್ಟು ಹಣ ಕಟ್ಟಿದರೂ ಸಾಲ ಭಾದೆ ಮುಗಿಯುವುದಿಲ್ಲ. ಇಂತಹ ಮೈಕ್ರೋ ಫೈನಾನ್ಸ್‍ಗಳ ಬಲವಂತದ ವಸೂಲಾತಿಗೆ ಆಡಳಿತ ವ್ಯವಸ್ಥೆ ತಕ್ಷಣ ಎಚ್ಚೆತ್ತು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಿಐಟಿಯು ತಾಲೂಕು ಕಾರ್ಯದರ್ಶಿ ರಾಮಣ್ಣ ವಿಟ್ಲ ಆಗ್ರಹಿಸಿದರು. ಬಲವಂತದ ಸಾಲ ವಸೂಲಾತಿ ಹಾಗೂ ಬೆದರಿಕೆ ವಿರುದ್ದ ಬಿ ಸಿ ರೋಡು ಮಿನಿ ವಿಧಾನಸೌಧ ಮುಂಭಾಗ ಬುಧವಾರ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಈ ಹಣಕಾಸು ಸಂಸ್ಥೆಗಳು ಅವರ ಮಿತಿಯನ್ನು ಮೀರಿ ಕೆಲಸ ಮಾಡುತ್ತಾರೆ. ಅವರ ಪ್ರವೃತ್ತಿಗಳು ಕಾನೂನು ಬಾಹಿರವಾಗಿದ್ದರೂ ಯಾರೂ ಕೇಳುವವರೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇವರ ವಿರುದ್ಧ ಆಡಳಿತ ವ್ಯವಸ್ಥೆಗಳು ಸಂಪೂರ್ಣ ನಿಷ್ಕ್ರೀಯವಾಗಿದೆ ಎಂದವರು ಆಕ್ರೋಶ ವ್ಯಕ್ತಪಡಿಸಿದರು. ದೇಶದ ಆರ್ಥಿಕ ಪರಿಸ್ಥಿತಿ ಕುಂಠಿತದಿಂದ, ಪ್ರಕೃತಿ ವಿಕೋಪದಿಂದ ಹಾಗೂ ಬೀಡಿ ಉದ್ಯಮ ಕುಂಠಿತದಿಂದಾಗಿ ಬಡ ಗ್ರಾಮೀಣ ಮಹಿಳೆಯರಿಗೆ ಕೆಲಸವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಅಸಹಾಯಕÀತೆಯನ್ನು ವ್ಯಕ್ತಪಡಿಸಿದಾಗ ಅವರ ಮೇಲೆ ಈ ಮೈಕ್ರೋ ಫೈನಾನ್ಸ್‍ಗಳ ಹಾಗೂ ಇತರ ಫೈನಾನ್ಸ್‍ಗಳ ಸಾಲ ವಸೂಲಿಗಾರರು ದೌರ್ಜನ್ಯ ನಡೆಸುತ್ತಾರೆ. ಬಡ ಮಹಿಳೆಯರಿಗೆ ಜೀವ ಬೆದರಿಕೆ ಉಂಟು ಮಾಡಿ ಜೀವಕ್ಕೆ ಅಪಾಯ ತರುವ ರೀತಿಯಲ್ಲಿ ವರ್ತಿಸುತ್ತಾರೆ. ಮಹಿಳೆÉಯರು ಹೆದರಿ ಮನೆ ಬಿಡುವ ದುಸ್ಥಿತಿಗೆ ಈ ಫೈನಾನ್ಸ್ ಮಾಲಕರು ಕಾರಣರಾಗಿದ್ದಾರೆ ಎಂದ ರಾಮಣ್ಣ ವಿಟ್ಲ ಈ ಬಗ್ಗೆ ಸರಕಾರ ಸೂಕ್ತ ಕ್ರಮಕ್ಕೆ ಮುಂದಾಗಬೇಕೆಂದರು. ನ್ಯಾಯವಾದಿ ಶಿವಕುಮಾರ್, ಜನವಾದಿ ಮಹಿಳಾ ಸಂಘಟನೆಯ ಜಯಂತಿ ಶೆಟ್ಟಿ, ಶೋಭಾ ಕೊೈಲ, ಶೇಖರ ಲಾಯಿಲ, ಪ್ರಮುಖರಾದ ಮಹಮ್ಮದ್ ಇಕ್ಬಾಲ್ ಹಳೆಮನೆ, ಮಹಮ್ಮದ್ ಅಲ್ತಾಫ್ ತುಂಬೆ, ಶ್ರೀನಿವಾಸ ಪೂಜಾರಿ, ರಮಣಿ ನಾಟೆಕಲ್ಲು, ಹೊನ್ನಮ್ಮ, ಪೂಜಾ, ಲೋಲಾಕ್ಷಿ ಬಂಟ್ವಾಳ, ರಹಮತ್ ರಝಿಯಾ ಕಂಬಳಬೆಟ್ಟು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಇದೇ ವೇಳೆ ಪ್ರಮುಖ ಬೇಡಿಕೆಗಳಾದ ಮೈಕ್ರೋ ಫೈನಾನ್ಸ್‍ಗಳು ಹಾಗೂ ಖಾಸಗಿ ಫೈನಾನ್ಸ್‍ಗಳು ಕಾನೂನು ಬಾಹಿರವಾಗಿ ನೀಡಿದ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು, ಬಡ ಮಹಿಳೆಯರ ಮನೆಗೆ ಬಂದು ದುಬಾರಿ ಬಡ್ಡಿ ವಿಧಿಸಿ ಸಾಲ ನೀಡಿ ಇದೀಗ ದೌರ್ಜನ್ಯವೆಸಗುವ ಹಣಕಾಸು ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಹಣಕಾಸು ಸಂಸ್ಥೆಗಳ ಬಲತ್ಕಾರದ ಸಾಲ ವಸೂಲಿ, ಬೈಗುಳ, ಬೆದರಿಕೆಗಳನ್ನು ತಡೆಯಬೇಕು, ಹಾಗೂ ಮನೆಗೆ ಬಂದು ಸಾಲ ವಸೂಲಿ ಪದ್ದತಿಯನ್ನು ನಿಲ್ಲಿಸಬೇಕು, ರಾಷ್ಟ್ರೀಕೃತ ಬ್ಯಾಂಕುಗಳಿಂದ ಮಹಿಳೆಯರಿಗೆ ಕಡಿಮೆ ಬಡ್ಡಿದರದಲ್ಲಿ ಆಧಾರ್ ಕಾರ್ಡ್ ಆಧಾರಿತ ಸಾಲ ನೀಡಲು ಕ್ರಮ ಕೈಗೊಳ್ಳಬೇಕು, ಮೈಕ್ರೋ ಪೈನಾನ್ಸ್‍ಗಳ (ಹಣಕಾಸು ಸಂಸ್ಥೆಗಳು) ಸಾಲ ವಸೂಲಾತಿ ಗೂಂಡಾಗಳಿಂದ ರಕ್ಷಣೆ ನೀಡಬೇಕು ಎಂಬ ಬೇಡಿಕೆಗಳನ್ನು ಪ್ರತಿಭಟನಾಕಾರರು ಬಂಟ್ವಾಳ ತಹಶೀಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು.
  • Blogger Comments
  • Facebook Comments

0 comments:

Post a Comment

Item Reviewed: ಮೈಕ್ರೋ ಫೈನಾನ್ಸ್ ಗಳ ಬಲವಂತದ ವಸೂಲಾತಿಗೆ ಆಡಳಿತ ವ್ಯವಸ್ಥೆ ತಕ್ಷಣದ ಕ್ರಮ ಕೈಗೊಳ್ಳಬೇಕು : ರಾಮಣ್ಣ ವಿಟ್ಲ ಆಗ್ರಹ Rating: 5 Reviewed By: karavali Times
Scroll to Top