ಮಂಗಳೂರು, ಜ. 08, 2021 (ಕರಾವಳಿ ಟೈಮ್ಸ್) : ಕೇರಳ ರಾಜ್ಯದಿಂದ ಹಕ್ಕಿ ಜ್ವರ ಹರಡಂತೆ ಮುಂಜಾಗ್ರತೆಯಾಗಿ ಕೇರಳದಿಂದ ಕರ್ನಾಟಕಕ್ಕೆ ಕೋಳಿ ಸಾಗಾಟಕ್ಕೆ ಗಡಿ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ನಿರ್ಬಂಧ ವಿಧಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಹಕ್ಕಿ ಜ್ವರ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ರೋಗ ನಿಯಂತ್ರಣ ಸಮಿತಿ ರಚಿಸಲಾಗಿದೆ. ಕೇರಳದ ಕೊಟ್ಟಾಯಂನಲ್ಲಿ ಬಾತು ಕೋಳಿಗಳು ಶಂಕಿತ ಹಕ್ಕಿ ಜ್ವರದಿಂದ ಸಾವಿಗೀಡಾದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಡೀಸಿ ತಿಳಿಸಿದ್ದಾರೆ. ಕೇರಳದಿಂದ ಮಂಗಳೂರಿಗೆ ಹಕ್ಕಿ ಜ್ವರ ಪಸರಿಸುವ ಸಾಧ್ಯತೆ ಬಹಳಷ್ಟು ಕಡಿಮೆ. ಜಿಲ್ಲೆಯ ಕೋಳಿ ಫಾರಂಗಳಲ್ಲಿ ಜ್ವರ ತಪಾಸಣೆ ನಡೆಸುವಂತೆ ಸೂಚನೆ ನೀಡಲಾಗಿದೆ. ಜಿಲ್ಲಾಡಳಿತ ಹೆಲ್ಪ್ ಲೈನ್ ತೆರೆದಿದ್ದು, ಸಾರ್ವಜನಿಕರು ಹಕ್ಕಿ ಜ್ವರಕ್ಕೆ ಸಂಬಂಧಿಸಿ ನೇರವಾಗಿ ಮಾಹಿತಿ ನೀಡಬಹುದಾಗಿದೆ. ಜಿಲ್ಲೆಯಿಂದ ಕೇರಳಕ್ಕೆ ಕೋಳಿ ಸಾಗಾಟ ಮಾಡಿದರೆ ಸಮಸ್ಯೆಯಾಗದು. ಮರಳಿ ಜಿಲ್ಲೆಗೆ ಆಗಮಿಸುವ ಕೋಳಿ ಸಾಗಾಟ ವಾಹನವನ್ನು ಪೂರ್ತಿ ಸ್ಯಾನಿಟೈಸ್ ಮಾಡಲಾಗುವುದು. ಆದರೆ, ಕೇರಳದಿಂದ ಇಲ್ಲಿಗೆ ಬಾತು ಕೋಳಿ ಕೂಡ ಸಾಗಾಟ ಮಾಡುವಂತಿಲ್ಲ. ಜಿಲ್ಲೆಯ ಜಾಲ್ಸೂರು, ಸಾರಡ್ಕ, ತಲಪಾಡಿ ಹಾಗೂ ಕೊಣಾಜೆಯ ತೌಡುಗೋಳಿ ಗಡಿಗಳಲ್ಲಿ ಚೆಕ್ ಪೆÇೀಸ್ಟ್ ಸ್ಥಾಪಿಸಿ ಬಿಗು ತಪಾಸಣೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಮಂಜನಾಡಿಯಲ್ಲಿ ಸತ್ತ ಕಾಗೆಗಳ ಅಂಗಾಂಗವನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಶುಕ್ರವಾರದೊಳಗೆ ವರದಿ ಬರುವ ನಿರೀಕ್ಷೆ ಇದೆ. ಈಗಾಗಲೇ ಕಾಗೆಗಳು ಸತ್ತು ಬಿದ್ದಿರುವ ಸ್ಥಳಕ್ಕೆ ಪಶುಸಂಗೋಪನಾ ಇಲಾಖೆ ಅಧಿಕಾರಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆಂದು ಡೀಸಿ ತಿಳಿಸಿದ್ದಾರೆ.
0 comments:
Post a Comment