ಬಂಟ್ವಾಳ, ಜ. 08, 2021 (ಕರಾವಳಿ ಟೈಮ್ಸ್) : ತಾಲೂಕಿನ ಬೆಂಜನಪದವಿನಲ್ಲಿ ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಬಗ್ಗೆ ಸಾರ್ವಜನಿಕ ದೂರು ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನಿರ್ದೇಶನದ ಮೇರೆಗೆ ಬಂಟ್ವಾಳ ತಹಶೀಲ್ದಾರ್ ಅನಿತಾಲಕ್ಷ್ಮೀ ನೇತೃತ್ವದ ಅಧಿಕಾರಿಗಳ ತಂಡ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಬಗ್ಗೆ ಪತ್ರಿಕೆ ವರದಿ ಪ್ರಕಟಿಸಿತ್ತು.
ಆದರೂ ಆ ಬಳಿಕವೂ ಗಣಿಗಾರಿಕೆ ಮುಂದುವರಿಸಿದ ಬಗ್ಗೆ ಸಾರ್ವಜನಿಕರು ದೂರಿಕೊಂಡ ಹಿನ್ನಲೆಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಡಾ ಕೆ ವಿ ರಾಜೇಂದ್ರ, ಜಿಲ್ಲಾ ಎಸ್ಪಿ ಲಕ್ಷ್ಮೀ ಪ್ರಸಾದ್ ಹಾಗೂ ತಾಲೂಕು ತಹಶೀಲ್ದಾರ್ ರಶ್ಮಿ ಎಸ್ ಆರ್ ಅವರು ಜಂಟಿಯಾಗಿ ಹಠಾತ್ ದಾಳಿ ನಡೆಸಿ ಭಾರೀ ಪ್ರಮಾಣದಲ್ಲಿ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದ ಯಂತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ದಾಳಿ ಸಂದರ್ಭ 2 ಟಿಪ್ಪರ್, 1 ಹಿಟಾಚಿ, 2 ಬೃಹತ್ ಗಾತ್ರದ ಕಲ್ಲು ಕತ್ತರಿಸುವ ಯಂತ್ರ, 3 ಟಿಲ್ಲರ್ ಸಹಿತ ಕೋಟ್ಯಂತರ ರೂಪಾಯಿ ಮೌಲ್ಯದ ಯಂತ್ರೋಪಕರಣಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಬಳಿಕ ಜಿಲ್ಲಾಧಿಕಾರಿಗಳು ಗಣಿ ಇಲಾಖಾಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಇಲ್ಲಿನ ಅಕ್ರಮ ಗಣಿಗಾರಿಕೆ ಬಗ್ಗೆ ವರದಿ ಕೇಳಿದ್ದಾರೆ.
ಮಂಗಳವಾರ ಪ್ರಭಾರ ತಹಶೀಲ್ದಾರ್ ಅನಿತಾಲಕ್ಷ್ಮಿ ಅವರು ಬೆಂಜನಪದವು ಕೆಂಪು ಕಲ್ಲು ಅಕ್ರಮ ಕೋರೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ವೇಳೆ ಇಲ್ಲಿನ ವಿಶಾಲವಾದ ಪ್ರದೇಶದಲ್ಲಿ ಸಮತಟ್ಟು ಮಾಡಿರುವುದು, ಕೆಂಪು ಕಲ್ಲುಗಳನ್ನು ತೆಗೆಯಲು ಯಂತ್ರಗಳನ್ನು ಜೋಡಣೆ ಮಾಡಲು ಸ್ಥಳ ಇಟ್ಟಿರುವುದು. ಅಲ್ಲಲ್ಲಿ ಕಲ್ಲು ತೆಗೆಯುವ ಕೋರೆಗಳು ನಿರ್ಮಾಣವಾಗಿರುವುದು ಕಂಡು ಬಂದಿತ್ತು. ಪ್ರದೇಶದಲ್ಲಿ ಅನಧಿಕೃತವಾಗಿ ಕೆಂಪುಕಲ್ಲು ಗಣಿಗಾರಿಕೆ ನಡೆದಿರುತ್ತದೆ ಎಂಬುದನ್ನು ಮನಗಂಡಿದ್ದರು. ಪರಿಸರದ ಮತ್ತೊಂದು ಬದಿಯಲ್ಲಿ ಕೋರೆಯಿಂದ ಕಲ್ಲುಗಳನ್ನು ತೆಗೆದು ರಾಶಿ ಹಾಕಿರುವುದು ಕಂಡು ಬಂದಿತ್ತು. ಕಲ್ಲು ತೆಗೆಯುವುದರಿಂದ ಕೆಂಪು ಕಲ್ಲಿನ ಹುಡಿಗಳು ಅಲ್ಲಲ್ಲಿ ರಾಶಿ ಬಿದ್ದಿದ್ದವು. ದೂರ ಪ್ರದೇಶದಿಂದ ಕೋರೆ ನಡೆಯುವ ಸ್ಥಳಕ್ಕೆ ನೀರು ಪೂರೈಕೆ ಮಾಡುತ್ತಿರುವುದನ್ನೂ ತಹಶೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡ ಪತ್ತೆ ಹಚ್ಚಿತ್ತು.
ಅಮ್ಮುಂಜೆ ಗ್ರಾಮದಲ್ಲಿ ಒಟ್ಟು 5 ಕಡೆಗಳಲ್ಲಿ ಈ ರೀತಿಯ ಅನಧಿಕೃತ ಗಣಿಗಾರಿಕೆ ನಡೆದಿರುವುದು ಕಂಡು ಬಂದಿತ್ತು. ಈ ಸಂದರ್ಭ ಮಾತ್ರ ಯಾವುದೇ ಯಂತ್ರೋಪಕರಣಗಳು ಕಂಡು ಬಂದಿರಲಿಲ್ಲ.
0 comments:
Post a Comment