ಬಂಟ್ವಾಳ, ಜ. 14, 2021 (ಕರಾವಳಿ ಟೈಮ್ಸ್) : ಬಲಾಢ್ಯರು ಕೋಟಿಗಟ್ಟಲೆ ಮುಂಡಾ ಮೋಚಿ ಪಲಾಯನಗೈದರೂ ಅದಕ್ಕೆ ಮೂರು ಕಾಸಿನ ಬೆಲೆ ಕಲ್ಪಿಸುವ ರಾಷ್ಟ್ರೀಕೃತ ಹಣಕಾಸು ಸಂಸ್ಥೆಗಳು ಬಡವರು, ಸಾಮಾನ್ಯ ಜನರು ಎಲ್ಲಾ ಸಮರ್ಪಕ ದಾಖಲೆಗಳನ್ನು ಹಿಡಿದುಕೊಂಡು ತಿಂಗಳುಗಟ್ಟಲೆ ಬ್ಯಾಂಕ್ ಬಾಗಿಲಿಗೆ ಅಲೆದಾಡಿದರೂ ಹಣಕಾಸಿನ ನೆರವು ನೀಡಲು ನಿರಾಕರಿಸುತ್ತಿವೆ. ರಾಷ್ಟ್ರೀಕೃತ ಬ್ಯಾಂಕ್‍ಗಳ ಈ ಜನವಿರೋಧಿ ಹಾಗೂ ಅಲೆದಾಟಕ್ಕೆ ಪರ್ಯಾಯವಾಗಿ ಸಹಕಾರಿ ಬ್ಯಾಂಕ್‍ಗಳು ಜನಸ್ನೇಹಿಯಾಗಿ ಬೆಳೆದು ಬರುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಸಮಾಜ ಸೇವಾ ಸಹಕಾರಿ ಸಂಘ ನಿಯಮಿತ, ಬಂಟ್ವಾಳ ಇದರ 13ನೇ ಮೆಲ್ಕಾರ್ ಶಾಖೆಯನ್ನು ಇಲ್ಲಿನ ಆರ್.ಆರ್. ಕಮರ್ಷಿಯಲ್ ಸೆಂಟರಿನ ನೆಲ ಅಂತಸ್ತಿನ ಕಟ್ಟಡದಲ್ಲಿ ಗುರುವಾರ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ದೀಪಪ್ರಜ್ವಲನೆ ಮಾಡಿ ಆಶೀರ್ವಚನಗೈದ ಅವರು ಕೇಂದ್ರ ಸರಕಾರ, ಪ್ರಧಾನಿಗಳು ಬ್ಯಾಂಕಿಂಗ್ ವ್ಯವಸ್ಥೆಯನ್ನು ಎಷ್ಟೇ ಜನಸ್ನೇಹಿಯಾಗಿ ಮಾಡಲು ಕ್ರಮ ಕೈಗೊಂಡರೂ ಇಂದಿಗೂ ರಾಷ್ಟ್ರೀಕೃತ ಬ್ಯಾಂಕ್‍ಗಳು ಬಡವರ ಪರವಾಗಿ, ಜನ ಸಾಮಾನ್ಯ ಪರವಾಗಿ ಉಳಿದುಕೊಂಡಿಲ್ಲ. ಬಡವರ ಪಾಲಿಗೆ ಈ ಬ್ಯಾಂಕಿಂಗ್ ವ್ಯವಸ್ಥೆ ಬಹಳಷ್ಟು ಕಠಿಣವಾಗುತ್ತಿದೆ. ಈ ನಿಟ್ಟಿನಲ್ಲಿ ಸಹಕಾರಿ ಹಣಕಾಸು ಸಂಸ್ಥೆಗಳು ಜನರ ಪಾಲಿಗೆ ಅತ್ಯಂತ ನಿಕಟ ಬ್ಯಾಂಕಿಂಗ್ ಕ್ಷೇತ್ರಗಳಾಗಿ ಬೆಳೆದು ಬರುತ್ತಿದೆ ಎಂದು ಅಭಿಪ್ರಾಯಪಟ್ಟಲ್ಲದೆ ಸ್ವಸಹಾಯ ಸಂಘಗಳ ಪ್ರಾಮಾಣಿಕ ಸಂದಾಯದಿಂದ ಸಹಕಾರಿ ಸಂಘಗಳು ಇಂದು ಆರ್ಥಿಕವಾಗಿ ಬಲಿಷ್ಠವಾಗುತ್ತಿದೆ ಎಂದು ಶ್ಲಾಘಿಸಿದರು.
ಸೇಫ್ ಲಾಕರ್ ತೆರೆದು ಬಳಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಚಿವ ಬಿ ರಮಾನಾಥ ರೈ ಮಾತನಾಡಿ, ರೈತರ ಅಭಿವೃದ್ದಿ ಹಾಗೂ ಸಮುದಾಯಗಳ ಬೆಳವಣಿಗೆಯನ್ನು ಮೂಲಭೂತ ದೃಷ್ಟಿಯಾಗಿಸಿಕೊಂಡು ಸಹಕಾರ ಸಂಘಗಳು ಸ್ಥಾಪನೆಯಾಗಿದ್ದು, ಇದು ಉದ್ದೇಶ ಈಡೇರಿಕೆಯಲ್ಲಿ ಸಫಲವಾಗಿದೆ. ಬ್ಯಾಂಕಿಂಗ್ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚಿನ ಆಸಕ್ತಿ ನೀಡಿದಾಗ ಸಮುದಾಯದ ಅಭಿವೃದ್ದಿಗೆ ಪೂರಕವಾಗುತ್ತಿದೆ ಎಂದ ರೈ ರಾಜಕೀಯ ರಹಿತ ಸಹಕಾರ ಬ್ಯಾಂಕ್ ಸ್ಥಾಪನೆಯಾಗಿ ಸ್ವ ಸಮುದಾಯದ ಅಭಿವೃದ್ದಿ ಜೊತೆಗೆ ಸರ್ವ ಜನಾಂಗದ ಏಳಿಗೆ ಆಗಬೇಕು ಎಂಬುದು ಡಾ. ಅಮ್ಮೆಂಬಳ ಬಾಳಪ್ಪ ಅವರ ಕನಸಾಗಿತ್ತು. ಅದು ಇಂದು ಸಾಕಾರಗೊಳ್ಳುತ್ತಿದೆ ಎಂದರು.
ರಾಜಕೀಯ ವ್ಯವಸ್ಥೆಯಲ್ಲಿ ರಾಜಕೀಯ ಕಾರ್ಯಕರ್ತರಿಗೆ ಹೆಚ್ಚಾಗಿ ಮಣೆ ಹಾಕುವ ಸಂಪ್ರದಾಯದ ಮಧ್ಯೆ ಡಾ ಅಮ್ಮೆಂಬಳ ಬಾಳಪ್ಪ ಅವರು ಕಾಂಗ್ರೆಸ್ ಕಾರ್ಯಕರ್ತರಲ್ಲದಿದ್ದರೂ ವೀರಪ್ಪ ಮೊಯಿಲಿ ಮುಖ್ಯಮಂತ್ರಿ ಆಗಿದ್ದಾಗಿನ ಸರಕಾರದಲ್ಲಿ ಅವರನ್ನು ಭೂನ್ಯಾಯ ಮಂಡಳಿ ಸದಸ್ಯರಾಗಿ ನೇಮಕಗೊಳಿಸಲಾಗಿತ್ತು. ಇದು ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಕಾಂಗ್ರೆಸ್ಸೇತರ ವ್ಯಕ್ತಿಗೆ ಭೂನ್ಯಾಯ ಮಂಡಳಿಯ ಸ್ಥಾನ ದಕ್ಕಿದ ಏಕೈಕ ಉದಾಹರಣೆ ಎಂದ ರಮಾನಾಥ ರೈ ಆರ್ಥಿಕ ಅಭಿವೃದ್ದಿ ಹೊಂದುತ್ತಿರುವ ಪ್ರದೇಶವಾಗಿರುವ ಮೆಲ್ಕಾರ್ ಪ್ರದೇಶದಲ್ಲಿ ಸ್ಥಾಪನೆಯಾಗಿರುವ ಬಂಟ್ವಾಳ ಸಮಾಜ ಸೇವಾ ಸಹಕಾರಿ ಬ್ಯಾಂಕ್ ಶಾಖೆ ಇತರ ಎಲ್ಲಾ ಶಾಖೆಗಳಿಗಿಂತಲೂ ಆರ್ಥಿವಾಗಿ ಬಲಿಷ್ಠವಾಗಲಿದೆ ಎಂದು ಭವಿಷ್ಯ ನುಡಿದರು.
ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್ ಮಾತನಾಡಿ, ಸಮಾಜದಲ್ಲಿ ಆರ್ಥಿಕತೆಗೆ ಶಕ್ತಿ ತುಂಬಿದ ಕ್ಷೇತ್ರ ಸಹಕಾರಿ ಕ್ಷೇತ್ರವಾಗಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ವಿಶೇಷ ಸ್ಥಾನಮಾನ ಇದೆ. ಜಿಲ್ಲೆಯಲ್ಲಿ ಪ್ರಾರಂಭಗೊಂಡ ಬ್ಯಾಂಕ್‍ಗಳು ರಾಷ್ಟ್ರಮಟ್ಟದಲ್ಲಿ ಬೆಳೆದು ರಾರಾಜಿಸಿದೆ ಎಂದರು.
ಪುರಸಭಾಧ್ಯಕ್ಷ ಮುಹಮ್ಮದ್ ಶರೀಫ್ ಶಾಂತಿಅಂಗಡಿ ಮಾತನಾಡಿ, ಬದಲಾದ ಬ್ಯಾಂಕಿಂಗ್ ವ್ಯವಸ್ಥೆಯ ಕನಿಷ್ಠ ಬ್ಯಾಲೆನ್ಸ್ ಮೊದಲಾದ ನೀತಿ-ನಿಯಮಗಳಿಂದಾಗಿ ಬಡವರು ಬ್ಯಾಂಕ್‍ಗಳ ಬಾಗಿಲಿಗೆ ತೆರಳದಂತಹ ದುಸ್ಥಿತಿ ಇಂದು ಉಂಟಾಗಿದೆ. ಇದನ್ನು ಸಹಕಾರಿ ಬ್ಯಾಂಕ್‍ಗಳು ಜನಸ್ನೇಹಿಯಾಗಿ ಕಾರ್ಯನಿರ್ವಹಿಸುವುದರ ಮೂಲಕ ಪರಿಹಾರ ಒದಗಿಸಿದೆ ಎಂದರು.
ಬಂಟ್ವಾಳ ಪುರಸಭಾ ಉಪಾಧ್ಯಕ್ಷೆ ಜೆಸಿಂತಾ ಡಿ’ಸೋಜ, ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಪಣೋಲಿಬೈಲು ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ವಾಸುದೇವ ಮೂಲ್ಯ, ಪಾಣೆಮಂಗಳೂರು ರೈತರ ಸೇವಾ ಸಂಘದ ಅಧ್ಯಕ್ಷ ಜಯಶಂಕರ್ ಬಾಸ್ರಿತ್ತಾಯ, ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷೆ ಜಯಂತಿ ಗಂಗಾಧರ, ಮೆಲ್ಕಾರ್ ಆರ್.ಆರ್. ಕಮರ್ಷಿಯಲ್ ಸೆಂಟರ್ ಮಾಲಕ ರಾಮರಾಜ್ ರಾವ್, ಮಾಜಿ ಶಾಸಕ ಕೆ ಪದ್ಮನಾಭ ಕೊಟ್ಟಾರಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಸೀತಾರಾಮ ಬಂಗೇರ ಮೊದಲಾದವರು ಮುಖ್ಯ ಅತಿಥಿಗಳಾಗಿದ್ದರು.
ಇದೇ ವೇಳೆ ಸೀತಾರಾಮ ಬಂಗೇರ ಹಾಗೂ ರಾಮರಾಜ್ ರಾವ್ ಅವರನ್ನು ಸಂಸ್ಥೆಯ ಪರವಾಗಿ ಅಧ್ಯಕ್ಷ ಸುರೇಶ್ ಕುಲಾಲ್ ನೇತೃತ್ವದಲ್ಲಿ ಸನ್ಮಾನಿಸಲಾಯಿತು.
ಬ್ಯಾಂಕ್ ಉಪಾಧ್ಯಕ್ಷ ಪದ್ಮನಾಭ ವಿಟ್ಲ ಸ್ವಾಗತಿಸಿ, ಪ್ರಧಾನ ವ್ಯವಸ್ಥಾಪಕ ಭೋಜ ಮೂಲ್ಯ ಪ್ರಸ್ತಾವನೆಗೈದರು. ಮೋಹನ್ ಠೇವಣಿ ಪತ್ರ ವಾಚಿಸಿದರು. ಕು. ಕಾವ್ಯಾ ಪ್ರಾರ್ಥನೆಗೈದರು. ಎಚ್.ಕೆ. ನಯನಾಡು ಕಾರ್ಯಕ್ರಮ ನಿರೂಪಿಸಿದರು.
14 January 2021
- Blogger Comments
- Facebook Comments
Subscribe to:
Post Comments (Atom)
0 comments:
Post a Comment