ಬಂಟ್ವಾಳ, ಜ 05, 2021 (ಕರಾವಳಿ ಟೈಮ್ಸ್) : ಅಧಿಕಾರ-ಹಣ ಪ್ರಭಾವದ ಮಧ್ಯೆಯೂ ರಾಜ್ಯದ ಜನ ಕಾಂಗ್ರೆಸ್ ಬೆಂಬಲಿತರಿಗೆ ಅಭೂತಪೂರ್ವ ಬೆಂಬಲ ನೀಡಿದ್ದಾರೆ. ಈ ಮೂಲಕ ಜನ ಬಿಜೆಪಿಯ ಅಪಪ್ರಚಾರ, ಪ್ರಭಾವಗಳ ಮಧ್ಯೆ ಇನ್ನೂ ಕಾಂಗ್ರೆಸ್ ಸಿದ್ದಾಂತ, ಜನಪರ ಯೋಜನೆಗಳಿಗೆ ಸೆಲ್ಯೂಟ್ ಎಂದಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದರು.
ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ ಪಾಣೆಮಂಗಳೂರು ಸಾಗರ್ ಆಡಿಟೋರಿಯಂನಲ್ಲಿ ಮಂಗಳವಾರ ಸಂಜೆ ನಡೆದ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗ್ರಾ ಪಂ ಚುನಾವಣೆಯಲ್ಲಿ ಗೆದ್ದು ಬಂದ ಅಭ್ಯರ್ಥಿಗಳ ರೋಡ್ ಶೋ ಹಾಗೂ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಬಿಜೆಪಿಯ ಆಸೆ, ಆಮಿಷ, ಬೆದರಿಕೆ, ಅಧಿಕಾರ ಪ್ರಭಾವಗಳ ಮಧ್ಯೆ ಎಲ್ಲವನ್ನೂ ಮೀರಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಆರಿಸಿದ ಗ್ರಾಮಗಳ ಜನರಿಗೂ, ಗೆದ್ದು ಬಂದ ಅಭ್ಯರ್ಥಿಗಳಿಗೂ ಅಭಿನಂದನೆ ಸಲ್ಲಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಕಾರ್ಯಕರ್ತರೇ ಆಸ್ತಿಯಾಗಿದ್ದು, ಪಕ್ಷದ ಕಾರ್ಯಕರ್ತರು ಮುಂದಿನ ದಿನಗಳಲ್ಲಿ ಭ್ರಷ್ಟ ಬಿಜೆಪಿ ಸರಕಾರದ ವಿರುದ್ದ ನಡೆಯುವ ನಿರಂತರ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಬಿಜೆಪಿ ಸರಕಾರದ ಆಡಳಿತ ವೈಫಲ್ಯ ಹಾಗೂ ಭ್ರಷ್ಠಾಚಾರವನ್ನು ಜನರಿಗೆ ತಲುಪಿಸಬೇಕು ಎಂದು ಕರೆ ನೀಡಿದ ಸಲೀಂ ಅಹ್ಮದ್ ಬಂಟ್ವಾಳದ ರಮಾನಾಥ ರೈ ಅವರು ಅಪರೂಪ ಹಾಗೂ ಅದ್ಭುತ ರಾಜಕಾರಣಿಯಾಗಿದ್ದು, ರಾಜ್ಯದಲ್ಲಿ ಪಕ್ಷದ ಎಲ್ಲಾ ನಾಯಕರುಗಳು ಒಪ್ಪಿಕೊಂಡಂತಹ ರಾಜಕಾರಣಿ ರಮಾನಾಥ ರೈ ಅವರ ಕ್ಷೇತ್ರದಿಂದಲೇ ಈ ಬಾರಿ ಪಕ್ಷ ಸಂಘಟನೆಗೆ ಪಕ್ಷದ ನಾಯಕರು ತೀರ್ಮಾನಿಸಿದ್ದಾರೆ. ಎಲ್ಲ ವರ್ಗ, ಜಾತಿ ಧರ್ಮದ ಜನರನ್ನು ಒಗ್ಗೂಡಿಸಿ ಪಕ್ಷ ಕಟ್ಟುವುದರ ಜೊತೆಗೆ ಸಜ್ಜನ-ಸರಳ ವ್ಯಕ್ತಿತ್ವ ಮೈಗೂಡಿಸಿಕೊಂಡು ಜನರ ಪ್ರೀತಿಗೆ ಪಾತ್ರರಾಗಿರುವ ರಮಾನಾಥ ರೈ ಮುಂದಿನ ದಿನಗಳಲ್ಲಿ ಮತ್ತೆ ಜಿಲ್ಲೆಯ ಅಭಿವೃದ್ದಿಯ ಚುಕ್ಕಾಣಿ ಹಿಡಿಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷ ವಹಿಸಿದ್ದ ಮಾಜಿ ಸಚಿವ ಬಿ ರಮಾನಾಥ ರೈ ಮಾತನಾಡಿ ಅಧಿಕಾರ, ಪ್ರಭಾವ, ಅಪಪ್ರಚಾರ ಎಲ್ಲವನ್ನೂ ಬಳಸಿಕೊಂಡರೂ ಗ್ರಾಮಾಂತರ ಜನರ ವಿಶ್ವಾಸ ಗಳಿಸುವಲ್ಲಿ ವಿಫಲವಾದ ಬಿಜೆಪಿ ನಾಯಕರು ಇದೀಗ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಗಾಳ ಹಾಕುವ ಮೂಲಕ ವಾಮಮಾರ್ಗದಲ್ಲಿ ಪಂಚಾಯತ್ ಅಧಿಕಾರ ಪಡೆಯಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದು, ಕೈ ಬೆಂಬಲಿತ ಸದಸ್ಯರು ಸದಾ ಜಾಗರೂಕರಾಗಿದ್ದುಕೊಂಡು ಯಾವುದೇ ಕಾರಣಕ್ಕೂ ಬಿಜೆಪಿಗರ ಆಸೆ, ಆಮಿಷಗಳಿಗೆ ಬಲಿಯಾಗದಂತೆ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ ಎ ಬಾವಾ, ಎಂಎಲ್‍ಸಿ ನಾರಾಯಣ ಸ್ವಾಮಿ, ಕೆಪಿಸಿಸಿ ಕಾರ್ಯದರ್ಶಿ ಬಾಲರಾಜ್ ಸದಸ್ಯ ಕಣಚೂರು ಮೋನು, ಡಿಸಿಸಿ ಉಪಾಧ್ಯಕ್ಷರುಗಳಾದ ಹಾಜಿ ಕೋಡಿಜಾಲ್ ಇಬ್ರಾಹಿಂ, ಹಾಜಿ ಬಿ ಎಚ್ ಖಾದರ್, ಜಿ ಪಂ ಸದಸ್ಯರುಗಳಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಎಂ ಎಸ್ ಮುಹಮ್ಮದ್, ಬಿ ಪದ್ಮಶೇಖರ ಜೈನ್ ಮೊದಲಾದವರು ಭಾಗವಹಿಸಿದ್ದರು.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಸ್ವಾಗತಿಸಿ, ಕಾರ್ಯಕರ್ತರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ವಂದಿಸಿದರು, ಭಾರತಿ ಬೇಬಿ ಕುಂದರ್ ಪ್ರಾರ್ಥನೆ ನೆರವೇರಿಸಿದರು. ವಿಜೇತ ಅಭ್ಯರ್ಥಿಗಳ ಪರಿಚಯ ಮಾಡಿದರು. ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment