ಕೆಪಿಸಿಸಿ ವತಿಯಿಂದ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾಣೆಮಂಗಳೂರು ಸಾಗರ್ ಆಡಿಟೋರಿಯಂನಲ್ಲಿ ಬುಧವಾರ ಹಮ್ಮಿಕೊಳ್ಳಲಾದ ಪ್ರಥಮ ಮೈಸೂರು ವಿಭಾಗಮಟ್ಟದ ಸಂಕಲ್ಪ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು ಪ್ರತೀ ಬೂತ್ ಮಟ್ಟದಲ್ಲಿ ಸಮಿತಿ ರಚಿಸಿ ಪ್ರಜಾಪ್ರತಿನಿಧಿಗಳನ್ನು ನೇಮಿಸುವ ಮೂಲಕ ಪಂಚಾಯತ್ ಹಾಗೂ ಬೂತ್ ಮಟ್ಟದಲ್ಲಿ ನಾಯಕರನ್ನು ಸೃಷ್ಟಿಸಿ ಆ ಮೂಲಕ ಪಕ್ಷ ಸಂಘಟನೆಗೆ ಕೆಪಿಸಿಸಿ ಬದ್ದವಾಗಿದೆ ಎಂದರು.
ಡಿಜಿಟಲ್ ಯುಗದಲ್ಲಿ ಇಂದು ಸೋಶಿಯಲ್ ಮೀಡಿಯಾ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಈ ನಿಟ್ಟಿನಲ್ಲಿ ಸೋಶಿಯಲ್ ಮೀಡಿಯಾಗಳನ್ನು ಸಮರ್ಪಕವಾಗಿ ಪಕ್ಷಕ್ಕೆ ಪೂರಕವಾಗಿ ಬಳಸಿಕೊಂಡು ಕಾರ್ಯಕರ್ತರು ಪಕ್ಷವನ್ನು ಸಂಘಟಿಸುವತ್ತ ಹೆಜ್ಜೆ ಇಡಬೇಕು ಎಂದು ಕರೆ ನೀಡಿದ ಡಿಕೆಶಿ ಏಕ ವ್ಯಕ್ತಿ ಏಕ ಹುದ್ದೆ ಸಿದ್ದಾಂತವನ್ನು ಗುರಿಯಾಗಿಸಿಕೊಂಡು ಪಕ್ಷದ ಎಲ್ಲ ಕಾರ್ಯಕರ್ತರಿಗೂ ಜವಬಾಬ್ದಾರಿ ಹಂಚುವ ಮೂಲಕ ಪಕ್ಷ ಸಂಘಟನೆಯ ಗುರಿ ಇರಿಸಿಕೊಳ್ಳಲಾಗಿದೆ. ಕಾಂಗ್ರೆಸ್ ಪಕ್ಷದ ಸಿದ್ದಾಂತ-ನೀತಿಯನ್ನು ಬಿಟ್ಟು ಯಾವುದೇ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದಿಲ್ಲ. ಮೊದಲಿಗೆ ಪಕ್ಷದ ಸಿದ್ದಾಂತ-ನೀತಿ ಮುಖ್ಯ. ಇದನ್ನು ಮೀರಿ ಯಾರೂ ನಡೆದುಕೊಳ್ಳುವಂತಿಲ್ಲ. ಹೃದಯಸ್ಪರ್ಶಿಯಾಗಿ ಪಕ್ಷದ ಸಿದ್ದಾಂತ ಒಪ್ಪಿಕೊಳ್ಳುವವರನ್ನು ಮಾತ್ರ ಪಕ್ಷ ಒಪ್ಪಿಕೊಳ್ಳುತ್ತದೆ ಎಂದರು.
ಯಾರ ಮನೆ ಬಾಗಿಲಿಗೂ ಅವಕಾಶಗಳು ಹುಡುಕಿಕೊಂಡು ಬರುವುದಿಲ್ಲ. ಪ್ರತಿಯೊಬ್ಬರು ಅವಕಾಶಗಳನ್ನು ಸೃಷ್ಟಿ ಮಾಡಿಕೊಳ್ಳಬೇಕು. 2021 ವರ್ಷದ ಪ್ರತಿ ನಿಮಿಷ ಕೂಡಾ ಹೋರಾಟದ ರಾಜಕಾರಣ ಮಾಡಬೇಕಿದೆ ಎಂದ ಡಿಕೆ ಶಿವಕುಮಾರ್ ರಾಜಕಾರಣ ಎಂಬುದು ವ್ಯವಸಾಯ ಇದ್ದಂತೆ. ಬೀಜ ಬಿತ್ತನೆಯಿಂದ ಹಿಡಿದು ಫಸಲು ಕೊಯ್ಯುವವರೆಗೆ ಬಹಳ ಕಷ್ಟ ಪಡಬೇಕಾಗುತ್ತದೆ. ಕೆಲವೊಮ್ಮೆ ಹವಾಮಾನ ವೈಪರೀತ್ಯದಿಂದ ರೈತರಿಗೆ ನಷ್ಟಗಳೂ ಸಂಭವಿಸಬಹುದು. ಇದೆಲ್ಲವನ್ನು ಸಹಿಸಿಕೊಂಡಾಗ ರೈತ ಲಾಭ ಗಳಿಸಬಲ್ಲ. ಅದೇ ರೀತಿ ರಾಜಕಾರಣದಲ್ಲೂ ಲಾಭ-ನಷ್ಟಗಳು ಸಾಮಾನ್ಯ. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಕಷ್ಟಗಳನ್ನು ಸಹಿಸಿಕೊಂಡರೂ ಜನರಿಗೆ ಹಿತವನ್ನೇ ಬಯಸುವ ಮೂಲಕ ಪಕ್ಷದ ಹಿತಕ್ಕಾಗಿ ಕಾರ್ಯೋನ್ಮುಖವಾಗಬೇಕು ಎಂದು ಕಿವಿ ಮಾತು ಹಿಡಿದರು.
ದಕ್ಷಿಣ ಕನ್ನಡ ಜಿಲ್ಲೆ ಮತ್ತೆ ಕಾಂಗ್ರೆಸ್ ಭದ್ರಕೋಟೆಯಾಗಲಿದೆ : ರೈ
ಸಮಾವೇಶದಲ್ಲಿ ಭಾಗವಹಿಸಿದ ಪಕ್ಷದ ನಾಯಕರನ್ನು ಸ್ವಾಗತಿಸಿ ಮಾತನಾಡಿದ ಮಾಜಿ ಸಚಿವ ಬಿ ರಮಾನಾಥ ರೈ, ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯನ್ನು ಬಿಜೆಪಿ ನಾಯಕರು ಜನರನ್ನು ಮತೀಯವಾಗಿ ವಿಭಜಿಸಿ, ಭಾವನಾತ್ಮಕವಾಗಿ ಕೆರಳಿಸಿ ಜಿಲ್ಲೆಯಲ್ಲಿ ತಮ್ಮ ಪ್ರಾಬಲ್ಯವನ್ನು ಹೆಚ್ಚಿಸಿಕೊಂಡಿದ್ದಾರೆಯೇ ವಿನಃ ಜಿಲ್ಲೆಗೆ ಬಿಜೆಪಿ ಕೊಡುಗೆ ನಗಣ್ಯ. ಕಾಂಗ್ರೆಸ್ ಪಕ್ಷದ ಜನಪರ ಯೋಜನೆಗಳ ಫಲವನ್ನು ಪಡೆದುಕೊಂಡಿದ್ದರಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಜನ ಪಕ್ಷದ ಕಾರ್ಯಕರ್ತರು ಮತ್ತೆ ಸಕ್ರಿಯವಾಗಿ ಸಂಘಟಿತರಾಗುವ ಮೂಲಕ ಜಿಲ್ಲೆಯಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಬಾವುಟ ಹಾರಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಪಕ್ಷದ ನಾಯಕರುಗಳಾದ ಬಿ ರಮಾನಾಥ ರೈ, ವಿಷ್ಣುನಾಥನ್, ಯು ಟಿ ಖಾದರ್, ಎಸ್ ಆರ್ ಪಾಟೀಲ್, ತನ್ವೀರ್ ಸೇಠ್, ಬಿ ಕೆ ಹರಿಪ್ರಸಾದ್, ಬಿ ಎಲ್ ಶಂಕರ್, ತಾರಾದೇವಿ, ಮೋಟಮ್ಮ, ವಿನಯ ಕುಮಾರ್ ಸೊರಕೆ, ಉಗ್ರಪ್ಪ, ಹರೀಶ್ ಕುಮಾರ್, ಪುಷ್ಪಾ ಅಮರನಾಥ್, ವಿ ಆರ್ ಸುದರ್ಶನ್ ಸೇರಿದಂತೆ ಮೈಸೂರು ವಿಭಾಗಕ್ಕೆ ಸೇರಿದ ಪಕ್ಷದ ಸುಮಾರು 700 ರಷ್ಟು ಮಂದಿ ನಾಯಕರು ಭಾಗವಹಿಸಿದ್ದರು.
0 comments:
Post a Comment