ಬಂಟ್ವಾಳ, ಜ. 09, 2021 (ಕರಾವಳಿ ಟೈಮ್ಸ್) : ಸಮಾಜ ಸೇವಾ ಸಹಕಾರಿ ಸಂಘ ನಿಯಮಿತ, ಬಂಟ್ವಾಳ ಇದರ 13ನೇ ಮೆಲ್ಕಾರ್ ಶಾಖೆಯ ಉದ್ಘಾಟನಾ ಕಾರ್ಯಕ್ರಮ ಜನವರಿ 14 ರಂದು ಗುರುವಾರ ಬೆಳಿಗ್ಗೆ 10.30ಕ್ಕೆ ಮೆಲ್ಕಾರ್ ಆರ್.ಆರ್. ಕಮರ್ಷಿಯಲ್ ಸೆಂಟರಿನ ನೆಲ ಅಂತಸ್ತಿನ ಕಟ್ಟದಲ್ಲಿ ನಡೆಯಲಿದೆ ಎಂದು ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಭೋಜ ಮೂಲ್ಯ ತಿಳಿಸಿದರು.
ಶನಿವಾರ ಸಂಜೆ ಬಂಟ್ವಾಳ ಬ್ಯಾಂಕಿನ ಪ್ರಧಾನ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ದೀಪ ಪ್ರಜ್ವಲನೆಗೈದು ಆಶೀರ್ವಚನಗೈಯುವರು. ಮೊಗರ್ನಾಡು ದೇವಮಾತಾ ಚರ್ಚಿನ ಧರ್ಮಗುರು ಡಾ. ಮಾರ್ಕ್ ಕ್ಯಾಸ್ಟಲಿನೋ ದಿವ್ಯ ಉಪಸ್ಥಿತರಿರಲಿದ್ದು, ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಉದ್ಘಾಟಿಸುವರು. ಸಂಸದ ನಳಿನ್ ಕುಮಾರ್ ಕಟೀಲ್ ಭದ್ರತಾ ಕೊಠಡಿ ಉದ್ಘಾಟಿಸುವರು. ಮಾಜಿ ಸಚಿವ ಬಿ ರಮಾನಾಥ ರೈ ಸೇಫ್ ಲಾಕರ್ ಉದ್ಘಾಟಿಸುವರು. ಮೈಸೂರು ಪ್ರಾಂತ ಸಹಕಾರಿ ಸಂಘಗಳ ಜಂಟಿ ನಿಬಂಧಕ ಪ್ರಕಾಶ್ ರಾವ್ ಕಂಪ್ಯೂಟರ್ ಉದ್ಘಾಟನೆ ನಡೆಸಲಿದ್ದು, ದ.ಕ. ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕ ಪ್ರವೀಣ್ ಕುಮಾರ್ ಠೇವಣಿ ಪತ್ರ ಬಿಡುಗಡೆಗೊಳಿಸುವರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಜೆ ಸುಧೀರ್ ಕುಮಾರ್, ಬಂಟ್ವಾಳ ಪುರಸಭಾಧ್ಯಕ್ಷ ಮುಹಮ್ಮದ್ ಶರೀಫ್, ಉಪಾಧ್ಯಕ್ಷೆ ಜೆಸಿಂತಾ ಡಿ’ಸೋಜ, ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಶ್ರೀ ಕ್ಷೇತ್ರ ಪಣೋಲಿಬೈಲು ಕ್ಷೇತ್ರದ ಪ್ರಧಾನ ಅರ್ಚಕ ವಾಸುದೇವ ಮೂಲ್ಯ, ಪಾಣೆಮಂಗಳೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಯಶಂಕರ ಬಾಸ್ರಿತ್ತಾಯ, ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷೆ ಜಯಂತಿ ಗಂಗಾಧರ, ಮೆಲ್ಕಾರ್ ಆರ್.ಆರ್. ಕಮರ್ಷಿಯಲ್ ಸೆಂಟರ್ ಕಟ್ಟಡ ಮಾಲಕ ರಾಮರಾಜ್ ರಾವ್ ಭಾಗವಹಿಸಲಿದ್ದಾರೆ ಎಂದರು.
ಸಮಾಜ ಸೇವಾ ಸಹಕಾರಿ ಸಂಘ ನಿಯಮಿತ, ಬಂಟ್ವಾಳ ಇದು 24-05-1981 ರಂದು ದಿವಂಗತ ಡಾ. ಅಮ್ಮೆಂಬಳ ಬಾಳಪ್ಪ ಅವರ ಮುಂದಾಳುತ್ವದಲ್ಲಿ ಸ್ಥಾಪನೆಯಾಗಿದ್ದು, ಅಂದಿನ ಕರ್ನಾಟಕ ಸರಕಾರದ ಹಣಕಾಸು ಮತ್ತು ಪ್ರವಾಸೋದ್ಯಮ ಸಚಿವ ಎಂ. ವೀರಪ್ಪ ಮೊಯಿಲಿ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಸರಕಾರದ ಮುಖ್ಯ ಸಚೇತಕ ಭಾಸ್ಕರ ಶೆಟ್ಟಿ, ಸಂಸದ ಜನಾರ್ದನ ಪೂಜಾರಿ, ರಾಜ್ಯ ಸಭಾ ಸದಸ್ಯ ಇಬ್ರಾಹಿಂ, ಶಾಸಕ ಬಿ ಎ ಮೊಯಿದಿನ್, ತಾಲೂಕು ಅಭಿವೃದ್ದಿ ಮಂಡಳಿ ಅಧ್ಯಕ್ಷ ಕೆ. ಮಹಾಬಲ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು ಎಂದ ಭೋಜ ಮೂಲ್ಯ 131 ಸದಸ್ಯರಿಂದ ರೂ. 22,620/- ಪಾಲು ಬಂಡವಾಳದೊಂದಿಗೆ ಬ್ಯಾಂಕ್ ಕಾರ್ಯಾರಂಭ ಮಾಡಿತ್ತು ಎಂದರು.
ಬಂಟ್ವಾಳ ಬೈಪಾಸ್ ಜಂಕ್ಷನ್ನಿನಲ್ಲಿ ಸಹಕಾರಿಯು ಸ್ವಂತ ಕಟ್ಟದಲ್ಲಿ ಕೇಂದ್ರ ಕಛೇರಿ ಹೊಂದಿದ್ದು, ತಮ್ಮ 12 ಶಾಖೆಗಳಾದ ಬಂಟ್ವಾಳ ಪಟ್ಟಣ, ಫರಂಗಿಪೇಟೆ, ವಿಟ್ಲ, ಮುಡಿಪು, ಕುಕ್ಕಾಜೆ, ಬೈಪಾಸ್, ಪಡೀಲ್, ಕಲ್ಲಡ್ಕ, ಬಜಪೆ, ಬಿ.ಸಿ.ರೋಡು, ಪೂಂಜಾಲಕಟ್ಟೆ ಹಾಗೂ ಪುತ್ತೂರು ಶಾಖೆಗಳಲ್ಲಿ ಉತ್ತಮ ಬ್ಯಾಂಕಿಂಗ್ ಸೇವಾ ಸೌಲಭ್ಯವನ್ನು ನೀಡುತ್ತಾ ಬಂದಿದೆ ಎಂದ ಅವರು ಪ್ರಸ್ತುತ 2020ರ ಮಾರ್ಚ್ ಅಂತ್ಯಕ್ಕೆ ಸಹಕಾರಿಯಲ್ಲಿ ಒಟ್ಟು 6951 ಎ ತರಗತಿ ಸದಸ್ಯರಿದ್ದು, ರೂ. 7.05 ಕೋಟಿ ಪಾಲು ಬಂಡವಾಳ, ರೂ. 145.34 ಕೋಟಿ ಠೇವಣಿ ಹೊಂದಿದೆ. ರೂ. 111.52 ಕೋಟಿ ಸಾಲ ನೀಡಿದ್ದು, ರೂ. 9.84 ಕೋಟಿ ನಿಧಿ ಹೊಂದಿದೆ. ರೂ. 48.40 ಕೋಟಿ ವಿನಿಯೋಗ ಮಾಡಿದ ಸಹಕಾರಿ 164.34 ಕೋಟಿ ರೂಪಾಯಿ ದುಡಿಯುವ ಬಂಡವಾಳ ಹೊಂದಿರುತ್ತದೆ. ಮಾರ್ಚ್ 2020ಕ್ಕೆ ರೂ. 1.78 ಕೋಟಿ ಲಾಭ ಗಳಿಸಿ, 2019-20ನೇ ಸಾಲಿನಲ್ಲಿ ಶೆ. 15 ಡೆವಿಡೆಂಡ್ ನೀಡಲಾಗಿದ್ದು, ಸಹಕಾರಿಯು ಒಟ್ಟು 526 ಕೋಟಿ ರೂಪಾಯಿಗೂ ಮಿಕ್ಕಿದ ವ್ಯವಹಾರ ಮಾಡಿದೆ. 2019-20ನೇ ಸಾಲಿನಲ್ಲಿ ಅಡಿಟ್ ವರ್ಗೀಕರಣ ‘ಎ’ ಶ್ರೇಣಿಯಾಗಿದ್ದು, ಶೇಕಡಾವಾರು ವಸೂಲಾತಿ ಶೇ. 95.10 ಆಗಿರುತ್ತದೆ. ಸಹಕಾರಿಯು 2006ರಲ್ಲಿ ಬೆಳ್ಳಿ ಹಬ್ಬ ಆಚರಿಸಿದೆ. ಸಹಕಾರಿಯ ಕೇಂದ್ರ ಕಛೇರಿ, ಪೂಂಜಾಲಕಟ್ಟೆ ಕಛೇರಿಗಳು ಸ್ವಂತ ಕಟ್ಟಡಗಳಲ್ಲಿ ಕಾರ್ಯಾಚರಿಸುತ್ತಿದ್ದು, ಮುಡಿಪು ಶಾಖೆಗೆ ಸ್ವಂತ ಕಟ್ಟಡ ಖರೀದಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೆರಡು ಶಾಖೆಗಳನ್ನು ತೆರೆಯುವ ಬಗ್ಗೆ ನಿರ್ಧರಿಸಲಾಗಿದೆ. ಒಟ್ಟು 59 ಮಂದಿ ಸಿಬ್ಬಂದಿಗಳು ಹಾಗೂ ಇತರ ಠೇವಣಾತಿ ಸಂಗ್ರಾಹಕರಾಗಿ 23 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಹಕಾರಿ ವತಿಯಿಂದ ಉನ್ನತ ವ್ಯಾಸಂಗಕ್ಕಾಗಿ ವಿದ್ಯಾರ್ಥಿಗಳಿಗೆ ವಿದ್ಯಾನಿಧಿಯಿಂದ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಸದಸ್ಯರ ಅನುಕೂಲಕ್ಕಾಗಿ ಬಂಟ್ವಾಳ ಬೈಪಾಸ್ ಶಾಖೆಯಲ್ಲಿ ಇ-ಸ್ಟಾಂಪ್ ಸೌಲಭ್ಯ ಅಳವಡಿಸಲಾಗಿದೆ. ಸೇಫ್ ಲಾಕರ್ ಸೌಲಭ್ಯವಿದ್ದು, ಸದಸ್ಯರ ಗಂಭೀರ ಕಾಯಿಲೆಗಳಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ. ಸಂಸ್ಥೆಯ ಗ್ರಾಹಕರಿಗಾಗಿ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಯನ್ನು ಅಳವಡಿಸಲಾಗಿದೆ ಎಂದು ಭೋಜ ಮೂಲ್ಯ ಸುದ್ದಿಗಾರರಿಗೆ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಬ್ಯಾಂಕ್ ಅಧ್ಯಕ್ಷ ಸುರೇಶ್ ಕುಲಾಲ್, ಉಪಾಧ್ಯಕ್ಷ ಪದ್ಮನಾಭ ವಿ., ಆಡಳಿತ ಮಂಡಳಿ ಸದಸ್ಯರುಗಳಾದ ವಿಶ್ವನಾಥ ಕೆ.ಬಿ., ರಮೇಶ್ ಸಾಲ್ಯಾನ್, ಅರುಣ್ ಕುಮಾರ್, ಬಿ ರಮೇಶ್ ಸಾಲ್ಯಾನ್, ನಾಗೇಶ್ ಬಿ., ಎಂ. ವಾಮನ ಟೈಲರ್, ಸುರೇಶ್ ಎನ್., ಸತೀಶ್, ವಿ. ವಿಜಯ ಕುಮಾರ್, ಜಯಂತಿ, ವಿದ್ಯಾ, ಜನಾರ್ದನ ಬೊಂಡಾಲ, ಜಗನ್ನಿವಾಸ ಗೌಡ, ಎಂ. ಗಣೇಶ್ ಸಮಗಾರ, ವಿಜಯಲಕ್ಷ್ಮಿ, ಶಾಖಾ ವ್ಯವಸ್ಥಾಪಕ ಸುಂದರ ಮೂಲ್ಯ ಮೊದಲಾದವರು ಉಪಸ್ಥಿತರಿದ್ದರು.
9 January 2021
- Blogger Comments
- Facebook Comments
Subscribe to:
Post Comments (Atom)
0 comments:
Post a Comment