ಬೆಂಗಳೂರು, ಜ 17, 2021 (ಕರಾವಳಿ ಟೈಮ್ಸ್) : ಲೆಕ್ಕಪರಿಶೋಧಕರು ತಮ್ಮ ವೃತ್ತಿಯಲ್ಲಿ ನೈತಿಕತೆ, ಮೌಲ್ಯ, ನಿಷ್ಠೆ ಇವುಗಳನ್ನು ಸಂಪೂರ್ಣವಾಗಿ ಪಾಲಿಸಿದರೆ ದೇಶದಲ್ಲಿ ದೊಡ್ಡ ಬದಲಾವಣೆ ಸಾದ್ಯ. ಇದರಿಂದ ದೇಶದ ಆರ್ಥಿಕ ಕ್ಷೇತ್ರದಲ್ಲೂ ಕ್ರಾಂತಿಯನ್ನು ಮಾಡಬಹುದಾಗಿದೆ ಎಂದು ರಾಜ್ಯ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅಭಿಪ್ರಾಯಪಟ್ಟರು.
ಇನ್ಸಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಬೆಂಗಳೂರು ಶಾಖೆಯ ಕಟ್ಟಡದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸದಸ್ಯರ ಲಾಂಜ್ ಹಾಗೂ ಹೊಸ ಐಟಿಟಿ ಪ್ರಯೋಗಾಲಯ ಉದ್ಘಾಟಿಸಿ ಮಾತನಾಡಿದ ಅವರು ಸಮಾಜದಲ್ಲಿರುವ ಕೆಲವೇ ನೈಜ ಕಾನೂನು ಪಾಲನೆ ಮತ್ತು ನೈತಿಕತೆಯನ್ನು ಹೊಂದಿರುವ ವೃತ್ತಿಗಳ ಪೈಕಿ ಚಾರ್ಟೆಡ್ ಅಕೌಂಟೆಂಟ್ ವೃತ್ತಿಯೂ ಒಂದು. ನಮ್ಮ ದೇಶದಲ್ಲಿ ಹಲವು ಸರ್ಕಾರಿ ಉದ್ಯೋಗಿಗಳಿದ್ದಾರೆ. ಆದರೆ, ಅಲ್ಪ ಮಾತ್ರದ ಸೇವೆ ಲಭ್ಯವಾಗುತ್ತಿದೆ. ಸಾಕಷ್ಟು ಕಾನೂನುಗಳಿವೆ ಮತ್ತು ಕೆಲವೇ ಜಾರಿಯಾಗುತ್ತಿವೆ. ಇವುಗಳನ್ನು ಮತ್ತಷ್ಟು ಸದೃಢಗೊಳಿಸಲು ಮತ್ತು ಸಂಯೋಜಿತಗೊಳಿಸಲು ಹೆಚ್ಚಿನ ನೈತಿಕ ಉದ್ಯೋಗಗಳ ಅಗತ್ಯವಿದೆ ಎಂದರು.
ತೆರಿಗೆ ಪಾವತಿದಾರರು ಮತ್ತು ಸರ್ಕಾರದ ನಡುವೆ, ಲೆಕ್ಕ ಪರಿಶೋಧಕರು ಸೇತುವೆಯಾಗಿ ಕೆಲಸ ಮಾಡುತ್ತಾರೆ. ಲೆಕ್ಕ ಪರಿಶೋಧಕರು, ಸರ್ಕಾರದ ತೆರಿಗೆ ನೀತಿಗಳ ಕುರಿತು ಬಹಿರಂಗವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ರಚನಾತ್ಮಕ ಸಲಹೆಗಳನ್ನು ನೀಡಬೇಕು ಎಂದವರು ಸಲಹೆ ನೀಡಿದರು.
ಸಾಕಷ್ಟು ಶ್ರಮವಹಿಸಿ ಈ ಹುದ್ದೆಯನ್ನು ತಲುಪಿದ ಲೆಕ್ಕ ಪರಿಶೋಧಕರು, ಸಮಾಜದ ಇತರ ಜನರ ನೆರವಿಗೆ ಮುಂದಾಗಬೇಕು. ಬ್ಯುಸಿನೆಸ್ ಕ್ಷೇತ್ರದಲ್ಲಿ ಚಾರ್ಟೆಡ್ ಅಕೌಂಟೆಂಟ್ ಅತ್ಯಂತ ಪ್ರಭಾವಿ ವ್ಯಕ್ತಿಗಳಾಗಿರುತ್ತಾರೆ. ಅದನ್ನು ಸಮಾಜದ ಉತ್ತಮ ಕಾರ್ಯಗಳಿಗಾಗಿ ಬಳಸಿಕೊಳ್ಳಬೇಕು. ಜನರಲ್ಲಿ ತೆರಿಗೆ ಪಾವತಿ ಕುರಿತು ನೈತಿಕ ಭಾವನೆಗಳನ್ನು ತುಂಬಲು ಯತ್ನಿಸಬೇಕು ಎಂದು ಗೃಹ ಸಚಿವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯ ಬೆಂಗಳೂರು ಶಾಖಾಧ್ಯಕ್ಷ ರವೀಂದ್ರ ಕೋರೆ, ಕಾರ್ಯದರ್ಶಿ ಎಸ್.ಎ. ಶ್ರೀನಿವಾಸ ಟಿ., ಐಸಿಎಐ ಮಾಜಿ ಅಧ್ಯಕ್ಷ ಬಿ.ಪಿ. ರಾವ್, ಕೆ. ರಘು ಮೊದಲಾದವರು ಉಪಸ್ಥಿತರಿದ್ದರು.
17 January 2021
- Blogger Comments
- Facebook Comments
Subscribe to:
Post Comments (Atom)
0 comments:
Post a Comment