ಅಡಿಲೇಡ್, ಡಿ. 19, 2020 (ಕರಾವಳಿ ಟೈಮ್ಸ್) : ಆಸ್ಟ್ರೇಲಿಯಾದ ಅಡಿಲೇಡ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನವಾದ ಶನಿವಾರ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಭಾರತ ಅತ್ಯಂತ ಕಳಪೆ ಪ್ರದರ್ಶನ ನೀಡಿದೆ. ಇದರಿಂದಾಗಿ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ ಹಿನ್ನಡೆಯ ಹೊರತಾಗಿಯೂ ಸುಲಲಿತ ಜಯ ದಾಖಲಿಸುವ ಮೂಲಕ 4 ಟೆಸ್ಟ್‍ಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.
ಪ್ರಥಮ ಇನ್ನಿಂಗ್ಸಿನಲ್ಲಿ ಸಾಧಾರಣ ಮೊತ್ತ ಗಳಿಸಿದ ಟೀಂ ಇಂಡಿಯಾ ಬಳಿಕ ಅಮೋಘ ಬೌಲಿಂಗ್ ಪ್ರದರ್ಶನದ ಮೂಲಕ ಆಸ್ಟ್ರೇಲಿಯಾ ತಂಡದ ದಾಂಡಿಗರನ್ನು ಕಟ್ಟಿ ಹಾಕುವಲ್ಲಿ ಸಫಲವಾಗಿ 53 ರನ್‍ಗಳ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸಿತ್ತು. ಆದರೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಕೊಹ್ಲಿ ಪಡೆ ಅತ್ಯಂತ ಕಳಪೆ ಪ್ರದರ್ಶನ ನೀಡಿ ಕೇವಲ 36 ರನ್ ಮಾತ್ರ ಒಟ್ಟುಗೂಡಿಸಿತು. ಭಾರತೀಯ ದಾಂಡಿಗರು ಅಕ್ಷರಶಃ ಪೆವಿಲಿಯನ್ ಪೆರೇಡ್ ನಡೆಸಿಯೇ ಬಿಟ್ಟರು. ಯಾವುದೇ ದಾಂಡಿಗರು ಕನಿಷ್ಠ ಎರಡಂಕೆ ಮೊತ್ತ ತಲುಪಲೂ ವಿಫಲರಾದರು. ಮಯಾಂಕ್ ಅಗರವಾಲ್ ಅವರ 9 ರನ್ ಭಾರತೀಯ ಇನ್ನಿಂಗ್ಸಿನ ಗರಿಷ್ಠ ವೈಯುಕ್ತಿಕ ಸ್ಕೋರ್.
ಮೊದಲ ಇನ್ನಿಂಗ್ಸ್‍ನಲ್ಲಿ ಟೀಂ ಇಂಡಿಯಾ 244 ರನ್ ಭಾರಿಸಿದ್ದರೆ, ಆಸ್ಟ್ರೇಲಿಯಾ ಕೇವಲ 191 ರನ್‍ಗಳಿಗೆ ಆಲೌಟ್ ಆಗಿತ್ತು. ಈ ಮೂಲಕ 53 ರನ್‍ಗಳ ಮುನ್ನಡೆ ಕಾಯ್ದುಕೊಂಡಿತ್ತು. ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಭಾರತೀಯ ಆರಂಭಿಕರಾದ ಪೃಥ್ವಿ ಶಾ ಹಾಗೂ ಮಯಾಂಕ್ ಕ್ರಮವಾಗಿ 4 ಹಾಗೂ 9 ರನ್ ಗಳಿಸಿ ಔಟಾದರು.
ಬಳಿಕ ನೈಟ್ ವಾಚ್‍ಮೆನ್ ಆಗಿ ಕ್ರೀಸಿಗೆ ಬಂದಿದ್ದ ಬುಮ್ರಾ ಕೇವಲ 2 ರನ್ ಗಳಿಸಿ ಔಟಾದರೆ, ಚೇತೇಶ್ವರ ಪೂಜಾರ ಶೂನ್ಯ ಸಂಪಾದಿಸಿ ಹೊರನಡೆದರು. ನಾಯಕ ವಿರಾಟ್ ಕೊಹ್ಲಿ ಗಳಿಕೆ 4 ರನ್‍ಗಳಿಗೆ ಸೀಮಿತಗೊಂಡಿತು.
ಉಪನಾಯಕ ರಹಾನೆ ಹಾಗೂ ಆರ್ ಅಶ್ವಿನ್ ಕೂಡಾ ಶೂನ್ಯ ಸುತ್ತಿದರು, ಹನುಮ ವಿಹಾರಿ 8 ರನ್, ಉಮೇಶ್ 4 ರನ್ ಗಳಿಸಿದರೆ, ಮೊಹಮ್ಮದ್ ಶಮಿ ಕೇವಲ 1 ರನ್ ಗಳಿಸಿ ಗಾಯಾಳುವಾಗಿ ಪೆವಿಲಿಯನ್ ಸೇರಿದರು. ಟೀಂ ಇಂಡಿಯಾ ಅಂತಿಮವಾಗಿ ಜುಜುಬಿ 36 ರನ್‍ಗಳಿಗೆ ಎರಡನೇ ಇನ್ನಿಂಗ್ಸ್ ಮುಕ್ತಾಯಗೊಳಿಸಿತು. ಮೊದಲ ಇನ್ನಿಂಗ್ಸ್ ಮುನ್ನಡೆ ಸೇರಿ ಆಸ್ಟ್ರೇಲಿಯಾಕ್ಕೆ 90 ರನ್‍ಗಳ ಗುರಿ ನಿಗದಿಪಡಿಸಲಾಯಿತು. ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 2 ವಿಕೆಟ್ ಕಳೆದುಕೊಂಡು ಗುರಿ ತಲುಪುವ ಮೂಲಕ ಮೊದಲ ಟೆಸ್ಟ್ ಪಂದ್ಯವನ್ನು 8 ವಿಕೆಟ್‍ಗಳಿಂದ ಗೆದ್ದುಕೊಂಡಿತು.
0 comments:
Post a Comment