ಮಂಗಳೂರು, ಡಿ. 02, 2020 (ಕರಾವಳಿ ಟೈಮ್ಸ್) : ಉಳ್ಳಾಲ ಅರಬ್ಬೀ ಸಮುದ್ರದಲ್ಲಿ ಮಂಗಳವಾರ ಮುಂಜಾನೆ ಅವಘಡಕ್ಕೊಳಗಾದ ಬೋಟ್ ನಿಂದ ಕಾಣೆಯಾಗಿದ್ದ ಇನ್ನಿಬ್ಬರ ಮೃತ ಶರೀರಗಳು ಬುಧವಾರ ಪತ್ತೆಯಾಗಿದೆ. ಈ ಮೂಲಕ ಕಾಣೆಯಾದ ಆರು ಮಂದಿಯ ಪೈಕಿ ನಾಲ್ಕು ಮಂದಿಯ ಮೃತದೇಹ ಪತ್ತೆಯಾದಂತಾಗಿದೆ.
ಬೊಕ್ಕಪಟ್ಣ ನಿವಾಸಿ ಚಿಂತನ್ (21) ಹಾಗೂ ಕಸ್ಬಾ ಬೆಂಗ್ರೆ ನಿವಾಸಿ ಹಸೈನಾರ್ (25) ಅವರ ಮೃತದೇಹ ಬುಧವಾರ ಪತ್ತೆಯಾಗಿದೆ. ಮಂಗಳವಾರ ಬೊಕ್ಕಪಟ್ಣ ಬೆಂಗ್ರೆಯ ಪಾಂಡುರಂಗ ಸುವರ್ಣ (58) ಹಾಗೂ ಪ್ರೀತಂ (25) ಎಂಬವರ ಮೃತದೇಹಗಳು ಪತ್ತೆಯಾಗಿತ್ತು.
ಉಳ್ಳಾಲದ ಅರಬ್ಬೀ ಸಮುದ್ರ ತೀರದಿಂದ ಸುಮಾರು 25 ಕಿ.ಮೀ ದೂರದಲ್ಲಿ ಮಂಗಳವಾರ ನಸುಕಿನ ಜಾವ ಘಟನೆ ಸಂಭವಿಸಿತ್ತು. ಬೋಳಾರದ ಪ್ರಶಾಂತ್ ಅವರಿಗೆ ಸೇರಿದ ಶ್ರೀರಕ್ಷಾ ಬೋಟ್‍ನಲ್ಲಿ ಸೋಮವಾರ ನಸುಕಿನ ಜಾವ 5ರ ವೇಳೆಗೆ ಧಕ್ಕೆಯಿಂದ ಆಳಸಮುದ್ರ ಮೀನುಗಾರಿಕೆಗೆ 22 ಮಂದಿ ತೆರಳಿದ್ದರು. ಬೆಳಗ್ಗಿನಿಂದ ಸಂಜೆಯವರೆಗೆ ಮೀನುಗಾರಿಕೆ ನಡೆಸಿ, ಮಂಗಳವಾರ ಮುಂಜಾನೆ ವಾಪಸ್ ಧಕ್ಕೆ ತಲುಪುವುದಿತ್ತು. ಆದರೆ, ಸಮಯ ಕಳೆದರೂ ಬೋಟ್ ವಾಪಸಾಗದ ಹಿನ್ನೆಲೆಯಲ್ಲಿ ಬೋಟ್ ಮಾಲೀಕರು ವಯರ್ ಲೆಸ್ ಮೂಲಕ ದೋಣಿಯಲ್ಲಿದ್ದವರನ್ನು ಸಂಪರ್ಕಿಸಲು ಯತ್ನಿಸಿದಾಗ ಸಂಪರ್ಕ ಸಾಧ್ಯವಾಗಿರಲಿಲ್ಲ. ಇದರಿಂದ ಸಂಶಯಗೊಂಡು ಉಳಿದ ಮೀನುಗಾರಿಕಾ ಬೋಟ್‍ನವರನ್ನು ಸಂಪರ್ಕಿಸಿ ಬೋಟ್ ಹುಡುಕುವಂತೆ ತಿಳಿಸಿದ್ದರು.
ಅದರಂತೆ ಇತರೆ ಮೀನುಗಾರಿಕಾ ಬೋಟ್‍ನವರು ಆಳಸಮುದ್ರದಲ್ಲಿ ಹುಟುಕಾಟ ನಡೆಸಿದಾಗ ಒಂದು ಕಡೆಯಲ್ಲಿ ಖಾಲಿ ಬಲೆ ಪತ್ತೆಯಾಗಿತ್ತು. ಅಲ್ಲಿಂದ ಹಲವು ನಾಟಿಕಲ್ ಮೈಲ್ ದೂರದಲ್ಲಿ ಡೆಂಗೀಯಲ್ಲಿ 16 ಮಂದಿ ಕುಳಿತಿರುವುದು ಕಂಡು ಬಂದಿತ್ತು. ಕೂಡಲೇ ಅವರನ್ನು ಇತರೆ ಬೋಟ್‍ನವರು ರಕ್ಷಿಸಿದ್ದಾರೆ. ಈ ವೇಳೆ ಆರು ಮಂದಿ ಬೋಟ್‍ನ ಕ್ಯಾಬಿನ್ ಒಳಗಿದ್ದವರು ನಾಪತ್ತೆಯಾಗಿರುವ ಕುರಿತು ಮಾಹಿತಿ ನೀಡಿದ್ದರು. ಮಾಹಿತಿಯಂತೆ ಕಾರ್ಯಾಚರಣೆ ಆರಂಭಿಸಿದ್ದ ಮುಳುಗು ತಜ್ಞರು, ತೀವ್ರ ಹುಡುಕಾಟ ನಡೆಸಿ ಇಬ್ಬರ ಮೃತದೇಹಗಳನ್ನು ಮೇಲಕ್ಕೆತ್ತಿದ್ದರು. ಸಮುದ್ರದ ಅಲೆಗಳ ಏರಿಳಿತ ಹೆಚ್ಚಾದ ಹಿನ್ನೆಲೆಯಲ್ಲಿ ಮತ್ತು ಸಂಜೆಯಾದ ಕಾರಣ ರಕ್ಷಣಾ ಕಾರ್ಯಾಚರಣೆಯನ್ನು ದಿನದ ಮಟ್ಟಿಗೆ ಸ್ಥಗಿತಗೊಳಿಸಲಾಗಿತ್ತು. ಬುಧವಾರ ಬೆಳಿಗ್ಗೆ ಮತ್ತೆ ಕಾರ್ಯಾಚರಣೆ ಆರಂಭಿಸಿ ಇನ್ನಿಬ್ಬರ ಮೃಹದೇಹಗಳನ್ನು ಮೇಲಕ್ಕೆತ್ತಿದ್ದಾರೆ. ಉಳಿದ ಇಬ್ಬರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಪ್ರಸ್ತುತ ಪತ್ತೆಯಾಗಿರುವ ನಾಲ್ವರ ಮೃತದೇಹಗಳನ್ನು ವೆನ್ಲಾಕ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕೊಂಡೊಯ್ಯಲಾಗಿದೆ.
0 comments:
Post a Comment