ಬೆಂಗಳೂರು, ಡಿಸೆಂಬರ್ 26, 2020 (ಕರಾವಳಿ ಟೈಮ್ಸ್) : ದೇಶದ ಮಾಜಿ ಪ್ರಧಾನ ಮಂತ್ರಿ, ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆಯನ್ನು ಅದಮ್ಯ ಚೇತನ ಹಾಗೂ ಅನಂತಕುಮಾರ್ ಪ್ರತಿಷ್ಠಾನದಿಂದ ಬೆಂಗಳೂರಿನಲ್ಲಿ ಶುಕ್ರವಾರ ಆಚರಿಸಲಾಯಿತು.
ಅದಮ್ಯ ಚೇತನ ಸಂಸ್ಥೆಯ ಪಕ್ಕದಲ್ಲಿರುವ ಕನ್ನಡ ಕಟ್ಟೆಯಲ್ಲಿ ಮತ್ತು ಜಯನಗರದ 4ನೇ ಹಂತದ ಜೈನ ಮಂದಿರದ ಬಳಿ ಅದಮ್ಯ ಚೇತನ ಸಂಸ್ಥೆಯ ವತಿಯಿಮಧ ಪ್ರತಿನಿತ್ಯ ಉಚಿತವಾಗಿ ನೀಡಲಾಗುತ್ತಿರುವ ಅನ್ನದಾನದಲ್ಲಿ ಸಿಹಿ ಊಟವನ್ನು ಬಡಿಸಲಾಯಿತು.
ಸಂಜೆ ಅನಂತಕುಮಾರ್ ಪ್ರತಿಷ್ಠಾನದಿಂದ ಅಟಲ್ ಬಿಹಾರಿ ವಾಜಪೇಯಿ ವಿರಚಿತ ಆಯ್ದ ಹಾಡುಗಳ ಸಂಗೀತ ನಮನವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅಟಲ್ ಜಿ ವಿರಚಿತ ಹಾಡುಗಳನ್ನು ಡಾ ಪದ್ಮಿನಿ ಓಕ್ ಅವರು ಸುಶ್ರಾವ್ಯವಾಗಿ ಹಾಡಿದರು. ಕ್ಯಾ ಖೋಯಾ ಕ್ಯಾ ಪಾಯಾ ಜಗಮೇ, ಭಾರತ್ ಜಮೀನ್ ಕ ತುಕಡಾ ನಹೀ ಹೀಗೆ ಹಲವು ಹಾಡುಗಳನ್ನು ಹಾಡಲಾಯಿತು ಹಾಗೂ ಅವುಗಳ ಭಾವಾರ್ಥವನ್ನು ತಿಳಿಸಿಕೊಡಲಾಯಿತು. ಐಶ್ವರ್ಯ ಅನಂತಕುಮಾರ್ ಅವರು ನಡೆಸಿಕೊಟ್ಟ ಈ ಕಾರ್ಯಕ್ರಮವನ್ನು ಫೇಸ್‍ಬುಕ್ ಲೈವ್ ಮೂಲಕ ದೇಶಾದ್ಯಂತ ಲಕ್ಷಾಂತರ ಜನ ವೀಕ್ಷಿಸಿದರು.
ದಿವಂಗತ ಅನಂತಕುಮಾರ್ ಅವರು ಅಟಲ್ ಬಿಹಾರಿ ವಾಜಪೇಯಿ ಅವರ ಸಚಿವ ಸಂಪುಟದಲ್ಲಿ ಮೊದಲ ಬಾರಿಗೆ ಕೇಂದ್ರದ ಮಂತ್ರಿಗಳಾಗಿದ್ದನ್ನು ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ಡಾ ತೇಜಸ್ವಿನಿ ಅನಂತಕುಮಾರ್ ನೆನೆಪಿಸಿಕೊಂಡರು. ಮೊದಲ ಬಾರಿ ಪ್ರಮಾಣವಚನ ಸ್ವೀಕಾರ ಹಾಗೂ ಖಾತೆ ಹಂಚಿಕೆಯ ವೇಳೆ ಅಟಲ್ ಜಿ ಅವರೊಂದಿಗಿನ ಒಡನಾಟವನ್ನು ಅವರು ಮೆಲಕು ಹಾಕಿದರು.
0 comments:
Post a Comment