ಮಂಗಳೂರು, ಡಿ. 19, 2020 (ಕರಾವಳಿ ಟೈಮ್ಸ್) : ಬೆಳ್ತಂಗಡಿ ತಾಲೂಕಿನ ಉಜಿರೆಯ ಬಾಲಕನ ಅಪಹರಣ ಪ್ರಕರಣ ಬೇಧಿಸುವಲ್ಲಿ ಸಫಲರಾಗಿದ್ದು, ಎಂಟು ವರ್ಷದ ಬಾಲಕ ಅನುಭವ್ ನನ್ನು ರಕ್ಷಿಸಲಾಗಿದೆ. ಅಪಹರಣ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾದ ಮಂಡ್ಯದ ಗಂಗಾಧರ್, ಎಲೆಕ್ಟ್ರಾನಿಕ್ ಸಿಟಿಯ ಕೋಮಲ್ ಎಂಬವರನ್ನು ಕೋಲಾರದಲ್ಲಿ ಬಂಧಿಸುವಲ್ಲಿ ಮಂಗಳೂರು ಪೋಲೀಸರ ವಿಶೇಷ ತಂಡ ಯಶಸ್ವಿಯಾಗಿದೆ.
ಬಂಧಿತರನ್ನು ಶನಿವಾರ ಕೋಲಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯ ಕೂರ್ನಹೊಸಳ್ಳಿ ಗ್ರಾಮದಲ್ಲಿ ಆರೋಪಿಗಳನ್ನು ಬಂಧಿಸಲಾಗಿದ್ದು ಗ್ರಾಮದ ಮಂಜುನಾಥ್ ಎಂಬುವರ ಮನೆಯಲ್ಲಿದ್ದ ಬಾಲಕನನ್ನು ರಕ್ಷಿಸಲಾಗಿದೆ.
ಕೋಲಾರ ಎಸ್.ಪಿ. ಕಾರ್ತಿಕ್ ರೆಡ್ಡಿ ಸಹಾಯ ಪಡೆದ ಮಂಗಳೂರು ಪೋಲೀಸ್ ವಿಶೇಷ ತಂಡ ಕ್ಲಿಷ್ಟಕರವಾಗಿದ್ದ ಪ್ರಕರಣವನ್ನು ಬೇಧಿಸುವಲ್ಲಿ ಸಫಲರಾಗಿದ್ದಾರೆ.
ಗುರುವಾರ ಸಂಜೆ ಮನೆಯ ಹೊರಗೆ ರಸ್ತೆ ಬದಿ ಆಡುತ್ತಿದ್ದ ಸ್ಥಳೀಯ ಉದ್ಯಮಿಯ ಪುತ್ರ, ಬಾಲಕ ಅನುಭವ್ ನನ್ನು ಇಂಡಿಕಾ ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಅಪಹರಿಸಿದ್ದರು. ಬಳಿಕ ಬಾಲಕನ ಪೋಷಕರಿಗೆ ಕರೆ ಮಾಡಿದ ಅಪಹರಣಕಾರರು 17ಕೋಟಿ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದರು. ಈ ಮೊತ್ತವನ್ನು ನಗದು ಅಥವಾ ಚೆಕ್ ಮೂಲಕ ನೀಡದೆ ಬಿಟ್ ಕಾಯಿನ್ ಮೂಲಕ ನೀಡುವಂತೆ ಅಪಹರಣಕಾರರು ಒತ್ತಾಯಿಸಿದ್ದರು. ಈ ಬಗ್ಗೆ ಬಾಲಕನ ಅಜ್ಜ ಎ ಕೆ ಶಿವನ್ ಅವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಜಿಲ್ಲೆಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಬಾಲಕನ ಅಪಹರಣ ಪ್ರಕರಣವನ್ನು ಕೊನೆಗೂ ಬೇಧಿಸುವಲ್ಲಿ ಮಂಗಳೂರಿನ ವಿಶೇಷ ಪೊಲೀಸ್ ತಂಡ ಯಶಸ್ವಿಯಾಗಿದೆ.
0 comments:
Post a Comment