ಮೇಲ್ಬರ್ನ್, ಡಿ. 29, 2020 (ಕರಾವಳಿ ಟೈಮ್ಸ್) : ಇಲ್ಲಿನ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 8 ವಿಕೆಟ್‍ಗಳ ಜಯ ಸಾಧಿಸುವ ಮೂಲಕ 4 ಪಂದ್ಯಗಳ ಟೆಸ್ಟ್ ಸರಣಿಯನ್ನು 1-1 ಅಂತರದಿಂದ ಸಮಬಲ ಮಾಡಿಕೊಂಡಿದೆ.
ಪಂದ್ಯದ 4ನೇ ದಿನವಾದ ಮಂಗಳವಾರ ಆಸ್ಟ್ರೇಲಿಯಾ ತಂಡವನ್ನು 200 ರನ್‍ಗಳಿಗೆ ಆಲೌಟ್ ಮಾಡಿದ ಟೀಂ ಇಂಡಿಯಾ ಗೆಲುವಿಗಾಗಿ 70 ರನ್‍ಗಳ ಗುರಿ ಪಡೆಯಿತು. ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭದಲ್ಲೇ ಮಯಾಂಕ್ ಅಗರ್ ವಾಲ್ (5) ಮತ್ತು ಚೇತೇಶ್ವರ ಪೂಜಾರ (3) ಅವರ ವಿಕೆಟ್ ಕಳೆದುಕೊಂಡು ಆಘಾತ ಎದುರಾಗಿತ್ತು. ಆದರೆ, ಯುವ ಆಟಗಾರ ಶುಭಮನ್ ಗಿಲ್ (35) ಹಾಗೂ ನಾಯಕ ಅಜಿಂಕ್ಯ ರಹಾನೆ (27) ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಭಾರತ 15.5 ಓವರ್‍ಗಳಲ್ಲಿ 2 ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು.
ಇದಕ್ಕೂ ಮುನ್ನ ಆಸ್ಟ್ರೇಲಿಯಾ ತಂಡವನ್ನು 200 ರನ್ ಗಳಿಗೆ ಕಟ್ಟಿಹಾಕುವಲ್ಲಿ ಭಾರತ ಯಶಸ್ವಿಯಾಗಿತ್ತು. ಆರನೇ ಕ್ರಮಾಂಕದಲ್ಲಿ ಆಡಿದ ಕ್ಯಾಮರೂನ್ ಗ್ರೀನ್ 45 ರನ್ ಗಳಿಸಿ ಆಸ್ಟ್ರೇಲಿಯಾ ಪರ ಗರಿಷ್ಠ ಸ್ಕೋರರ್ ಆಗಿ ಮೂಡಿ ಬಂದರೆ, ಮ್ಯಾಥ್ಯೂ ವಾಡೆ 40 ರನ್ ಗಳಿಸಿದರು. ಗ್ರೀನ್ ಮತ್ತು ಪ್ಯಾಟ್ ಪ್ಯಾಟ್ ಕಮ್ಮಿನ್ಸ್ 7ನೇ ವಿಕೆಟ್ ಜೊತೆಯಾಟದಲ್ಲಿ 57 ರನ್ ಗಳಿಸಿದರು.
ಭಾರತ ಪರ ವೇಗಿ ಮೊಹಮ್ಮದ್ ಸಿರಾಜ್ 37 ರನ್‍ಗಳಿಗೆ 3 ವಿಕೆಟ್ ಪಡೆದರೆ, ಜಸ್ಪ್ರೀತ್ ಬೂಮ್ರಾ 54ಕ್ಕೆ 2, ರವೀಂದ್ರ ಜಡೇಜಾ 28ಕ್ಕೆ 2 ಹಾಗೂ ಆರ್ ಅಶ್ವಿನ್ 71ಕ್ಕೆ 2 ವಿಕೆಟ್ ಕಬಳಿಸಿ ಯಶಸ್ವಿ ದಾಳಿಗಾರರಾಗಿ ಮೂಡಿಬಂದರು.
ಮೆಲ್ಬರ್ನ್ ಅಂಗಳದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಟೀಂ ಇಂಡಿಯಾ ನಾಯಕ ಅಜಿಂಕ್ಯ ರಹಾನೆ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು. ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಇಶಾಂತ್ ಮತ್ತು ಶಮಿ ಅವರ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಆಟಗಾರು ಅದ್ಬುತ ಸಾಧನೆ ಮಾಡಿದ್ದು, ಸಾರ್ವತ್ರಿಕ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಇಂಡೋ-ಆಸೀಸ್ 4 ಪಂದ್ಯಗಳ ಟೆಸ್ಟ್ ಸರಣಿ ಇದೀಗ 1-1 ರಲ್ಲಿ ಸಮಬಲಗೊಂಡಿದ್ದು, ಮುಂದಿನ ಪಂದ್ಯ ಜನವರಿ 7 ರಿಂದ ಸಿಡ್ನಿಯಲ್ಲಿ ನಡೆಯಲಿದೆ.
0 comments:
Post a Comment