ಬೆಂಗಳೂರು, ಡಿ. 19, 2020 (ಕರಾವಳಿ ಟೈಮ್ಸ್) : ಬರೋಬ್ಬರಿ 8 ತಿಂಗಳ ಬಳಿಕ ಕೊನೆಗೂ ವಿದ್ಯಾರ್ಥಿಗಳ ಶಾಲಾ-ಕಾಲೇಜು ಪ್ರವೇಶಕ್ಕೆ ಸರಕಾರ ಹಸಿರು ನಿಶಾನೆ ತೋರಿದೆ. ಕೊರೋನಾ ವೈರಸ್ ಹಾಗೂ ಲಾಕ್‍ಡೌನ್ ಬಳಿಕ ಕಳೆದ ಮಾರ್ಚ್ 21 ರಿಂದ ಸಂಪೂರ್ಣವಾಗಿ ಬಂದ್ ಮಾಡಲಾಗಿದ್ದ ಶಾಲಾ-ಕಾಲೇಜುಗಳು ಬಳಿಕ ಅನ್‍ಲಾಕ್ ಘೋಷಣೆಯಾಗಿ ಎಲ್ಲ ವಿಭಾಗಗಳೂ ತೆರೆದಿದ್ದರೂ ಶೈಕ್ಷಣಿಕ ಸಂಸ್ಥೆ ತೆರೆಯಲು ಸರಕಾರ ಅನುಮತಿಸಿರಲಿಲ್ಲ. ಇದೀಗ ತಾಂತ್ರಿಕ ಸಲಹಾ ಸಮಿತಿ ನೀಡಿರುವ ವರದಿ ಆಧರಿಸಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಶನಿವಾರ ನಡೆದ ಸಭೆಯಲ್ಲಿ ಶಾಲಾ-ಕಾಲೇಜು ತೆರೆಯುವ ನಿರ್ಧಾರಕ್ಕೆ ಬರಲಾಗಿದೆ.
2021ರ ಜನವರಿ 1 ರಿಂದ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿ ತರಗತಿಗಳು ಪ್ರಾರಂಭವಾಗಲಿದ್ದು, 6 ರಿಂದ 9ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಪರಿಷ್ಕøತ ನಿಯಮಗಳೊಂದಿಗೆ ವಿದ್ಯಾಗಮ ಪ್ರಾರಂಭವಾಗಲಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಸಿಎಂ ಯಡಿಯೂರಪ್ಪ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ.
ಜನವರಿ 1ರಂದು 10 ಮತ್ತು ಪಿಯುಸಿ ತರಗತಿ ಪ್ರಾರಂಭಿಸಲಾಗುವುದು. ಬಳಿಕ 15 ದಿನಗಳ ಕಾಲ ಪರಿಸ್ಥಿತಿ ಅವಲೋಕಿಸಿ ಇತರ ತರಗತಿಗಳನ್ನು ಮುಂದಿನ ದಿನಗಳಲ್ಲಿ ಪ್ರಾರಂಭಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ. ಶಾಲಾ-ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಕೊವಿಡ್ ಪರೀಕ್ಷೆ ಕಡ್ಡಾಯವಾಗಿದ್ದು, ಪೋಷಕರ ಅನುಮತಿ ಪತ್ರ ಕೂಡಾ ಕಡ್ಡಾಯವಾಗಿದೆ ಎಂದು ನಿರ್ಧರಿಸಲಾಗಿದೆ. ಸರಕಾರಿ ಶಾಲೆಗಳಿಗೆ ಗ್ರಾಮೀಣಾಭಿವೃದ್ದಿ ಹಾಗೂ ನಗರಾಭಿವೃದ್ದಿ ಇಲಾಖೆಯಿಂದ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗುವುದು. ವಿದ್ಯಾರ್ಥಿಗಳು ತರಗತಿ ಹಾಜರಾಗುವುದು ಕಡ್ಡಾಯವಾಗಿರುವುದಿಲ್ಲ. ಆನ್ ಲೈನ್ ತರಗತಿಗಳು ಹಾಗೂ ಚಂದನ ವಾಹಿನಿಯಲ್ಲಿ ತರಗತಿಗಳು ಯಥಾ ಪ್ರಕಾರ ಮುಂದುವರಿಯಲಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
0 comments:
Post a Comment