ಮಂಗಳೂರು, ಡಿ. 22, 2020 (ಕರಾವಳಿ ಟೈಮ್ಸ್) : ಉಜಿರೆ ಬಾಲಕನ ಅಪಹರಣ ಪ್ರಕರಣ ಬೇಧಿಸುವಲ್ಲಿ ಜಿಲ್ಲಾ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತಂಡದ ಶ್ರಮ ಇದ್ದು ಇಡೀ ಟೀಂಗೆ ಇದರ ಕ್ರೆಡಿಟ್ ಸಲ್ಲುವುದರ ಜೊತೆಗೆ ಬೆಳ್ತಂಗಡಿ ಠಾಣಾ ಪಿಎಸ್ಸೈ ನಂದಕುಮಾರ್ ಅವರ ಆಹೋರಾತ್ರಿ ಶ್ರಮಕ್ಕೆ ವಿಶೇಷ ಹಾಟ್ಸಪ್ ಎಂದು ಜಿಲ್ಲಾ ಎಸ್ಪಿ ಲಕ್ಷ್ಮೀಪ್ರಸಾದ್ ಶ್ಲಾಘಿಸಿದ್ದಾರೆ.
ಪ್ರಕರಣ ಬೇಧಿಸಿದ ಪೊಲೀಸ್ ತಂಡಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹಾಗೂ ಸಂಸದ ನಳಿನ್ ಕುಮಾರ್ ಅವರಿಂದ ಜಿಲ್ಲಾಧಿಕಾರಿ ಕಛೇರಿಯಲ್ಲಿ ಅಭಿನಂದನೆ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಎಸ್ಸೈ ನಂದಕುಮಾರ್ ಅವರು ಸತತ ಎರಡು ರಾತ್ರಿಗಳಲ್ಲಿ ನಿದ್ರೆ, ಊಟ ಬಿಟ್ಟು ಮಗುವಿನ ಪತ್ತೆಗೆ ವಿಶೇಷವಾಗಿ ಶ್ರಮಿಸಿದ್ದರು. ಬಾಲಕನ ಮನೆ ಮಂದಿಯ ಸಂಪರ್ಕದ ಜೊತೆಗೆ ಕೋಲಾರಕ್ಕೂ ತೆರಳಿ ಇಡೀ ಪ್ರಕರಣದ ಹಿಂದಿನ ಮರ್ಮವನ್ನು ಬಹಳ ನಾಜೂಕಾಗಿ ಬೇಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕಾಗಿ ಅವರಿಗೆ ವಿಶೇಷ ಅಭಿನಂದನೆ ಸಲ್ಲಲೇಬೇಕು ಎಂದರು.
ಪ್ರಕರಣ ಬೇಧಿಸುವಲ್ಲಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳ ಜೊತೆಗೆ ಸಾರ್ವಜನಿಕರು ಹಾಗೂ ಮಾಧ್ಯಮ ಮಂದಿಗಳು ಕೂಡಾ ಸಮರ್ಪಕ ಮಾಹಿತಿ ನೀಡುವ ಮೂಲಕ ನಮ್ಮೊಂದಿಗೆ ಸಹಕರಿಸಿದ್ದು ಎಲ್ಲರಿಗೂ ಅಭಿನಂದನೆ ಜೊತೆಗೆ ಪೊಲೀಸರ ಕಾರ್ಯವನ್ನು ಗುರುತಿಸಿ ಗೌರವಿಸಿದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಸದರಿಗೂ ಕೃತಜ್ಞತೆಗಳು ಎಂದು ಎಸ್ಪಿ ಲಕ್ಷ್ಮೀಪ್ರಸಾದ್ ತಿಳಿಸಿದರು.
ಇದೇ ವೇಳೆ ಮಾತನಾಡಿದ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರು ಪೊಲೀಸರ ಮೇಲೆ ದಾಳಿಯಂತಹ ಪ್ರಕರಣಗಳು ನಡೆದರೆ ಅದನ್ನು ಬೇಧಿಸಿ ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಈ ಬಗ್ಗೆ ಈಗಾಗಲೇ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸರಕಾರ ಸೂಚನೆ ನೀಡಿದೆ ಎಂದರು.
ಈ ಸಂದರ್ಭ ಸಂಸದ ನಳಿನ್ ಕುಮಾರ್ ಕಟೀಲ್, ಮನಪಾ ಮೇಯರ್ ದಿವಾಕರ ಪಾಂಡೇಶ್ವರ, ಬಂಟ್ವಾಳ ಡಿವೈಎಸ್ಪಿ ವೆಲೆಂಟೈನ್ ಡಿಸೋಜ, ಬೆಳ್ತಂಗಡಿ ಸಿಐ ಸಂದೇಶ್, ಪಿಎಸ್ಸೈಗಳಾದ ನಂದಕುಮಾರ್, ಈರಯ್ಯ, ರವಿ ಕುಮಾರ್, ಪವನ್ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment