ಬಂಟ್ವಾಳ, ಡಿ. 12, 2020 (ಕರಾವಳಿ ಟೈಮ್ಸ್) : ತಾಲೂಕಿನ ಪಾಣೆಮಂಗಳೂರು ಸಮೀಪದ ಎಸ್ ಎಸ್ ಅಡಿಟೋರಿಯಂನಲ್ಲಿ ಗುರುವಾರ ನಡೆದ ವಿವಾಹ ಸಮಾರಂಭದ ವೇಳೆ ಚಿನ್ನಾಭರಣ ಎಗರಿಸುತ್ತಿದ್ದ ವೇಳೆ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದ ಮಹಿಳಾ ಕಳ್ಳಿಯನ್ನು ಬಂಟ್ವಾಳ ನಗರ ಪೊಲೀಸರು ಅಧಿಕೃತವಾಗಿ ಬಂಧಿಸಿ ಹಲವು ಚಿನ್ನಾಭರಣ ಕಳವು ಪ್ರಕರಣಗಳನ್ನು ಬೇಧಿಸಿದ್ದಾರೆ.
ಮುಡಿಪು ನಿವಾಸಿ ಸಿದ್ದೀಕ್ ಎಂಬಾತನ ಪತ್ನಿ ಫಾತಿಮಾ ಸೈನಾಝ್ ಎಂಬಾಕೆಯೇ ಮದುವೆ ಮಂಟಪದಲ್ಲಿ ಚಿನ್ನಾಭರಣ ಎಗರಿಸುವ ವೇಳೆ ಸಿಕ್ಕಿ ಬಿದ್ದ ಕಳ್ಳಿ ಮಹಿಳೆ. ಘಟನೆ ಬಗ್ಗೆ ಮಾಹಿತಿ ಪಡೆದ ಬಂಟ್ವಾಳ ನಗರ ಪೊಲೀಸರು ಸ್ಥಳಕ್ಕಾಗಮಿಸಿ ಮಹಿಳೆಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದ ವೇಳೆ ಇತರ ಪ್ರಕರಣಗಳು ಬೆಳಕಿಗೆ ಬಂದಿದೆ.
ಆಲಡ್ಕ ಎಸ್ ಎಸ್ ಅಡಿಟೋರಿಯಂನಲ್ಲಿ ನಿರಂತರವಾಗಿ ಇಂತಹ ಆಭರಣ ಕಳವು ಪ್ರಕರಣಗಳು ನಡೆಯುತ್ತಿದ್ದು, ಗುರುವಾರವೂ ಇದು ಮುಂದುವರಿದಿದೆ. ಗುರುವಾರದ ಘಟನೆಗೆ ಸಂಬಂಧಿಸಿದಂತೆ ಚಿನ್ನಾಭರಣ ಕಳಕೊಂಡವರು ಮರಳಿ ದೊರೆತ ಹಿನ್ನಲೆಯಲ್ಲಿ ಯಾವುದೇ ದೂರು ದಾಖಲಿಸಿಲ್ಲ. ಮದುವೆ ಹಾಲ್ ಮುಖ್ಯಸ್ಥರು ಕೂಡಾ ಈ ಬಗ್ಗೆ ಯಾವುದೇ ದೂರು ನೀಡಿರಲಿಲ್ಲ. ಆದರೂ ಪೊಲೀಸರು ಪ್ರಕರಣವನ್ನು ಲಘುವಾಗಿ ಕಾಣದೆ ಬಂಧಿತ ಮಹಿಳೆಯನ್ನು ತೀವ್ರ ವಿಚಾರಣೆಗೆ ಗುರಿಪಡಿಸಿದ್ದಾರೆ. ಈ ಸಂದರ್ಭ ಇದೊಂದು ಚಿನ್ನಾಭರಣ ಕಳವು ಜಾಲ ಎಂಬುದು ಗೊತ್ತಾಗಿದೆ. ಕಳೆದ ಸುಮಾರು ಹತ್ತು ವರ್ಷಗಳಿಂದಲೂ ಮಹಿಳೆ ಇದೇ ರೀತಿಯ ಕೃತ್ಯದಲ್ಲಿ ತೊಡಗಿಸಿಕೊಂಡಿರುವುದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.
ಮಹಿಳೆ ಪಾಣೆಮಂಗಳೂರು, ಫರಂಗಿಪೇಟೆ, ತಲಪಾಡಿ, ತೊಕ್ಕೊಟ್ಟು ಮೊದಲಾದ ಮದುವೆ ಹಾಲ್ ಗಳಲ್ಲಿ ಮಕ್ಕಳು ಹಾಗೂ ಮಹಿಳೆಯರ ಚಿನ್ನಾಭರಣ ಗುರಿಯಾಗಿಸಿಕೊಂಡು ಇಂತಹ ಕೃತ್ಯ ನಡೆಸುತ್ತಿದ್ದ ಬಗ್ಗೆ ತನಿಖೆಯ ವೇಳೆ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾಳೆ ಎನ್ನಲಾಗಿದೆ. ಬಂಧಿತ ಮಹಿಳೆಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
0 comments:
Post a Comment