ಬಂಟ್ವಾಳ, ಡಿ. 22, 2020 (ಕರಾವಳಿ ಟೈಮ್ಸ್) : ತಾಲೂಕಿನ ಒಟ್ಟು 57 ಗ್ರಾಮ ಪಂಚಾಯತ್‍ಗಳ 822 ಸ್ಥಾನಗಳಿಗೆ ಮಂಗಳವಾರ ಚುನಾವಣೆ ನಡೆಯಿತು. ಬೆಳಿಗ್ಗೆ 7 ಗಂಟೆಗೆ ಆರಂಭವಾದ ಮತದಾನ ಸಂಜೆ 5 ಗಂಟೆಗೆ ಮುಕ್ತಾಯವಾಯಿತು. ಈ ಬಾರಿ ಬ್ಯಾಲೆಟ್ ಪೇಪರ್ ಮೂಲಕ ಮತದಾನ ನಡೆದಿದ್ದರಿಂದ ಯಾವುದೇ ಗೊಂದಲಗಳಿಲ್ಲದೆ ಸುಸೂತ್ರವಾಗಿ ಮತದಾನ ಸಾಗಿದೆ. ತಾಲೂಕಿನ ಗ್ರಾಮೀಣ ಪ್ರದೇಶದ ಜನರು ಬಹಳ ಉತ್ಸಾಹದಿಂದಲೇ ಈ ಬಾರಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದು, ಪರಿಣಾಮ 77.77 ಶೇಕಡಾ ಮತದಾನ ದಾಖಲಾಗಿದೆ. ಒಟ್ಟು 2,77,133 (1,36,727 ಮಂದಿ ಪುರುಷರು, 1,40,394 ಮಂದಿ ಮಹಿಳೆಯರು ಹಾಗೂ 12 ಮಂದಿ ಇತರರು ಸೇರಿ) ಮಂದಿ ಮತದಾರರ ಪೈಕಿ 2,15,535 ಮಂದಿ (1,04,156 ಮಂದಿ ಪುರುಷರು, 1,11,376 ಮಂದಿ ಮಹಿಳೆಯರು ಹಾಗೂ 3 ಮಂದಿ ಇತರರು) ತಮ್ಮ ಪರಮಾಧಿಕಾರ ಚಲಾಯಿಸಿದ್ದಾರೆ.
ರಾಜಕೀಯ ಪಕ್ಷಗಳ ಚಿಹ್ನೆಯಿಲ್ಲದಿದ್ದರೂ ಪ್ರತೀ ಅಭ್ಯರ್ಥಿಗಳೂ ಕೂಡಾ ವಿವಿಧ ರಾಜಕೀಯ ಪಕ್ಷಗಳ ಬೆಂಬಲಿತರಾಗಿ ಪಕ್ಷಗಳ ಅಭಿವೃದ್ದಿ ಸಾಧನೆಗಳಡಿಯಲ್ಲೇ ಮತಯಾಚಿಸಿದ್ದರಿಂದ ಮತದಾನ ದಿನ ವಿವಿಧ ಪಂಚಾಯತ್‍ಗಳ ವಿವಿಧ ವಾರ್ಡ್, ಬೂತ್‍ಗಳ ಬಳಿ ರಾಜಕೀಯ ಪಕ್ಷಗಳ ನಾಯಕರು ತೆರಳಿ ಮತದಾನ ನಡೆಸಲು ಜನರನ್ನು ಪ್ರೇರೇಪಿಸುತ್ತಿದ್ದ ದೃಶ್ಯ ಕಂಡು ಬಂತು. ಕೊರೋನಾ ಅಬ್ಬರ ಇರುವುದರಿಂದ ಸ್ಯಾನಿಟೈಸರ್, ಮಾಸ್ಕ್ ಧರಿಸುವಂತೆ ಮತದಾರರಿಗೆ ಆಶಾ ಕಾರ್ಯಕರ್ತರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಜಾಗೃತಿ ಮೂಡಿಸುತ್ತಿದ್ದರು.
ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್ ಅವರು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತೆಂಕಎಡಪದವು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮತ ಚಲಾಯಿಸಿದೆ, ಮಾಜಿ ಸಚಿವ ಬಿ ರಮಾನಾಥ ರೈ ಅವರು ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಳ್ಳಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ತೊಡಂಬಿಲ ಶಾಲಾ ಮತ ಗಟ್ಟೆಯಲ್ಲಿ ಮತದಾನ ಮಾಡಿದರು. ಮಂಗಳೂರು ಶಾಸಕ ಯು ಟಿ ಖಾದರ್ ಅವರು ಬೋಳಿಯಾರು ಗ್ರಾಮದ ರಂತಡ್ಕ ಶಾಲೆಯಲ್ಲಿ ತಮ್ಮ ಪರಮಾಧಿಕಾರ ಚಲಾಯಿಸಿದರು.
ಮಂಗಳೂರು ಸಹಾಯಕ ಆಯುಕ್ತ ಮದನ ಮೋಹನ್, ಬಂಟ್ವಾಳ ತಹಶೀಲ್ದಾರ್ ಅನಿತಾಲಕ್ಷ್ಮೀ ಹಾಗೂ ತಾ ಪಂ ಕಾರ್ಯ ನಿರ್ವಹಣಾಧಿಕಾರಿ ರಾಜಣ್ಣ ಅವರು ಚುನಾವಣಾ ಉಸ್ತುವಾರಿ ನೋಡಿಕೊಂಡಿದ್ದರು. ಬಂಟ್ವಾಳ ಡಿವೈಎಸ್ಪಿ ವೆಲಂಟೈನ್ ಡಿ’ಸೋಜ, ವೃತ್ತ ನಿರೀಕ್ಷಕ ಟಿ ಡಿ ನಾಗರಾಜ, ಪಿಎಸ್ಸೈಗಳಾದ ಅವಿನಾಶ್, ಪ್ರಸನ್ನ, ರಾಜೇಶ್ ಮೊದಲಾದವರ ನೇತೃತ್ವದಲ್ಲಿ ಪೊಲೀಸರು ಬಿಗು ಬಂದೋಬಸ್ತ್ ಕೈಗೊಂಡಿದ್ದರು.
ತಾಲೂಕಿನಲ್ಲಿ ಒಟ್ಟು 1925 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದು, ಎಲ್ಲರ ಭವಿಷ್ಯ ಇದೀಗ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಯಾರಿಗೆಲ್ಲಾ ಮತದಾರ ಆಶೀರ್ವದಿಸಿದ್ದಾನೆ ಎಂಬುದು ಡಿ 30 ರಂದು ಫಲಿತಾಂಶ ಹೊರಬೀಳಲಿದೆ. ತಾಲೂಕಿನಲ್ಲಿ ಒಟ್ಟು ಸಲ್ಲಿಕೆಯಾಗಿದ್ದ 2552 ಮಂದಿ ಉಮೇದುವಾರರ ಪೈಕಿ 72 ಮಂದಿಯ ಉಮೇದುವಾರಿಕೆ ತಿರಸ್ಕøತಗೊಂಡಿತ್ತು. 550 ಮಂದಿ ನಾಮತ್ರ ವಾಪಾಸು ಪಡೆದುಕೊಂಡರೆ, 15 ಮಂದಿ ಅವಿರೋಧ ಆಯ್ಕೆಯಾಗಿದ್ದರು. ಅಂತಿಮವಾಗಿ 1925 ಮಂದಿ ಚುನಾವಣಾ ಕಣದಲ್ಲಿ ಉಳಿದಿದ್ದಾರೆ.
ಇಡ್ಕಿದು ಗ್ರಾಮ ಪಂಚಾಯತಿನಲ್ಲಿ 4 ಮಂದಿ, ವಿಟ್ಲಪಡ್ನೂರು ಹಾಗೂ ಪುಣಚ ಪಂಚಾಯಿತಿನಲ್ಲಿ ತಲಾ ಇಬ್ಬರು, ಫಜೀರು, ಬಾಳ್ತಿಲ, ಕರಿಯಂಗಳ, ತುಂಬೆ, ಅಮ್ಮುಂಜೆ, ಮೇರಮಜಲು ಹಾಗೂ ಅಮ್ಟಾಡಿ ಪಂಚಾಯತಿನಲ್ಲಿ ತಲಾ ಒಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
0 comments:
Post a Comment