ಚಿಕ್ಕಮಗಳೂರು, ಡಿ. 29, 2020 (ಕರಾವಳಿ ಟೈಮ್ಸ್) : ರಾಜ್ಯ ವಿಧಾನ ಪರಿಷತ್ ಉಪ ಸಭಾಪತಿ ಹಾಗೂ ಜೆಡಿಎಸ್ ನಾಯಕ ಎಸ್.ಎಲ್. ಧರ್ಮೇಗೌಡ ಅವರ ಮೃತದೇಹ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ರೈಲ್ವೆ ಹಳಿ ಪಕ್ಕ ಮಂಗಳವಾರ ಮುಂಜಾನೆ ಪತ್ತೆಯಾಗಿದ್ದು ರಾಜ್ಯಾದ್ಯಂತ ತೀವ್ರ ಆಘಾತ ಸೃಷ್ಟಿಸಿದೆ. ರೈಲಿಗೆ ತಲೆಕೊಟ್ಟು ಧರ್ಮೇಗೌಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದ್ದು, ಮೃತದೇಹದ ಪಕ್ಕದಲ್ಲಿ ಡೆತ್ ನೋಟ್ ಸಿಕ್ಕಿದೆ ಎನ್ನಲಾಗಿದೆ.
ಧರ್ಮೇಗೌಡ ಅವರ ಆತ್ಮಹತ್ಯೆ ಸುದ್ದಿ ತಿಳಿದು ಜೆಡಿಎಸ್ ವರಿಷ್ಠ ನಾಯಕ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಸರಳ ಸ್ವಭಾವಿಯಾಗಿರುವ ಧರ್ಮೇಗೌಡ ಅವರು ಯಾವ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ನಿಖರ ಮಾಹಿತಿ ಲಭ್ಯವಾಗಿಲ್ಲ. ಯಾವುದೋ ವಿಷಯದಲ್ಲಿ ಮನನೊಂದು ಕೃತ್ಯ ಎಸಗಿರುವ ಸಾಧ್ಯತೆ ಬಗ್ಗೆ ಶಂಕಿಸಲಾಗಿದೆ. ಇತ್ತೀಚೆಗೆ ಪರಿಷತ್ ಸಭೆಯಲ್ಲಿ ನಡೆದ ಸಭಾಪತಿ-ಉಪಸಭಾಪತಿ ಗದ್ದಲಕ್ಕೆ ಸಂಬಂಧಿಸಿ ಅವರು ನೊಂದು ಕೊಂಡು ಈ ಕೃತ್ಯ ಎಸಗಿದ್ದಾರೆ ಎಂದು ಕೂಡಾ ಸಂಶಯಿಸಲಾಗಿದೆ.
0 comments:
Post a Comment