ಕಡಬ, ಡಿ. 21, 2020 (ಕರಾವಳಿ ಟೈಮ್ಸ್) : ತಾಲೂಕಿನ ಕೌಕ್ರಾಡಿ-ನೂಜಿ ಎಂಬಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಾಗಿರುವ ತುಕ್ರಪ್ಪ ಶೆಟ್ಟಿ ಅವರ ಮನೆಗೆ ಭಾನುವಾರ ಮಧ್ಯರಾತ್ರಿ ವೇಳೆಗೆ ನುಗ್ಗಿದ 9 ಮಂದಿ ಮುಸುಕುಧಾರಿಗಳು ಮನೆ ಮಂದಿಯನ್ನು ಬೆದರಿಸಿ ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ತುಕ್ರಪ್ಪ ಅವರು ಭಾನುವಾರ ರಾತ್ರಿ ತಮ್ಮ ನಿವಾಸದ ಮೊದಲನೇ ಮಹಡಿಯಲ್ಲಿ ಮಲಗಿದ್ದು, ರಾತ್ರಿ ಸುಮಾರು 2.15 ರ ವೇಳೆಗೆ ನಾಯಿ ಬೊಗಳುತ್ತಿರುವುದು ಕೇಳಿ ಮನೆಯ ಮೇಲಂತಸ್ಥಿನಲ್ಲಿ ಬಾಗಿಲು ತೆರೆದು ನೋಡಿದಾಗ ಅಲ್ಲಿಗೆ ಬಂದ 9 ಜನ ಅಪರಿಚಿತ ಮುಸುಕುಧಾರಿಗಳು ಮನೆಗೆ ಅಕ್ರಮ ಪ್ರವೇಶ ಮಾಡಿ ತುಕ್ರಪ್ಪ ಶೆಟ್ಟಿ ಅವರಿಗೆ ಚೂರಿ ತೋರಿಸಿ, ಹಲ್ಲೆ ನಡೆಸಿ ಕೊಲ್ಲುವುದಾಗಿ ಬೆದರಿಸಿರುತ್ತಾರೆ. ಈ ವೇಳೆ ಪ್ರತಿರೋಧ ತೋರಿದ ಅವರ ಪತ್ನಿಯ ಹೊಟ್ಟೆಗೆ ಆರೋಪಿಗಳು ಚೂರಿಯಿಂದ ಚುಚ್ಚಿದ್ದಾರೆ. ಮನೆಯಲ್ಲಿದ್ದ 30 ಪವನ್ ಚಿನ್ನಾಭರಣ ಮತ್ತು ನಗದು ದೋಚಿ ಪರಾರಿಯಾಗಿರುತ್ತಾರೆ. ಸದ್ರಿ ತುಕ್ರಪ್ಪ ಶೆಟ್ಟಿರವರ ಹೆಂಡತಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದರೋಡೆಕೋರರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಪ್ರಕರಣ ಶೀಘ್ರ ಬೇಧಿಸುವ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಘಟನೆಯ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.
0 comments:
Post a Comment