ಸಿಡ್ನಿ, ಡಿ. 06, 2020 (ಕರಾವಳಿ ಟೈಮ್ಸ್) : ಇತ್ತೀಚೆಗೆ ಆಸ್ಟ್ರೇಲಿಯಾ ನೆಲದಲ್ಲಿ ನಡೆದ ಏಕದಿನ ಸರಣಿ ಸೋತು ಹಿನ್ನಡೆ ಅನುಭವಿಸಿದ್ದ ಭಾರತ ಅದರ ಬೆನ್ನಲ್ಲೇ ನಡೆದ ಟಿ-20 ಸರಣಿಯಲ್ಲಿ ಸತತ 2 ಪಂದ್ಯಗಳನ್ನು ಗೆಲ್ಲುವ ಮೂಲಕ ಚುಟುಕು ಕ್ರಿಕೆಟ್ ಸರಣಿಯನ್ನು ಒಂದು ಪಂದ್ಯ ಬಾಕಿ ಇರುತ್ತಲೇ ಸರಣಿಯನ್ನು ವಶಪಡಿಸಿಕೊಂಡಿತು.
ಭಾನುವಾರ ಸಿಡ್ನಿ ಮೈದಾನದಲ್ಲಿ ನಡೆದ ದ್ವಿತೀಯ ಟಿ-20 ಪಂದ್ಯದಲ್ಲಿ ಆಸ್ಟ್ರೇಲಿಯಾ ನಿಗದಿಪಡಿಸಿದ್ದ 195 ರನ್‍ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾ ಪರ ಶಿಖರ್ ಧವನ್, ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಅವರ ಸಮಯೋಚಿತ ಬ್ಯಾಟಿಂಗ್‍ನಿಂದ 6 ವಿಕೆಟ್‍ಗಳ ಗೆಲುವು ಸಾಧಿಸಿತು.
ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಸೀಸ್ ತಂಡಕ್ಕೆ ಮೊದಲು ಬ್ಯಾಟಿಂಗ್ ನಡೆಸುವ ಅವಕಾಶ ನೀಡಿದರು. ನಾಯಕ ಮ್ಯಾಥ್ಯೂ ವಾಡೆ 58, ಸ್ಮಿತ್ 46, ಮ್ಯಾಕ್ಸ್‍ವೆಲ್ 22, ಹನ್ರಿಕ್ಸ್ 26 ಹಾಗೂ ಸ್ಟೋಯಿನಿಸ್ ಅಜೇಯ 16 ರನ್‍ಗಳ ನೆರವಿನಿಂದ ಆಸ್ಟ್ರೇಲಿಯಾ ನಿಗದಿತ 20 ಓವರ್‍ಗಳಲ್ಲಿ 194 ರನ್ ಗಳಿಸಿತು.
ಗುರಿ ಬೆನ್ನಟ್ಟಿದ ಭಾರತ ಆರಂಭಿಕರಾದ ಕೆ ಎಲ್ ರಾಹುಲ್ ಹಾಗೂ ಶಿಖರ್ ಧವನ್ ಅವರು ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಈ ಜೋಡಿ 56 ರನ್‍ಗಳ ಜೊತೆಯಾಟ ನಡೆಸಿತು. ಶಿಖರ್ ಧವನ್ (52) ಅರ್ಧ ಶತಕ ಗಳಿಸಿದರು. ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಅಬ್ಬರಿಸಿದ ಪರಿಣಾಮ ಟೀಂ ಇಂಡಿಯಾ ರೋಚಕ ಜಯ ಸಾಧಿಸಿತು. ಹಾರ್ದಿಕ್ ಪಾಂಡ್ಯ 22 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 3 ಬೌಂಡರಿ ಒಳಗೊಂಡ 42 ರನ್ ಬಾರಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು.
ಕೊನೆಯ ಎರಡು ಓವರಿನಲ್ಲಿ 26 ರನ್‍ಗಳ ಅವಶ್ಯಕತೆ ಇತ್ತು. 19ನೇ ಓವರಿನಲ್ಲಿ 2 ಬೌಂಡರಿ ಸಿಡಿಸಿದ ಹಾರ್ದಿಕ್ ಪಾಂಡ್ಯ 12 ರನ್ ಭಾರಿಸಿದರು. ಕೊನೆಯ ಓವರಿನಲ್ಲಿ 14 ರನ್‍ಗಳ ಅವಶ್ಯಕತೆ ಇದ್ದಾಗ 2 ಸಿಕ್ಸರ್ ಸಿಡಿಸಿದ ಪಾಂಡ್ಯ 2 ಎಸೆತಗಳು ಬಾಕಿ ಇರುತ್ತಲೇ ತಂಡಕ್ಕೆ ಜಯ ತಂದುಕೊಟ್ಟರು.
0 comments:
Post a Comment