ನವದೆಹಲಿ, ಡಿ.27, 2020 (ಕರಾವಳಿ ಟೈಮ್ಸ್) : ಕೊರೋನಾ ವೈರಸ್ ಹಾಗೂ ಲಾಕ್‍ಡೌನ್ ಕಾರಣದಿಂದ ಕಳೆದ ಫೆಬ್ರವರಿಯಲ್ಲಿ ಅಂತ್ಯಗೊಂಡಿದ್ದ ವಾಹನ ದಾಖಲೆಗಳಾದ ಚಾಲನಾ ಪರವಾನಿಗೆ (ಡಿಎಲ್), ನೋಂದಣಾ ಪ್ರಮಾಣ ಪತ್ರ (ಆರ್.ಸಿ.), ಫಿಟ್ನೆಸ್ ಸರ್ಟಿಫಿಕೇಟ್ (ಎಫ್.ಸಿ.), ಪರ್ಮಿಟ್‍ಗಳು ಸೇರಿದಂತೆ ವಾಹನ ಕಾಯ್ದೆ ಹಾಗೂ ಕೇಂದ್ರ ವಾಹನ ಕಾನೂನಿಗೆ ಸಂಬಂಧಪಟ್ಟ ಎಲ್ಲಾ ದಾಖಲೆ ಪತ್ರಗಳ ಮಾನ್ಯತಾ ಅವಧಿಯನ್ನು ಮತ್ತೆ 2021 ರ ಮಾರ್ಚ್ ತಿಂಗಳ 30ರವರೆಗೆ ವಿಸ್ತರಿಸಿ ಕೇಂದ್ರ ಸರಕಾರ ಆದೇಶಿಸಿದೆ.
ಈ ಹಿಂದೆ ಈಗಾಗಲೇ ವಾಹನಗಳ ದಾಖಲೆ ಪತ್ರಗಳ ಮಾನ್ಯತಾ ಅವಧಿಯನ್ನು ಕೇಂದ್ರ ಸಾರಿಗೆ ಇಲಾಖೆ 4 ಬಾರಿ ವಿಸ್ತರಿಸಿ ವಾಹನ ಸವಾರರಿಗೆ ಅನುಕೂಲ ಕಲ್ಪಿಸಿತ್ತು. ಇದೀಗ ಡಿಸೆಂಬರ್ 31, 2020ರ ವರೆಗೆ ವಿಸ್ತರಿಸಿದ್ದ ಮಾನ್ಯತಾ ಅವಧಿಯನ್ನು ಸರಕಾರ 2021 ರ ಮಾರ್ಚ್ 31 ವರೆಗೆ ವಿಸ್ತರಿಸಿದೆ.
2020ರ ಫೆಬ್ರವರಿ ತಿಂಗಳ ಅಂತ್ಯಕ್ಕೆ ಮುಕ್ತಾಯಗೊಂಡಿರುವ ದಾಖಲೆಗಳ ನವೀಕರಣಕ್ಕೆ ಮಾರ್ಚ್ ಬಳಿಕ ಕೊರೋನಾ ಹಾಗೂ ಲಾಕ್‍ಡೌನ್ ಕಾರಣದಿಂದಾಗಿ ಅವಕಾಶ ಇರಲಿಲ್ಲ. ಇದಕ್ಕಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆ ವಾಹನಗಳ ದಾಖಲೆ ಪತ್ರಗಳ ಮಾನ್ಯತಾ ಅವಧಿ (ವ್ಯಾಲಿಡಿಟಿ) ವಿಸ್ತರಿಸಿತ್ತು. ಇದೀಗ ಡಿಸೆಂಬರ್ ತಿಂಗಳಲ್ಲಿ ಮತ್ತೆ ರೂಪಾಂತರಗೊಂಡ ಕೊರೋನಾ ವೈರಸ್ ಆತಂಕ ಹೆಚ್ಚಿರುವ ಕಾರಣ ಜನರ ಸುರಕ್ಷತೆ ಹಾಗೂ ಎಚ್ಚರಿಕೆಗಾಗಿ ಮಾನ್ಯತಾ ಅವಧಿಯನ್ನು ಮಾರ್ಚ್ ಅಂತ್ಯದವರೆಗೆ ವಿಸ್ತರಿಸಿದೆ. ದಾಖಲೆ ಪತ್ರಗಳ ನವೀಕರಣಕ್ಕೆ ಜನ ನೇರವಾಗಿ ಕಛೇರಿಗೆ ಭೇಟಿ ನೀಡಬೇಕಾದ ಕಾರಣದಿಂದ ಕೊರೋನಾ ಭೀತಿ ಇರುತ್ತದೆ. ಈ ಕಾರಣ್ಕಾಗಿ ಕೇಂದ್ರ ಸರಕಾರ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.
0 comments:
Post a Comment