ಬೆಂಗಳೂರು, ಡಿ. 09, 2020 (ಕರಾವಳಿ ಟೈಮ್ಸ್) : ಗುರುವಾರ ವಿಧಾನಮಂಡಲ ಅಧಿವೇಶನಕ್ಕೆ ತೆರೆ ಬೀಳುವ ಹಿನ್ನಲೆಯಲ್ಲಿ ಬುಧವಾರದ ಕಲಾಪದ ಅಜೆಂಡಾದಲ್ಲಿ ಇಲ್ಲದೆ ಇದ್ದರೂ ರಾಜ್ಯ ಸರಕಾರ ತರಾತುರಿಯಲ್ಲಿ ಗೋಹತ್ಯೆ ನಿಷೇಧ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿ, ಯಾವುದೇ ಚರ್ಚೆ ಇಲ್ಲದೇ ಅಂಗೀಕಾರವನ್ನು ಪಡೆದುಕೊಂಡಿದೆ.
ಕಾಂಗ್ರೆಸ್, ಜೆಡಿಎಸ್ ಸದಸ್ಯರುಗಳ ತೀವ್ರ ವಿರೋಧದ ನಡುವೆಯೂ 2020ನೇ ಸಾಲಿನ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ ಮಂಡನೆ ಮಾಡಲಾಗಿದ್ದು ರಾಜ್ಯ ವಿಧಾನಸಭೆ ಅಂಗೀಕಾರ ನೀಡಿದೆ.
ಪಶು ಸಂಗೋಪನೆ ಮತ್ತು ವಕ್ಪ್ ಸಚಿವ ಪ್ರಭು ಚೌವ್ಹಾಣ್ ವಿಧೇಯಕ ಮಂಡನೆಗೆ ಆರಂಭಿಸುತಿದ್ದಂತೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದರು. ಸದನ ಸಲಹಾ ಸಮಿತಿಯಲ್ಲಿ ಹೊಸ ವಿಧೆಯಕ ಮಂಡನೆ ಮಾಡಬಾರದು. ಈಗಾಗಲೇ ಸುಗ್ರೀವಾಜ್ಞೆ ಹೊರಡಿಸಿರುವ ವಿಧೇಯಕಗಳನ್ನು ಮಾತ್ರ ಮಂಡಿಸಬೇಕು ಎಂದು ತೀರ್ಮಾನಿಸಲಾಗಿದೆ. ಈಗ ಏಕಾಏಕಿ ಹೊಸ ಬಿಲ್ ಮಂಡಿಸುತ್ತಿದ್ದಾರೆ. ನಾವು ಇದನ್ನು ಒಪ್ಪುವುದಿಲ್ಲ ಎಂದು ಸದನದ ಬಾವಿಗಿಳಿದು ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದರು.
ಈ ಸಂದರ್ಭ ರಾಜ್ಯ ಸರಕಾರದ ಮುಖ್ಯ ಸಚೇತಕ ಸುನಿಲ್ ಕುಮಾರ್ ಯಾವುದಾದರೂ ಅಗತ್ಯ ಬಿಲ್ ಇದ್ದರೆ ಅದನ್ನು ತರಬಹುದು ಎಂದು ಚರ್ಚೆಯಾಗಿತ್ತು. ಇದು ಅಗತ್ಯ ಬಿಲ್ ಇದೆ. ಅದನ್ನು ನಾವು ಮಂಡಸಿದ್ದೇವೆ. ನಿಮ್ಮ ಮಾತು ಕೇಳಿ ಬಿಲ್ ತರಬೇಕಿಲ್ಲ. ನೀವು ಅದರ ಮೇಲೆ ಚರ್ಚೆ ಮಾಡಿ ಎಂದು ಹೇಳಿದರು.
ಸದನ ಸಂಪ್ರದಾಯಗಳನ್ನು ಬಿಜೆಪಿ ನಾಶ ಮಾಡುತ್ತಿದೆ. ಬಿಜೆಪಿಯವರು ಪ್ರಜಾಪ್ರಭುತ್ವದ ಕೊಲೆಗಡುಕರು ಎಂದು ಸಿದ್ದರಾಮಯ್ಯ ಇದೇ ವೇಳೆ ಆಕ್ರೋಶ ಹೊರಹಾಕಿದರು. ಬಿಜೆಪಿ ಧೋರಣೆ ಖಂಡಿಸಿ ಗುರುವಾರ ಕಲಾಪ ಬಹಿಷ್ಕರಿಸುವುದಾಗಿ ಸಿದ್ದರಾಮಯ್ಯ ಘೋಷಿಸಿದರು. ಪಂಚಾಯತ್ ಚುನಾವಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ತರಾತುರಿಯಲ್ಲಿ ಈ ಬಿಲ್ ತಂದಿದ್ದು, ಜನರ ಮೇಲೆ ಪ್ರಭಾವ ಬೀರುತ್ತಿದೆ. ಚುನಾವಣಾ ಆಯೋಗಕ್ಕೆ ದೂರು ಕೊಡಲಾಗುವುದು ಎಂದು ತಿಳಿಸಿದರು.
ಇದು ಪೆÇಲಿಟಿಕಲ್ ಪ್ಲಾನ್, ಇನ್ಮುಂದೆ ನಾವು ಬಿಎಸಿ ಸಭೆಗೆ ಹೋಗಲ್ಲ ಎಂದು ಡಿಕೆ ಶಿವಕುಮಾರ್ ಘೋಷಿಸಿದರು. ಸಿದ್ದರಾಮಯ್ಯ ಹಾಗೂ ಡಿಕೆಶಿ ಬಳಿ ಸಚಿವ ಮಾಧುಸ್ವಾಮಿ ಅಸಹಾಯಕತೆ ವ್ಯಕ್ತಪಡಿಸಿದ ದೃಶ್ಯಗಳು ಸದನದಲ್ಲಿ ಕಂಡು ಬಂದವು. ಇದಕ್ಕೂ ಮುನ್ನ ಹಸುಗಳಿಗೆ ವಿಧಾನಸೌಧದ ಪೂರ್ವ ಬಾಗಿಲಿನಲ್ಲಿ ಸಚಿವರು ಪೂಜೆ ಸಲ್ಲಿಸಿದರು.
ಸ್ಪೀಕರ್ ಕಾಗೇರಿ ನಿನ್ನೆ ಮಹತ್ವದ ಬಿಲ್ ಮಂಡನೆ ಮಾಡಬಹುದು ಎಂದು ಚರ್ಚೆಯಾಗಿತ್ತು. ಹೀಗಾಗಿ ಇದನ್ನು ಮಂಡನೆಗೆ ಅವಕಾಶ ಕೊಟ್ಟಿರುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ಆರೋಪ ಪ್ರತ್ಯಾರೋಪ ನಡೆಯಿತು. ಸಭೆಯಲ್ಲಿ ಗದ್ದಲದ ವಾತಾವರಣ ಏರ್ಪಟ್ಟಿತು. ಗದ್ದಲದ ನಡುವೆಯೇ ಪ್ರಭು ಚೌವ್ಹಾಣ್ ವಿಧೇಯಕ ಮಂಡಿಸಿದರು. ವಿಧೇಯಕ ಮಂಡನೆ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯರು ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಿಜೆಪಿಯವರು ದನ ಕಡಿಯುವ ಕಾಂಗ್ರೆಸ್‍ನವರಿಗೆ ಧಿಕ್ಕಾರ ಎಂದು ಘೋಷಣೆ ಕೂಗಿದರು.
ಎಚ್.ಕೆ. ಪಾಟೀಲ್ ಮಾತನಾಡಿ, ಸಂವಿಧಾನವನ್ನು ನಿಮ್ಮ ಪಕ್ಷದ ಕಚೇರಿಯನ್ನಾಗಿ ಮಾಡಬೇಡಿ. ಬಿಲ್ ಮಂಡನೆ ಬಗ್ಗೆ ಯಾವುದೇ ಅವಕಾಶ ಇಲ್ಲ ಎಂದು ಚರ್ಚೆಯಾಗಿದೆ ಎಂದು ಹೇಳಿದರು. ಸದನದಲ್ಲಿ ಗದ್ದಲ-ಗೊಂದಲದ ನಡುವೆಯೇ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ಮತ್ತು ಕೆಲವು ಇತರೆ ತಿದ್ದುಪಡಿ ವಿಧೇಯಕ ಮಂಡನೆ ಮಾಡಲಾಯಿತು. ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ವಿಧೇಯಕವನ್ನು ಮಂಡಿಸಿದರು. ಹಾಗೂ ವಿಧೇಯಕದ ಬಗ್ಗೆ ವಿವರಣೆ ನೀಡಿದರು. ಸದನದಲ್ಲಿ ಯಾವೊಬ್ಬ ಶಾಸಕರೂ ವಿಧೇಯಕದ ಬಗ್ಗೆ ಚೆರ್ಚೆ ನಡೆಸದ ಹಿನ್ನಲೆಯಲ್ಲಿ ಸ್ಪೀಕರ್ ಧ್ವನಿಮತದ ಮೂಲಕ ವಿಧೇಯಕ ಪರ್ಯಾಲೋಚನೆ ಪ್ರಸ್ತಾವನೆ ಮಂಡಿಸಿ ಅನುಮೋದನೆ ನೀಡಿದರು.
ಮಸೂದೆಯಂತೆ ಹಸು, ಕರು, ದನ, ಎಮ್ಮೆಗಳ ಹತ್ಯೆ ನಿಷೇಧ ಮಾಡುವುದು. ಹತ್ಯೆಗಾಗಿ ಗೋವುಗಳ ಸಾಗಣೆಗೆ ಸಂಪೂರ್ಣ ನಿರ್ಬಂಧ. ಗೋಹತ್ಯೆಗೆ 50 ಸಾವಿರದಿಂದ 5 ಲಕ್ಷದವರೆಗೆ ದಂಡ ವಿಧಿಸಲಾಗುವುದು. ಗೋಹತ್ಯೆ ಅಪರಾಧದಲ್ಲಿ 2ನೇ ಬಾರಿ ಸಿಕ್ಕಿ ಬಿದ್ದಲ್ಲಿ 10 ಲಕ್ಷ ರೂಪಾಯಿ ದಂಡ ವಿಧಿಸಲಾಗುವುದು. ಗೋಹತ್ಯೆಗೆ 3 ರಿಂದ 7 ವರ್ಷ ಕಾಲ ಜೈಲು ಶಿಕ್ಷೆ ಮತ್ತು ಅಪರಾಧಿಗಳಿಗೆ ನಿರ್ದಿಷ್ಟ ಅವಧಿವರೆಗೆ ಜಾಮೀನು ಇಲ್ಲ.
13 ವರ್ಷ ಮೇಲ್ಪಟ್ಟ ಎಮ್ಮೆಗಳ ಹತ್ಯೆಗೆ ಷರತ್ತುಬದ್ಧ ಒಪ್ಪಿಗೆ ನೀಡಲಾಗಿದ್ದು, ಸಂಬಂಧಿಸಿದ ಸಂಸ್ಥೆಗಳ ಅನುಮತಿ ಅಗತ್ಯವಾಗಿ ಪಡೆದುಕೊಳ್ಳುವುದು. ಗುಜರಾತ್, ಯುಪಿ ಮಾದರಿಯಲ್ಲಿ ಶಿಕ್ಷೆ, ದಂಡ ವಿಧಿಸಲಾಗುವುದು. ಗೋಹತ್ಯೆ ಪ್ರಕರಣಗಳ ವಿಚಾರಣೆ ವಿಶೇಷ ಕೋರ್ಟ್‍ನಲ್ಲಿ ನಡೆಯಲಿದೆ.
0 comments:
Post a Comment