ಬಂಟ್ವಾಳ, ಡಿ. 27, 2020 (ಕರಾವಳಿ ಟೈಮ್ಸ್) : ಪಕ್ಷದಿಂದ ಎಲ್ಲವನ್ನೂ ಪಡೆದು ಪಕ್ಷದ, ಕಾರ್ಯಕರ್ತರ ಹಾಗೂ ಜನರ ಮೇಲಿನ ಋಣ ಅರ್ಥ ಮಾಡಿಕೊಳ್ಳಲು ವಿಫಲರಾಗಿ ಇನ್ನಷ್ಟು ಅಧಿಕಾರ-ಅಂತಸ್ತಿನ ಲಾಲಸೆಯಿಂದ ಪಕ್ಷ ತೊರೆಯುವ ನಾಯಕರ ಬಗ್ಗೆ ಪಕ್ಷದ ಕಾರ್ಯಕರ್ತರು ಯಾವುದೇ ಕಾರಣಕ್ಕೂ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಪಕ್ಷದ ನಿಜವಾದ ಆಸ್ತಿ ಕಾರ್ಯಕರ್ತರೇ ಹೊರತು ಕಾರ್ಯಕರ್ತರ ಶ್ರಮದಿಂದ ಅಧಿಕಾರ ಉಂಡ ನಾಯಕರಲ್ಲ ಎಂದು ಜಿ ಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಅವರು ಪಕ್ಷಾಂತರಿಗಳು ಹಾಗೂ ಪಕ್ಷ ವಿರೋಧಿ ನಾಯಕರಿಗೆ ಗಂಭೀರವಾಗಿ ಝಾಡಿಸಿದರು.
ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗ್ರಾ ಪಂ ಚುನಾವಣೆಗೆ ಅಭ್ಯರ್ಥಿಗಳಾಗಿ ಕಾಂಗ್ರೆಸ್ ಬೆಂಬಲಿತರಾಗಿ ಸ್ಪರ್ಧಿಸಿದ ಎಲ್ಲಾ ಅಭ್ಯರ್ಥಿಗಳಿಗೆ ಮಾಜಿ ಸಚಿವ ಬಿ ರಮಾನಾಥ ರೈ ನೇತೃತ್ವದಲ್ಲಿ ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬಿ ಸಿ ರೋಡಿನಲ್ಲಿ ಹಮ್ಮಿಕೊಳ್ಳಲಾದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಪಕ್ಷದ ಕಾರ್ಯಕರ್ತರ ಹಾಗೂ ಚುನಾವಣೆಯಲ್ಲಿ ಅತ್ಯಮೂಲ್ಯ ಮತಕೊಟ್ಟು ಚುನಾಯಿಸಿದ ಜನರ ಹೃದಯಕ್ಕೆ ತಿವಿಯುವಂತಹ ಕೆಲಸ ಮಾಡುವ ಯಾರೇ ಆದರೂ ಅವರ ಭವಿಷ್ಯದಲ್ಲಿ ಅದನ್ನು ಅನುಭವಿಸಿಯೇ ತೀರುತ್ತಾರೆ ಎಂದರು. ನಾಯಕರನ್ನು ಸೃಷ್ಟಿಸುವವರು ಪಕ್ಷದ ಕಾರ್ಯಕರ್ತರಾಗಿದ್ದು, ಈ ನೆಲೆಯಲ್ಲಿ ಕಾರ್ಯಕರ್ತರೇ ಪಕ್ಷಕ್ಕೆ ನಿಜವಾದ ಆಸ್ತಿಯಾಗಿದ್ದಾರೆ. ಈ ನಿಟ್ಟಿನಲ್ಲಿ ಒಂದಿಬ್ಬರು ನಾಯಕರ ನಡೆಯಿಂದಾಗಿ ಕಾಂಗ್ರೆಸ್ ಕಾರ್ಯಕರ್ತರು ದೃತಿಗೆಡುವ ಅವಶ್ಯಕತೆಯಿಲ್ಲ. ಜನರ ನಾಡಿ ಮಿಡಿತ, ಜನರ ಹಾಗೂ ಪಕ್ಷದ ಕಾರ್ಯಕರ್ತರ ಋಣ ಅರಿತುಕೊಂಡು ರಾತ್ರಿ-ಹಗಲು ಹೃದಯ ವೈಶಾಲ್ಯತೆಯಿಂದ ದುಡಿಯುವ ಮಾಜಿ ಸಚಿವ ಬಿ ರಮಾನಾಥ ರೈ ಅವರು ಮುಂದಿನ ದಿನಗಳಲ್ಲಿ ಮತ್ತೆ ಬಂಟ್ವಾಳದ ಶಾಸಕರಾಗಿ, ರಾಜ್ಯದ ಸಚಿವರಾಗಿ ಜನ ಸೇವೆ ಮುಂದುವರಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೆದರಿಕೆ ರಾಜಕೀಯದ ವಿರುದ್ದ ಸೆಟೆದು ನಿಲ್ಲಬೇಕು : ರೈ
ಅಭ್ಯರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ಮಾಜಿ ಸಚಿವ ರಮಾನಾಥ ರೈ ಅವರು, ಕಾಂಗ್ರೆಸ್ ಪಕ್ಷ ಹಾಗೂ ಕಾರ್ಯಕರ್ತರು ಕೊಟ್ಟ ಅಧಿಕಾರ, ಅಂತಸ್ತು ಉಂಡು ಬಳಿಕ ಉಂಡ ಮನೆಗೇ ದ್ರೋಹ ಬಗೆದ ಯಾವುದೇ ನಾಯಕರು ಅವರು ನಾಯಕರಲ್ಲ. ಪಕ್ಷ ದ್ರೋಹಿಗಳು ಹಾಗೂ ಜನದ್ರೋಹಿಗಳು ಎಂದು ಕಿಡಿ ಕಾರಿದರು. ಅಧಿಕಾರ ದರ್ಪದಿಂದ ಬೆದರಿಕೆ ರಾಜಕೀಯ ಮಾಡುವವರ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಮುಂದಿನ ದಿನಗಳಲ್ಲಿ ಸೆಟೆದು ನಿಲ್ಲಬೇಕಿದೆ ಎಂದವರು ಕರೆ ನೀಡಿದರು.
ಪಕ್ಷ ಪ್ರಮುಖರಾ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಬಿ ಎಂ ಅಬ್ಬಾಸ್ ಅಲಿ, ಪದ್ಮಶೇಖರ್ ಜೈನ್, ಮುಹಮ್ಮದ್ ಶರೀಫ್, ಜನಾರ್ದನ ಚೆಂಡ್ತಿಮಾರ್, ಮಾಯಿಲಪ್ಪ ಸಾಲ್ಯಾನ್, ಜಯಂತಿ ಪೂಜಾರಿ, ಮಲ್ಲಿಕಾ ಶೆಟ್ಟಿ, ಪ್ರಶಾಂತ್ ಕುಲಾಲ್ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment