ಬಂಟ್ವಾಳ, ಡಿ. 12, 2020 (ಕರಾವಳಿ ಟೈಮ್ಸ್) : ತಾಲೂಕಿನ ಪ್ರಮುಖ ಪಟ್ಟಣವಾಗಿರುವ ಬಿ ಸಿ ರೋಡಿನ ಹೃದಯ ಭಾಗದಲ್ಲೆ ಇರುವ ಮೆಡಿಕಲ್ ಹಾಗೂ ದಿನಸಿ ಅಂಗಡಿಗೆ ನುಗ್ಗಿದ ಕಳ್ಳರು ನಗದು ಹಣ ದೋಚಿದ ಬಗ್ಗೆ ಬಂಟ್ವಾಳ ನಗರ ಠಾಣೆಗೆ ದೂರು ನೀಡಲಾಗಿದೆ.
ಬಿ ಸಿ ರೋಡಿನ ಗಣೇಶ್ ಮೆಡಿಕಲ್ ಹಾಗೂ ಈಸ್ ಬಾಕನ ಅಂಗಡಿ ಎಂದೇ ಪರಿಚಿತವಾಗಿರುವ ಸದ್ಯ ಅವರ ಪುತ್ರ ಯೂನುಸ್ ನಡೆಸಿಕೊಂಡು ಬರುತ್ತಿರುವ ದಿನಸಿ ಅಂಗಡಿಯಲ್ಲಿ ಈ ಕಳ್ಳತನ ಕೃತ್ಯ ನಡೆದಿದೆ. ಮೆಡಿಕಲ್ ಗೆ ನುಗ್ಗಿದ ಕಳ್ಳರು 3 ಸಾವಿರ ರೂಪಾಯಿ ನಗದು ಹಾಗೂ ಕಂಪ್ಯೂಟರ್ ಮಾನಿಟರ್ ಕಳವು ಮಾಡಿದರೆ, ದಿನಸಿ ಅಂಗಡಿಯ ಡ್ರಾವರ್ ನಿಂದ 5 ಸಾವಿರ ರೂಪಾಯಿ ನಗದು ಹಾಗೂ ಕೆಲವು ಸಾವಿರ ರೂಪಾಯಿ ಮೌಲ್ಯದ ದಿನಬಳಕೆಯ ಜೀನಸು ಸಾಮಗ್ರಿಗಳನ್ನು ಕಳವುಗೈದು ಪರಾರಿಯಾಗಿದ್ದಾರೆ.
ಕಳ್ಳತನ ನಡೆದಿರುವ ಎರಡೂ ಅಂಗಡಿಗಳು ಪೇಟೆಯ ಹೃದಯ ಭಾಗದಲ್ಲಿ ಹೆದ್ದಾರಿ ಬದಿಯಲ್ಲೇ ಇರುವುದರಲ್ಲದೆ ಕೂಗಳತೆಯ ದೂರದಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣೆ ಇದೆ. ಅಲ್ಲದೆ ಎರಡೂ ಅಂಗಡಿಗಳು ಸಂಪೂರ್ಣವಾಗಿ ಸೀಸಿ ಟಿವಿ ಕಣ್ಗಾವಲಿನಲ್ಲಿ ಭದ್ರ ಲಾಕ್ ಅಳವಡಿಸಿದ ರೀತಿಯಲ್ಲಿದೆ. ಹೀಗಿರುತ್ತಾ ಪೊಲೀಸರಿಗೇ ಸವಾಲೊಡ್ಡುವ ರೀತಿಯಲ್ಲಿ ಈ ಕಳವು ಕೃತ್ಯ ನಡೆದಿದ್ದು ನಗರದ ಜನತೆಯ ಆತಂಕಕ್ಕೆ ಕಾರಣವಾಗಿದೆ.
0 comments:
Post a Comment