ಬಂಟ್ವಾಳ, ಡಿ. 11, 2020 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಆರೋಗ್ಯಾಧಿಕಾರಿ ರವಿಕೃಷ್ಣ ಅವರು ಗುರುವಾರ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ವಿಟ್ಲ ಸಮೀಪದ ಪುಣಚ ನಿವಾಸಿಯಾಗಿರುವ ರವಿಕೃಷ್ಣ ಅವರು ಇತ್ತೀಚೆಗಷ್ಟೆ ಸುಳ್ಯ ಪುರಸಭೆಯಿಂದ ವರ್ಗಾವಣೆಗೊಂಡು ಬಂಟ್ವಾಳಕ್ಕೆ ಬಂದು ಕಾರ್ಯನಿರ್ವಹಿಸುತ್ತಿದ್ದರು. ತಮ್ಮ ಕಾರ್ಯನಿರ್ವಹಣೆಯ ಸಂದರ್ಭದಲ್ಲಿ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಅವರು ವಿನಾ ಕಾರಣ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಾನಸಿಕವಾಗಿ ನೊಂದುಕೊಂಡು ಗುರುವಾರ ಬೆಳಿಗ್ಗೆ ವಿಪರೀತ ಮದ್ಯಸೇವನೆ ಹಾಗೂ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಆತ್ಮಹತ್ಯೆಗೆ ವಿಫಲ ಯತ್ನ ನಡೆಸಿದ ರವಿಕೃಷ್ಣ ಅವರನ್ನು ಮೆಲ್ಕಾರಿನಲ್ಲಿ ಪತ್ತೆ ಹಚ್ಚಿದ ಸಾರ್ವಜನಿಕರು ಉಪಚರಿಸಿ ಮನೆಗೆ ಕಳುಹಿಸಿಕೊಟ್ಟಿದ್ದಾರೆ ಎನ್ನಲಾಗಿದೆ. ಆದರೆ ಬಳಿಕ ಅವರನ್ನು ಮನೆ ಮಂದಿ ಚಿಕಿತ್ಸೆಗಾಗಿ ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆತ್ಮಹತ್ಯೆಗೆ ಯತ್ನಿಸಿದ ರವಿಕೃಷ್ಣ ಅವರು ಪತ್ರವೊಂದನ್ನು ಬರೆದಿದ್ದಾರೆ ಎನ್ನಲಾಗಿದ್ದು, ಪತ್ರದಲ್ಲಿ ನನ್ನ ಸಾವಿಗೆ ಮುಖ್ಯಾಧಿಕಾರಿ ಹಾಗೂ ಕಛೇರಿಯ ಇನ್ನೋರ್ವ ಸಿಬ್ಬಂದಿ ಕಾರಣ ಎಂದು ಬರೆದುಕೊಂಡಿದ್ದಾರೆ ಎನ್ನಲಾಗಿದೆ. ಸದ್ಯ ರವಿಕೃಷ್ಣ ಅವರು ಜೀವಾಪಾಯದಿಂದ ಪಾರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆತ್ಮಹತ್ಯೆಗೆ ಯತ್ನಿಸಿದ ಆರೋಗ್ಯಾಧಿಕಾರಿ ಅವರನ್ನು ಗುರುವಾರ ತಡ ರಾತ್ರಿ ಆಸ್ಪತ್ರೆಯಲ್ಲಿ ಭೇಟಿಯಾದ ಬಂಟ್ವಾಳ ಪುರಸಭಾಧ್ಯಕ್ಷ ಮುಹಮ್ಮದ್ ಶರೀಫ್ ಶಾಂತಿಅಂಗಡಿ ಹಾಗೂ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ ಅವರು ಆರೋಗ್ಯ ವಿಚಾರಿಸಿ ಸಾಂತ್ವನ ಹೇಳಿದ್ದಾರೆ.
0 comments:
Post a Comment