ಬಂಟ್ವಾಳ, ಡಿ. 29, 2020 (ಕರಾವಳಿ ಟೈಮ್ಸ್) : ಗ್ರಾಮ ಪಂಚಾಯತ್ ಗೆ ತಾಲೂಕಿನಲ್ಲಿ ಡಿ. 22 ರಂದು ನಡೆದ ಚುನಾವಣೆಯ ಮತ ಎಣಿಕೆ ಕಾರ್ಯವು ಬಿ ಸಿ ರೋಡು ಸಮೀಪದ ಮೊಡಂಕಾಪು ಇನ್ಫೆಂಟ್ ಜೀಸಸ್ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಡಿ. 30 ರಂದು ಬೆಳಿಗ್ಗೆ 8 ಗಂಟೆಯಿಂದ ನಡೆಯಲಿದ್ದು, ಮತ ಎಣಿಕಾ ಕೇಂದ್ರಕ್ಕೆ ಪ್ರವೇಶಿಸುವ ಅಭ್ಯರ್ಥಿಗಳು ಹಾಗೂ ಏಜೆಂಟರಿಗೆ ತಾಲೂಕು ತಹಶೀಲ್ದಾರ್ ಅನಿತಾಲಕ್ಷ್ಮಿ ಅವರು ಕೆಲವೊಂದು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುವಂತೆ ಸೂಚಿಸಿದ್ದಾರೆ.
ತಾಲೂಕಿನ ವಿವಿಧ ಗ್ರಾ ಪಂ ಗಳ ಮತ ಎಣಿಕೆ ಶಾಲೆಯ ವಿವಿಧ ಕೋಣೆಗಳಲ್ಲಿ ನಡೆಯಲಿದೆ. ಎಣಿಕಾ ಕೊಠಡಿಯೊಳಗೆ ಅಭ್ಯರ್ಥಿ ಅಥವಾ ಓರ್ವ ಏಜೆಂಟಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ಎಣಿಕಾ ಕೇಂದ್ರ ಪ್ರವೇಶಿಸುವಾಗ ಚುನಾವಣಾಧಿಕಾರಿ ಸಹಿ ಮಾಡಿದ ಭಾವಚಿತ್ರ ಇರುವ ಗುರುತುಪತ್ರ ಕಡ್ಡಾಯವಾಗಿ ತರುವುದು ಹಾಗೂ ಅಗತ್ಯವಿರುವೆಡೆ ಹಾಜರುಪಡಿಸುವುದು, ಮೊಬೈಲ್ ಫೋನ್, ಸ್ಮಾರ್ಟ್ ವಾಚ್ ಹಾಗೂ ಮಾರಕಾಯುಧಗಳನ್ನು ಎಣಿಕಾ ಕೇಂದ್ರದೊಳಗೆ ಕೊಂಡೊಯ್ಯುವುದು ನಿಷೇಧಿಸಲಾಗಿದೆ. ಒಮ್ಮೆ ಎಣಿಕಾ ಕೇಂದ್ರ ಪ್ರವೇಶಿಸಿದ ಬಳಿಕ ಹೊರಹೋಗುವಂತಿಲ್ಲ. ಹೊರ ಹೋದರೆ ಮರು ಪ್ರವೇಶವಿಲ್ಲ., ಪ್ರತಿ ಎಣಿಕಾ ಕೊಠಡಿ ಒಳಗೆ ಅಯಾ ಕ್ಷೇತ್ರದ ಅಭ್ಯರ್ಥಿ ಅಥವಾ ಏಜೆಂಟಿಗೆ ಮಾತ್ರ ಪ್ರವೇಶ, ಎಣಿಕಾ ಕಾರ್ಯ ಮುಗಿದ ಬಳಿಕ ವಿಜೇತ ಅಭ್ಯರ್ಥಿಗಳ ಹೊರತು ಬಾಕಿ ಉಳಿದ ಎಲ್ಲರೂ ತಕ್ಷಣ ಕೇಂದ್ರ ತೆರವುಗೊಳಿಸಬೇಕು, ವಿಜೇತರಿಗೆ ಆಯಾ ಕ್ಷೇತ್ರದ ಚುನಾವಣಾಧಿಕಾರಿಗಳು ಪ್ರಮಾಣ ಪತ್ರ ವಿತರಿಸುವರು, ಎಣಿಕಾ ಕೇಂದ್ರದ ಒಳಗೆ ಹಾಗೂ 500 ಮೀಟರ್ ಅಂತರದಲ್ಲಿ ಯಾವುದೇ ವಿಜಯೋತ್ಸವ ಹಾಗೂ ಸಂಭ್ರಮಾಚರಣೆ ನಡೆಸುವುದನ್ನು ನಿಷೇಧಿಸಲಾಗಿದೆ., ಸರಕಾರ ಕೋವಿಡ್ ಮಾರ್ಗ ಸೂಚಿಯನ್ನು ಕಡ್ಡಾಯವಾಗಿ ಪಾಲಿಸಲೇಬೇಕು.
ಈ ಎಲ್ಲಾ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸದೆ ಇದ್ದಲ್ಲಿ ಮೊಕದ್ದಮೆ ದಾಖಲಿಸಲಾಗುವುದು ಹಾಗೂ ಮತ ಎಣಿಕಾ ಕೇಂದ್ರದಿಂದ ಹೊರಗೆ ಕಳಿಸಲಾಗುವುದು ಎಂದು ತಹಶೀಲ್ದಾರರ ಪ್ರಕಟಣೆ ತಿಳಿಸಿದೆ.
0 comments:
Post a Comment