ಬಂಟ್ವಾಳ, ಡಿ. 10, 2020 (ಕರಾವಳಿ ಟೈಮ್ಸ್) : ಕುಡಿಯುವ ನೀರಿನ ಜೊತೆಗೆ ಗಾಳಿಗೂ ಬಿಲ್ ಪಾವತಿಸಬೇಕಾದ ದುಸ್ಥಿತಿ ಬಂಟ್ವಾಳ ಪುರಸಭೆಯಲ್ಲಿದೆ ಎಂದು ಪುರಸಭಾ ಸದಸ್ಯೆ ಝೀನತ್ ಫೈರೋಝ್ ವ್ಯಂಗ್ಯವಾಡುವ ಮೂಲಕ ಗಂಭೀರ ಆರೋಪ ಮಾಡಿದರು.
ಸುದೀರ್ಘ ಎರಡೂವರೆ ವರ್ಷಗಳ ಬಳಿಕ ಅಜ್ಞಾತ ವಾಸ ಮುಗಿಸಿದ ಬಂಟ್ವಾಳ ಪುರಸಭೆಯ ಚುನಾಯಿತ ಪ್ರತಿನಿಧಿಗಳು ಗುರುವಾರ ನಡೆದ ಮೊದಲ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ತಮ್ಮ ತಮ್ಮ ವಾರ್ಡಿನ ಜನರ ಸಮಸ್ಯೆಗಳ ಬಗ್ಗೆ ಮನಬಿಚ್ಚಿ ಮಾತನಾಡಿದರು.
ಪುರಸಭಾ ವ್ಯಾಪ್ತಿಯ ತನ್ನ ವಾರ್ಡ್ ಗೂಡಿನಬಳಿ ಪರಿಸರದಲ್ಲಿ ಹಲವು ಮನೆಗಳಿಗೆ ವಿದ್ಯುತ್ ಬಿಲ್‍ಗಿಂತ ಜಾಸ್ತಿ ನೀರಿನ ಬಿಲ್ ಬರುತ್ತಿದೆ. ಇದಕ್ಕೆ ಕಾರಣ ಏನು ಎಂಬುದನ್ನು ಸಮಗ್ರ ಕುಡಿಯುವ ನೀರಿನ ಇಲಾಖೆಗೆ ಸಂಬಂಧಿಸಿದ ಸಿಬ್ಬಂದಿಗಳಲ್ಲಿ ವಿಚಾರಿಸಿದರೆ, ಕೆಲವೊಮ್ಮೆ ಗಾಳಿ ಬರುವಾಗ ಮೀಟರ್ ಓಡಾಟ ಜಾಸ್ತಿಯಾಗಿ ಈ ರೀತಿಯಾಗುತ್ತಿದೆ ಎಂಬ ಉಡಾಫೆ ಹಾಗೂ ಬೇಜವಾಬ್ದಾರಿ ಉತ್ತರ ಬರುತ್ತಿದೆ. ಇದರಿರಂದಾಗಿ ಈ ಮೊದಲು ವಾರ್ಡಿನ ಜನ ಬಳಸಿದ ನೀರಿಗೆ ಮಾತ್ರ ಬಿಲ್ ಪಾವತಿಸುತ್ತಿದ್ದರು. ಇದೀಗ ನೀರಿನ ಜೊತೆ ಬೀಸಿದ ಗಾಳಿಗೂ ಬಿಲ್ ಪಾವತಿಸಬೇಕಾದ ದುಸ್ಥಿತಿ ಇದೆ ಎಂದು ಝೀನತ್ ಫೈರೋಝ್ ಅವರು ಸಭೆಯ ಗಮನ ಸೆಳೆದರು. ಈ ಸಂದರ್ಭ ಉತ್ತರಿಸಿದ ಸಹಾಯಕ ಇಂಜಿನಿಯರ್ ಶೋಭಾಲಕ್ಷ್ಮಿ ಅವರು ನಾನಂತೂ ಅಂತಹ ಪದಗಳಲ್ಲಿ ಉತ್ತರಿಸಿಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ಪರಿಶೀಲನೆ ನಡೆಸಿ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಬಳಿಕ ಪುರಸಭಾ ವ್ಯಾಪ್ತಿಯ ಎಲ್ಲಾ 27 ಸದಸ್ಯರುಗಳೂ ಕೂಡಾ ಪಕ್ಷ ಬೇಧ ಮರೆತು ಬೇಸಿಗೆ ಕಾಲಕ್ಕೆ ಮುನ್ನವೇ ಪ್ರತೀ ವಾರ್ಡಿನಲ್ಲೂ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಗಂಭೀರ ಆರೋಪಗಳನ್ನು ಬೊಟ್ಟು ಮಾಡಿದರು. ಸಮಗ್ರ ಕುಡಿಯುವ ನೀರಿನ ಯೋಜನೆ ಸಂಪೂರ್ಣವಾಗಿ ಪುರಸಭೆಗೆ ಹಸ್ತಾಂತರವಾಗುವವರೆಗೂ ಪುರವಾಸಿಗಳಿಗೆ ನೀರಿನ ಸಮಸ್ಯೆ ಬಾರದಂತೆ ಪುರಸಭೆ ಅಧಿಕಾರಿಗಳು ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು ಇರುವ ಕೊಳವೆ ಬಾವಿ, ಹಳೆ ಪೈಪ್ ಲೈನ್‍ಗಳನ್ನು ದುರಸ್ತಿಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರುಗಳಾದ ಹಸೈನಾರ್ ತಾಳಿಪಡ್ಪು, ಲುಕ್ಮಾನ್ ಬಿ ಸಿ ರೋಡು, ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ವಾಸು ಪೂಜಾರಿ ಲೊರೆಟ್ಟೋ, ಗಂಗಾಧರ, ಗೋವಿಂದ ಪ್ರಭು, ಇದ್ರೀಸ್ ಪಿ ಜೆ, ಜನಾರ್ದನ ಚೆಂಡ್ತಿಮಾರ್ ಮೊದಲಾದವರು ಆಗ್ರಹಿಸಿದರು. ಸಮಗ್ರ ಕುಡಿಯುವ ನೀರು ಯೋಜನೆಯ ಅಧಿಕಾರಿಗಳು ಹಾಗೂ ಪುರಸಭಾಧಿಕಾರಿಗಳ ನಡುವಿನ ಹೊಂದಾಣಿಕೆಯ ಕೊರತೆಯೇ ಇಷ್ಟು ದೊಡ್ಡ ಮಟ್ಟದ ಸಮಸ್ಯೆ ಉದ್ಭವಿಸಲು ಕಾರಣ ಎಂದು ಸದಸ್ಯರು ಆರೋಪಿಸಿದರು.
ಈ ಸಂದರ್ಭ ಮಧ್ಯಪ್ರವೇಶಿಸಿ ಮಾತನಾಡಿದ ಅಧ್ಯಕ್ಷ ಶರೀಫ್ ಶಾಂತಿಅಂಗಡಿ ಅವರು ನೀರಿನ ಸಮಸ್ಯೆ ಬಗ್ಗೆ ಪರಿಶೀಲನೆ ನಡೆಸಿ ಪರಿಹಾರ ಕಂಡುಕೊಳ್ಳಲು ಒಂದು ತಿಂಗಳ ಅವಧಿ ನೀಡುತ್ತಿದ್ದು, ಮುಂದಿನ ಸಾಮಾನ್ಯ ಸಭೆಗೆ ಮುಂಚಿತವಾಗಿ ಪುರಸಭೆಯ ಯಾವೆಲ್ಲ ವಾರ್ಡ್‍ಗಳಲ್ಲಿ ಸಮಸ್ಯೆ ಇದೆ ಎಂಬುದನ್ನು ಅಧಿಕಾರಿಗಳು ಜಂಟಿ ಸರ್ವೆ ಮಾಡಿ ಪರಿಹಾರೋಪಾಯಗಳನ್ನು ಕಂಡುಕೊಂಡು ಸಭೆಗೆ ವಿವರಿಸಬೇಕು ಎಂದು ಸೂಚಿಸಿದರು.
ಬಾರೆಕಾಡು ಪ್ರದೇಶದಲ್ಲಿ ಬಡವರಿಗೆ ನೀಡಲಾಗಿರುವ ನಿವೇಶನಗಳಿಗೆ ಸಂಬಂಧಿಸಿದಂತೆ ಇರುವ ಹಕ್ಕು ಪತ್ರ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದ ಹಿರಿಯ ಸದಸ್ಯ ವಾಸು ಪೂಜಾರಿ ಅವರು ಇಲ್ಲಿನ ನಿವೇಶನಗಳಲ್ಲಿ ಖಾಸಗಿ ವ್ಯಕ್ತಿಯೋರ್ವರು ಮಧ್ಯಪ್ರವೇಶಿಸಿ ಪದೇ ಪದೇ ಸರ್ವೆ ನಡೆಸುವುದಲ್ಲದೆ, ಲೋಕಾಯುಕ್ತ ದೂರುಗಳನ್ನು ನೀಡುತ್ತಾ ಇರುವುದರಿಂದ ಪ್ರದೇಶದಲ್ಲಿ ವಾಸಿಸುತ್ತಿರುವ ಬಡವರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಪುರಸಭೆ ತಕ್ಷಣ ಮಧ್ಯ ಪ್ರವೇಶಿಸಿ ಪುರಸಭಾಧ್ಯಕ್ಷರ ನೇತೃತ್ವದಲ್ಲೇ ಸರ್ವೆ ನಡೆಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಈ ಸಂಬಂಧ ಪುರಸಭೆ ನೇರ ಹೊಣೆಯಾಗಿದ್ದು, ಇದಕ್ಕೆ ಬಡವರನ್ನು ಬಲಿಪಶು ಮಾಡಬಾರದು ಎಂದು ಆಗ್ರಹಿಸಿದರು.
ಪುರಸಭಾ ವ್ಯಾಪ್ತಿಯ ಗುಡ್ಡೆಅಂಗಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಗ್ಯಾಸ್ ಪಂಪ್ ಯೋಜನೆಯ ಬಗ್ಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಸದಸ್ಯ ಮೂನಿಶ್ ಅಲಿ ಪ್ರಸ್ತಾಪಿಸಿ ಮುಖ್ಯಾಧಿಕಾರಿ ಬಳಿ ಸ್ಪಷ್ಟನೆ ಬಯಸಿದರು. ಈ ಸಂದರ್ಭ ಮಧ್ಯಪ್ರವೇಶಿಸಿದ ಸ್ಥಳೀಯ ಸದಸ್ಯ ಅಬೂಬಕ್ಕರ್ ಸಿದ್ದೀಕ್, ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ಪಡೆಯದೆ ಎನ್‍ಒಸಿ ನೀಡಿದ ಬಗ್ಗೆ ಮುಖ್ಯಾಧಿಕಾರಿಗಳನ್ನು ತರಾಟೆಗಳೆದರು. ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳು ಒಪ್ಪಿಸಿದ ವರದಿ ಆಧರಿಸಿ ಎನ್‍ಒಸಿ ನೀಡಿರುವುದಾಗಿ ಮುಖ್ಯಾಧಿಕಾರಿ ಸಭೆಗೆ ತಿಳಿಸಿದರು. ಮುಂದಿನ ದಿನಗಳಲ್ಲಿ ಸ್ಥಳೀಯ ಪ್ರತಿನಿಧಿಗಳನ್ನು ವಿಶ್ವಾಸಕ್ಕೆ ಪಡೆಯದೆ ಅಧಿಕಾರಿಗಳು ನೇರವಾಗಿ ಹಸ್ತಕ್ಷೇಪ ನಡೆಸಿ ರಾಜಕೀಯ ಜಂಘೀ ಕುಸ್ತಿಗೆ ಅವಕಾಶ ನೀಡಿದರೆ ಸುಮ್ಮನಿರುವುದಿಲ್ಲ ಎಂದು ತಾಕೀತು ಮಾಡಿದರು. ಉಪಾಧ್ಯಕ್ಷೆ ಜೆಸಿಂತಾ ಡಿ’ಸೋಜ, ಇಂಜಿನಿಯರ್ ಡೊಮೆನಿಕ್ ಡಿ’ಮೆಲ್ಲೋ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು.
0 comments:
Post a Comment