ಸಿಡ್ನಿ, ಡಿ. 08, 2020 (ಕರಾವಳಿ ಟೈಮ್ಸ್) : ಇಲ್ಲಿನ ಮೈದಾನದಲ್ಲಿ ಮಂಗಳವಾರ ನಡೆದ 3ನೇ ಹಾಗೂ ಅಂತಿಮ ಟಿ-20 ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಭಾರತ ತಂಡವನ್ನು 12 ರನ್‍ಗಳಿಂದ ಸೋಲಿಸುವ ಮೂಲಕ ಸರಣಿ ಕ್ಲೀನ್ ಸ್ವೀಪ್ ಅಗೌರವದಿಂದ ಪಾರಾಗಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ ನಿಗದಿತ 20 ಓವರ್‍ಗಳಲ್ಲಿ 186 ರನ್ ಗಳಿಸಿತು. 187 ರನ್‍ಗಳ ಬೃಹತ್ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಅಂತಿಮವಾಗಿ 20 ಓವರ್‍ಗಳಲ್ಲಿ 7 ವಿಕೆಟ್ ಕಳೆದುಕೊಂಡು 174 ರನ್ ಮಾತ್ರ ಗಳಿಸಲು ಶಕ್ತವಾಗಿ 12 ರನ್‍ಗಳಿಂದ ಆಸೀಸ್‍ಗೆ ಶರಣಾಯಿತು.
187 ರನ್‍ಗಳ ಕಠಿಣ ಗುರಿ ಪಡೆದ ಭಾರತಕ್ಕೆ ಕೆ ಎಲ್ ರಾಹುಲ್ ಶೂನ್ಯಕ್ಕೆ ಔಟಾಗುವ ಮೂಲಕ ಮೊದಲ ಆಘಾತ ಎದುರಾಯಿತು. ಬಳಿಕ ನಾಯಕ ವಿರಾಟ್ ಕೊಹ್ಲಿ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ತಂಡ ಸಂಕಷ್ಟದಿಂದ ಪಾರಾಯಿತಾದರೂ ಸೋಲು ತಪ್ಪಿಸಲಾಗಲಿಲ್ಲ. ಕೊಹ್ಲಿ 85 ರನ್ (61 ಎಸೆತ, 3 ಸಿಕ್ಸರ್, 4 ಬೌಂಡರಿ) ಗಳಿಸಿ ಜಯದ ಹೊಸ್ತಿಲಲ್ಲಿ ಔಟಾದರು. ಶಿಖರ್ ಧವನ್ 28 ರನ್ ಗಳಿಸಿ ಔಟಾದರೆ, ಸಂಜು ಸ್ಯಾಮ್ಸನ್ 10 ರನ್ ಗಳಿಸಿ ನಿರ್ಗಮಿಸಿದರು. ಶ್ರೇಯಸ್ ಅಯ್ಯರ್ ಶೂನ್ಯ ಸಂಪಾದಿಸಿದರು. ಹಾರ್ದಿಕ್ ಪಾಂಡ್ಯಾ 20 ರನ್ (13 ಎಸೆತ, 2 ಸಿಕ್ಸರ್, 1 ಬೌಂಡರಿ), ಶಾರ್ದೂಲ್ ಠಾಕೂರ್ 17 ರನ್ (7 ಎಸೆತ, 2 ಸಿಕ್ಸರ್) ಗಳಿಸಿದರು.
ಆಸ್ಟ್ರೇಲಿಯಾದ ಪರವಾಗಿ ಆರಂಭಿಕ ಆಟಗಾರ ಮಾಥ್ಯೂ ವೇಡ್ 80 ರನ್ (53 ಎಸೆತ, 7 ಬೌಂಡರಿ, 2 ಸಿಕ್ಸರ್) ಗ್ಲೆನ್ ಮ್ಯಾಕ್ಸ್‍ವೆಲ್ 54 ರನ್ (36 ಎಸೆತ, 3 ಬೌಂಡರಿ, 3 ಸಿಕ್ಸರ್) ಭಾರಿಸಿದರು.
0 comments:
Post a Comment