ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು
ಬಂಟ್ವಾಳ, ಡಿ. 23, 2020 (ಕರಾವಳಿ ಟೈಮ್ಸ್) : ತಾಲೂಕಿನ ಅರಳ ಗ್ರಾಮದ ಪಂಬದಗದ್ದೆ ನಿವಾಸಿ ರಾಮಣ್ಣ ಶೆಟ್ಟಿ ಅವರ ಪುತ್ರ ಕೃಷಿಕ ಪುರಂದರ ಶೆಟ್ಟಿ (59) ಎಂಬವರಿಗೆ ಹದಿನೈದಕ್ಕೂ ಹೆಚ್ಚು ಮಂದಿಯ ತಂಡ ಹಲ್ಲೆ ನಡೆಸಿದ್ದಲ್ಲದೆ ಕಾರಿನಲ್ಲಿ ಅಪಹರಿಸಿ ಚಿನ್ನಾಭರಣ, ನಗದು ದೋಚಿದ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ.
ಮಂಗಳವಾರ ರಾತ್ರಿ ಸುಮಾರು 10 ಗಂಟೆಯ ವೇಳೆಗೆ ಪುರಂದರ ಶೆಟ್ಟಿ ತನ್ನ ಮನೆಯ ತೋಟಕ್ಕೆ ನೀರು ಬಿಟ್ಟು ವಾಪಾಸು ಬರುವ ವೇಳೆ ಆರೋಪಿಗಳಾದ ಪ್ರಸನ್ನ ಶೆಟ್ಟಿ, ದಾಮೋದರ ಆಳ್ವ, ಲಕ್ಷ್ಮೀದರ ಪೂಜಾರಿ, ಸುಕುಮಾರ ಶೆಟ್ಟಿ, ರಂಜಾನ್ ಕುಮಾರ್, ಯೋಗೀಶ್ ರಾಯರ್ದಡಿ, ವಸಂತ ಅಣ್ಣಳಿಕೆ, ಗಣೇಶ್ ಸುವರ್ಣ, ಚೇತನ್ ಕೊಯಿಲ, ಮನೋಹರ್ ಕೊಯಿಲ, ನಿತಿನ್ ಕೊಯಿಲ, ದಿಲ್ ರಾಜ್ ಕೊಯಿಲ, ಕೀರ್ತನ್ ಕೊಯಿಲ, ಹರ್ಷಿತ್, ಮೋಹನ್ ಹಾಗೂ ಇತರರನ್ನೊಳಗೊಂಡ ತಂಡ ಪುರಂದರ ಶೆಟ್ಟಿ ಅವರಿಗೆ ದೊಣ್ಣೆಯಿಂದ ತಲೆ, ಹೊಟ್ಟೆ, ಎದೆ ಮೊದಲಾದ ಭಾಗಗಳಿಗೆ ಹಲ್ಲೆ ನಡೆಸಿರುವುದಲ್ಲದೆ ತಲವಾರು ತೋರಿಸಿ ಕೊಲ್ಲುವುದಾಗಿ ಬೆದರಿಸಿರುತ್ತಾರೆ. ಬಳಿಕ ಪುರಂದರ ಶೆಟ್ಟಿ ಅವರ ಪತ್ನಿ ಹಾಗೂ ಮಗನಿಗೆ ಅವ್ಯಾಚ್ಯ ಶಬ್ದಗಳಿಂದ ಬೈದು ಪುರಂದರ ಅವರನ್ನು ಕಾರಿನಲ್ಲಿ ಎಳೆದು ಕೂಡಿ ಹಾಕಿ ಕಲ್ಪನೆಯಿಂದ ಪಂಬದಗದ್ದೆಗೆ ಅಪಹರಿಸಿ ದಾಮೋದರ ಎಂಬಾತನ ಮನೆಗೆ ಎತ್ತಿಕೊಂಡು ಹೋಗಿ ಜೀವ ಬೆದರಿಕೆ ಒಡ್ಡಿ ಅವರಲ್ಲಿದ್ದ ಚಿನ್ನದ ಉಂಗುರು, 20 ಸಾವಿರ ರೂಪಾಯಿ ನಗದು ಹಾಗೂ ಬೆಲೆ ಬಾಳುವ ವಾಚನ್ನು ಅಪಹರಿಸುತ್ತಾರೆ ಎಂದು ಆರೋಪಿಸಿ ಪುರಂದರ ಶೆಟ್ಟಿ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
ಆರೋಪಿತರ ವಿರುದ್ದ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಐಪಿಸಿ ಸೆಕ್ಷನ್ 143, 147, 148, 324, 323, 395, 363, 504, 506 ಹಾಗೂ 149 ಪ್ರಕಾರ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
0 comments:
Post a Comment