ನವದೆಹಲಿ, ಡಿ 18, 2020 (ಕರಾವಳಿ ಟೈಮ್ಸ್) : ದೇಶಾದ್ಯಂತ ವಾಹನಗಳಿಗೆ ಜಿಪಿಎಸ್ ಆಧಾರಿತ ತಂತ್ರಜ್ಞಾನಗಳ ಮೂಲಕ ಟೋಲ್ ಸಂಗ್ರಹ ವ್ಯವಸ್ಥೆ ಶೀಘ್ರದಲ್ಲೇ ಜಾರಿಗೆ ಬರಲಿದ್ದು, ಮುಂದಿನ ಎರಡು ವರ್ಷದೊಳಗೆ ದೇಶದ ರಾಷ್ಟ್ರೀಯ ಹೆದ್ದಾರಿಗಳು ಶೀಘ್ರದಲ್ಲೇ ಟೋಲ್ ಪ್ಲಾಝಾಗಳಿಂದ ಮುಕ್ತವಾಗಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಸುಳಿವು ನೀಡಿದ್ದಾರೆ.
ಹೆದ್ದಾರಿಗಳಲ್ಲಿ ನೂತನ ಟೋಲ್ ಸಂಗ್ರಹ ವ್ಯವಸ್ಥೆ ಜಾರಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಸಿದ್ಧತೆ ನಡೆಸುತ್ತಿದೆ ಎಂದಿರುವ ಗಡ್ಕರಿ ‘ಹೊಸ ಟೋಲ್ ಸಂಗ್ರಹ ವ್ಯವಸ್ಥೆಯ ರೂಪುರೇಷೆ ಅಂತಿಮಗೊಳಿಸಲಾಗಿದೆ. ರಷ್ಯಾ ಸರಕಾರದ ಸಹಯೋಗದೊಂದಿಗೆ ಈ ಯೋಜನೆ ಜಾರಿಗೊಳಿಸುತ್ತೇವೆ. ಹೊಸ ಟೋಲ್ ಸಂಗ್ರಹ ವ್ಯವಸ್ಥೆಯಲ್ಲಿ ವಾಹನ ಮಾಲಕರ ಬ್ಯಾಂಕ್ ಖಾತೆಯಿಂದ ನೇರವಾಗಿ ಹಣ ಸಂದಾಯವಾಗಲಿದೆ ಎಂದಿದ್ದಾರೆ.
ಸದ್ಯ ಹೊಸ ಪ್ರಯಾಣಿಕ ಮತ್ತು ವಾಣಿಜ್ಯ ವಾಹನಗಳು ಜಿಪಿಎಸ್ ಒಳಗೊಂಡಿರುತ್ತವೆ. ಹಳೆಯ ವಾಹನಗಳಿಗೂ ಜಿಪಿಎಸ್ ಅಳವಡಿಸುವ ಬಗ್ಗೆ ಸರಕಾರ ಯೋಜನೆ ರೂಪಿಸುತ್ತಿವೆ. ರಷ್ಯಾ ಸರಕಾರದ ಸಹಾಯದೊಂದಿಗೆ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ ಜಾರಿಗೊಳಿಸುವ ಬಗ್ಗೆ ವಿಸ್ತೃತ ಪರೀಕ್ಷೆ ನಡೆಸಲಾಗಿದ್ದು, ಯೋಜನೆ ಅಂತಿಮಗೊಳಿಸಲಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಭಾರತವು ಟೋಲ್ ಬೂತ್ ರಹಿತ ಹೆದ್ದಾರಿಗಳನ್ನು ಹೊಂದಲಿದೆ ಎಂದ ನಿತಿನ್ ಗಡ್ಕರಿ ಜಿಪಿಎಸ್ ವ್ಯವಸ್ಥೆ ಮೂಲಕ ವಾಹನಗಳನ್ನು ಟ್ರ್ಯಾಕ್ ಮಾಡಲಾಗುವುದು. ವಾಹನ ಮಾಲೀಕರ ಬ್ಯಾಂಕ್ ಖಾತೆಯಿಂದ ಬಾಕಿ ಟೋಲ್ ಹಣ ಸಂದಾಯವಾಗಲಿದೆ ಎಂದವರು ಮಾಹಿತಿ ನೀಡಿದ್ದಾರೆ.
ಈಗಾಗಲೇ ಟೋಲ್ ಸಂಗ್ರಹಕ್ಕೆ ಫಾಸ್ಟಾಗ್ ಕಡ್ಡಾಯಗೊಳಿಸಲಾಗಿದ್ದು, ಕಳೆದ ವರ್ಷ 70 ಕೋಟಿ ರೂಪಾಯಿಗಳಷ್ಟಿದ್ದ ಟೋಲ್ ಸಂಗ್ರಹ ಫಾಸ್ಟಾಗ್ ಕಡ್ಡಾಯ ಬಳಿಕ ಪ್ರಸ್ತುತ ವರ್ಷ ಈ ಟೋಲ್ ಸಂಗ್ರಹ 92 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ ಜಾರಿಗೆ ಬಂದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮಾರ್ಚ್ 2021ರ ವೇಳೆಗೆ 34,000 ಕೋಟಿ ರೂಪಾಯಿ ಹಾಗೂ ಮುಂದಿನ 5 ವರ್ಷಗಳಲ್ಲಿ ಅದು 1.34 ಲಕ್ಷ ಕೋಟಿ ರೂಪಾಯಿಗಳಿಗೇರಲಿದೆ ಎಂದು ಅಂದಾಜಿಸಲಾಗಿದೆ ಎಂದು ಗಡ್ಕರಿ ಹೇಳಿದ್ದಾರೆ.
0 comments:
Post a Comment