ಕ್ಯಾನ್‍ಬೆರಾ, ಡಿ. 04, 2020 (ಕರಾವಳಿ ಟೈಮ್ಸ್) : ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಸೋತು ಹಿನ್ನಡೆ ಅನುಭವಿಸಿ ಕೊನೆಯ ಏಕದಿನ ಪಂದ್ಯ ಜಯಿಸಿ ಹಳಿಗೆ ಮರಳಿದ್ದ ಟೀಂ ಇಂಡಿಯಾ ಶುಕ್ರವಾರ ಇಲ್ಲಿನ ಮೈದಾನದಲ್ಲಿ ಆರಂಭಗೊಂಡ ಮೊದಲ ಟಿ20 ಪಂದ್ಯದಲ್ಲೂ ರೋಚಕವಾಗಿ ಆಸೀಸ್ ತಂಡವನ್ನು 11 ರನ್‍ಗಳಿಂದ ಸೋಲಿಸುವ ಮೂಲಕ ಗೆಲುವಿನ ಅಭಿಯಾನ ಮುಂದುವರಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸುವ ಅವಕಾಶ ಪಡೆದ ಭಾರತ ಆರಂಭದಲ್ಲಿ ಕೆ ಎಲ್ ರಾಹುಲ್ ಅರ್ಧ ಶತಕ ಹಾಗೂ ಕೊನೆಯಲ್ಲಿ ರವೀಂದ್ರ ಜಡೇಜಾ ಅವರ ಸ್ಫೋಟಕ ಆಟದ ನೆರವಿನಿಂದ ನಿಗದಿತ 20 ಓವರ್‍ಗಳಲ್ಲಿ 162 ರನ್‍ಗಳ ಗುರಿ ನೀಡಿತು. ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಉತ್ತಮ ಆರಂಭ ಪಡೆಯಿತಾದರೂ ನಟರಾಜನ್ ಹಾಗೂ ಯಜುವೇಂದ್ರ ಚಹಲ್ ಅವರ ನಿಖರ ದಾಳಿಗೆ ಸಿಲುಕಿ ಅಂತಿಮವಾಗಿ 20 ಓವರ್‍ಗಳಲ್ಲಿ 7 ವಿಕೆಟ್ ಕಳೆದುಕೊಂಡು 150 ರನ್ ಮಾತ್ರ ಗಳಿಸಿ 11 ರನ್‍ಗಳಿಂದ ಶರಣಾಯಿತು.
ಪಂದ್ಯದಲ್ಲಿ ಜಡೇಜಾ ಗಾಯಗೊಂಡಿದ್ದರಿಂದ ಅವರ ಬದಲಿಗೆ ಯಜುವೇಂದ್ರ ಚಹಾಲ್ ಆಡಿದ್ದು, ಅವರ ಉತ್ತಮ ಬೌಲಿಂಗ್ ಸ್ಪೆಲ್ ಕಾರಣದಿಂದ ಟೀಂ ಇಂಡಿಯಾ ರೋಚಕ ಜಯ ಪಡೆಯಿತು. ಆಸ್ಟ್ರೇಲಿಯಾ ಪರ ಶಾರ್ಟ್ 34, ಆರೋನ್ ಫಿಂಚ್ 35, ಹೆನ್ರಿಕ್ 30 ಮತ್ತು ಅಬೋಟ್ ಅಜೇಯ 12 ರನ್ ಪೇರಿಸಿದರು.
ಭಾರತದ ಪರ ಧವನ್ ಕೇವಲ 1 ರನ್ ಗಳಿಸಿದರೆ, ಕೊಹ್ಲಿ 9 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಸಂಜು ಸ್ಯಾಮ್ಸನ್ 23 ರನ್ ಗಳಿಸಿದರು. ಹಾರ್ದಿಕ್ ಪಾಂಡ್ಯ 16 ರನ್ ಗಳಿಸಿದರೆ, ಉಳಿದ ಯಾವ ಆಟಗಾರರೂ ಎರಡಂಕಿ ಮೊತ್ತ ದಾಟಲಿಲ್ಲ.
ಆಸಿಸ್ ಪರ ಹೆನ್ರಿಕ್ಸ್ 3 ವಿಕೆಟ್ ಕಬಳಿಸಿದರೆ, ಮಿಚೆಲ್ ಸ್ಟಾರ್ಕ್ 2, ಜಂಪಾ ಮತ್ತು ಸ್ವೆಪ್ಸನ್ ತಲಾ 1 ವಿಕೆಟ್ ಪಡೆದರು.
0 comments:
Post a Comment