ಉಪ್ಪಿನಂಗಡಿ, ನ. 30, 2020 (ಕರಾವಳಿ ಟೈಮ್ಸ್) : ಇಲ್ಲಿಗೆ ಸಮೀಪದ ಕರಾಯ ಗ್ರಾಮದ ಹುಣಸೆಕಟ್ಟೆ ಎಂಬಲ್ಲಿ ಪಿಕಪ್ ವಾಹನ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಭಾನುವಾರ ರಾತ್ರಿ ನಡೆದಿದೆ.
ಮೃತರನ್ನು ಬೈಕ್ ಸವಾರ ಜಯರಾಮ ಹಾಗೂ ಸಹಸವಾರ ಕೃಷ್ಣಪ್ರಸಾದ್ ಎಂದು ಹೆಸರಿಸಲಾಗಿದೆ. ಘಟನೆಯ ಭೀಕರತೆಗೆ ಇಬ್ಬರೂ ಬೈಕ್ ಸವಾರರು ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪಿಕಪ್ ಚಾಲಕ ಅಪಘಾತ ನಡೆದ ಸ್ಥಳದಲ್ಲಿ ನಿಲ್ಲದೆ ವಾಹನ ಸಹಿತ ಪರಾರಿಯಾಗಿದ್ದು, ತಕ್ಷಣ ಕಾರ್ಯಪ್ರವೃತ್ತರಾದ ಸಾರ್ವಜನಿಕರು ಕಲ್ಲೇರಿ ಜನತಾ ಕಾಲೋನಿ ಬಳಿ ವಾಹನವನ್ನು ತಡೆ ಹಿಡಿದಿದ್ದಾರೆ.
ಆರೋಪಿ ಪಿಕಪ್ ಚಾಲಕನನ್ನು ಬೆಳ್ತಂಗಡಿ ತಾಲೂಕು ಕೊಯ್ಯೂರು ಗ್ರಾಮದ ಕಜೆ ನಿವಾಸಿ ಹರೀಶ (29) ಎಂದು ಹೆಸರಿಸಲಾಗಿದೆ. ಈತ ಮಾದಕ ಪದಾರ್ಥ ಸೇವಿಸಿ ವಾಹನ ಚಲಾಯಿಸಿರುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ. ಅತನ ವಿರುದ್ಧ ಪುತ್ತೂರು ಸಂಚಾರ ಪೆÇಲೀಸ್ ಠಾಣೆಯಲ್ಲಿ ಕಲಂ: 279, ಕಲಂ: 134(ಎ) ಮತ್ತು (ಬಿ), 185 ಐಎಂವಿ ಕಾಯ್ದೆ ಹಾಗೂ ಅಮಲು ಪದಾರ್ಥದ ನಶೆಯಲ್ಲಿ ವಾಹನ ಚಾಲನೆ ಮಾಡಿದರೆ ಇನ್ನೊಂದು ಜೀವಕ್ಕೆ ಹಾನಿ ಅಥವಾ ಮರಣ ಉಂಟಾಗಬಹುದು ಎಂಬ ಜ್ಞಾನವಿದ್ದು, ಅಮಲು ಪದಾರ್ಥದ ನಶೆಯಲ್ಲಿ ವಾಹನ ಚಲಾಯಿಸಿ ಕೃತ್ಯವೆಸಗಿರುವುದರಿಂದ ಜೀವಾವಧಿ ಶಿಕ್ಷೆ ಅಥವಾ ಹತ್ತು ವರ್ಷಗಳವರೆಗೆ ವಿಸ್ತರಿಸಬಹುದಾದ ಕೊಲೆಯಲ್ಲದ ಅಪರಾಧಿಕ ನರಹತ್ಯೆಯ ಕಲಂ.304 ಐಪಿಸಿ ದಾಖಲಿಸಲಾಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
0 comments:
Post a Comment