ಮಂಗಳೂರು, ನ. 29, 2020 (ಕರಾವಳಿ ಟೈಮ್ಸ್) : ಭಾವನಾತ್ಮಕ ವಿಚಾರಗಳು ಜಿಲ್ಲೆಗಳಲ್ಲಿ ಕೋಮು ಸಂಬಂಧವಾಗಿ ಬೆಳೆದು ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುವ ಸನ್ನಿವೇಶ ನಿರ್ಮಾಣವಾಗುತ್ತಿದ್ದು, ಪೊಲೀಸರು ಇದಕ್ಕೆ ಅವಕಾಶ ನೀಡಬಾರದು. ದುಷ್ಕರ್ಮಿಗಳು, ಕಿಡಿಗೇಡಿಗಳು ಯಾರೇ ಇದ್ದರೂ ನಿರ್ದಾಕ್ಷಿಣ್ಯವಾಗಿ ಮಟ್ಟ ಹಾಕುವ ಕೆಲಸವನ್ನು ಇಲಾಖೆ ಹಾಗೂ ಸರಕಾರ ಮಾಡಬೇಕು ಎಂದು ಮಾಜಿ ಸಚಿವ, ಮಂಗಳೂರು ಶಾಸಕ ಯು ಟಿ ಖಾದರ್ ಆಗ್ರಹಿಸಿದರು.
ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಎರಡೇ ದಿನಗಳ ಅಂತರದಲ್ಲಿ ನಗರದ ಮಧ್ಯ ಭಾಗದ ಗೋಡೆಗಳಲ್ಲಿ ದುಷ್ಕರ್ಮಿಗಳು ವಿವಾದಾತ್ಮಕ ಬರಹಗಳನ್ನು ಬರೆದು ಜನರನ್ನು ಭಾವನಾತ್ಮಕ ಹಾಗೂ ಕೋಮು ಆಧಾರಿತವಾಗಿ ವಿಭಜಿಸುವ ಷಡ್ಯಂತ್ರದ ಕೆಲಸವನ್ನು ಮಾಡಿರುವುದು ಅತ್ಯಂತ ಖಂಡನೀಯ. ಯಾವುದೇ ಕಾರಣಕ್ಕೂ ಇಂತಹ ಕೃತ್ಯಗಳನ್ನ ಸಹಿಸಲು ಸಾಧ್ಯವಿಲ್ಲ ಎಂದರು.
ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ದುಷ್ಕರ್ಮಿಗಳು ಕಾನೂನಿಗೆ ಹೆದರದ ಪರಿಸ್ಥಿತಿ ಬಂದಿದೆ. ಇದಕ್ಕೆ ಕಾರಣ ಏನು? ಇಂತಹ ದುಷ್ಕರ್ಮಿಗಳ ಬೆನ್ನ ಹಿಂದೆ ಬೆಂಗಾವಲಾಗಿರುವವರು ಯಾರು ಎಂಬುದನ್ನು ಪೊಲೀಸ್ ಇಲಾಖೆ ಪತ್ತೆ ಹಚ್ಚಿ ಜನರ ಮುಂದೆ ತರಬೇಕು ಎಂದು ಆಗ್ರಹಿಸಿದ ಖಾದರ್ ನಗರದ ಕೇಂದ್ರ ಸ್ಥಳಗಳಲ್ಲಿ, ಆಸ್ಪತ್ರೆ ಮುಂಭಾಗಗಳಲ್ಲಿ ಹಲ್ಲೆ, ಇರಿತ, ಕೊಲೆ, ಕೊಲೆಯತ್ನದಂತಹ ಗಂಭೀರ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ಜನರಿಗೆ ತೀವ್ರ ಆತಂಕವನ್ನು ತಂದೊಡ್ಡಿದೆ. ಜನರಿಗೆ ರಕ್ಷಣೆ, ಅಭಯ ನೀಡಬೇಕಾದ ಎಂಪಿ, ಎಂಎಲ್‍ಎಗಳು, ಪೊಲೀಸ್ ಅಧಿಕಾರಿಗಳು, ಗುಪ್ತಚರ ಇಲಾಖೆ ಏನು ಮಾಡುತ್ತಿದೆ ಎಂದವರು ಪ್ರಶ್ನಿಸಿದರು.
ಇಂತಹ ವಿದ್ವಂಸಕ ಮಾನಸಿಕತೆಯ ಬರಹಗಳನ್ನು ಬರೆದು ಸಮಾಜದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಸಲು ಬಯಸುವವರನ್ನು ತಕ್ಷಣ ಪತ್ತೆಹಚ್ಚಿ ಅವರನ್ನು ಬೇರೆ ದೇಶಕ್ಕೆ ಬಿಟ್ಟು ಬರುವ ಕೆಲಸವನ್ನು ಮಾಡಬೇಕಿದೆ ಎಂದ ಯುಟಿಕೆ ಅಂತಹ ನೀಚ ಮನಸ್ಥಿಯ ಮಂದಿಗೆ ಈ ಸೌಹಾರ್ದತೆಯ ಮಣ್ಣಿನಲ್ಲಿ ಇರಲು ಯಾವುದೇ ಹಕ್ಕಿಲ್ಲ ಎಂದು ಪ್ರತಿಪಾದಿಸಿದರು. ಇಂತಹ ವಿಚಾರಗಳು ಕಾಂಗ್ರೆಸ್ ಸರಕಾರ ಇದ್ದಾಗ ಇರಲಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದಾಗ ಇಂತಹವರಿಗೆ ಅದೇಗೆ ಇಂತಹ ದುಷ್ಕøತ್ಯ ಎಸಗಲು ಧೈರ್ಯ ಬರುತ್ತೆ ಎಂಬುದನ್ನು ಪೊಲೀಸ್ ಇಲಾಖೆ ಪತ್ತೆ ಹಚ್ಚಿ ಜನರ ಮುಂದಿಡಬೇಕು.
ಇಂತಹ ಕೃತ್ಯ ಎಸಗುವವರು ಯಾವುದೇ ಮಾನಸಿಕ ಅಸ್ವಸ್ಥರಾದರೂ ಅವರನ್ನು ಬಿಡದೆ ಶಿಕ್ಷಿಸಬೇಕು ಎಂದು ಶಾಸಕ ಖಾದರ್ ಒಂದು ವಾರದೊಳಗೆ ಈ ಎಲ್ಲಾ ಪ್ರಕರಣಗಳನ್ನು ಬೇಧಿಸದಿದ್ದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರಲ್ಲದೆ ಈ ಬಗ್ಗೆ ಡೀಸಿ, ಕಮಿಷನರ್, ಗೃಹ ಸಚಿವರು ಹಾಗೂ ಮುಖ್ಯಮಂತ್ರಿಗಳ ಜೊತೆ ಮಾತನಾಡುವುದಾಗಿ ತಿಳಿಸಿದರು.
ಈ ಎಲ್ಲಾ ಪ್ರಕರಣಗಳನ್ನು ಬೇಧಿಸದಿದ್ದಲ್ಲಿ ಮುಂದಿನ ಗ್ರಾಮ ಪಂಚಾಯತ್ ಚುನಾವಣೆ ವೇಳೆ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಮನೆ ಮನೆಗೆ ಬರುವಾಗ ಇದೆಲ್ಲವನ್ನು ಪ್ರಶ್ನಿಸಬೇಕು. ಮೊದಲು ಕಾನೂನಿಗೆ ಸವಾಲಾಗಿರುವ ಪ್ರಕರಣಗಳನ್ನು ಬೇಧಿಸಿ ಮತ್ತೆ ಮತ ಕೇಳಲು ಬನ್ನಿ ಎಂದು ಧೈರ್ಯವಾಗಿ ಜನ ಹೇಳಬೇಕು ಎಂದು ಸಲಹೆ ನೀಡಿದರು.
0 comments:
Post a Comment