ಬಂಟ್ವಾಳ, ನ. 14, 2020 (ಕರಾವಳಿ ಟೈಮ್ಸ್) : ಮಾಜಿ ಸಚಿವ ಬಿ ರಮಾನಾಥ ರೈ ಅವರ ಬಗ್ಗೆ ಕೊಲೆ ಆರೋಪ ಹೊರಿಸಿ ತೇಜೋವಧೆ ಮಾಡಿದ ಹರಿಕೃಷ್ಣ ಬಂಟ್ವಾಳ ವಿರುದ್ದ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿದ್ದರೂ ಪೊಲೀಸ್ ಇಲಾಖೆ ಇನ್ನೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಬಂಟ್ವಾಳ ಯುವ ಕಾಂಗ್ರೆಸ್ ಪದಾಧಿಕಾರಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಬಂಟ್ವಾಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಮುಖಂಡ ಇಬ್ರಾಹಿಂ ನವಾಝ್ ಬಡಕಬೈಲು ರಾಜಕೀಯವಾಗಿ, ಅಭಿವೃದ್ದಿ ಪರ ವಿಚಾರಗಳಲ್ಲಿ ರಮಾನಾಥ ರೈ ಅವರನ್ನು ಎದುರಿಸಲಾಗದ ಬಿಜೆಪಿಗರು ಇದೀಗ ಅವರ ಅಭಿವೃದ್ದಿ ಕಾರ್ಯಗಳನ್ನೇ ಪ್ರಶ್ನಿಸುವ ಮಟ್ಟಕ್ಕೆ ಇಳಿಯುವ ಮೂಲಕ ತಮ್ಮ ಕೀಳುಮಟ್ಟದ ಅಭಿರುಚಿಯನ್ನು ಪ್ರದರ್ಶಿಸಿದ್ದಾರೆ ಎಂದು ಲೇವಡಿ ಮಾಡಿದರು.
ರಮಾನಾಥ ರೈ ಅವರ ಅಭಿವೃದ್ದಿ ಕಾರ್ಯಗಳನ್ನು ಪ್ರಶ್ನಿಸುವವರು, ಅವರ ವಿರುದ್ದ ವಿನಾ ಕಾರಣ ಆರೋಪ ಮಾಡುವವರು ಹುಟ್ಟುವಾಗಲೇ ರಮಾನಾಥ ರೈ ಶಾಸಕರಾಗಿದ್ದರು ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕು ಎಂದು ಝಾಡಿಸಿದ ಇಬ್ರಾಹಿಂ ನವಾಝ್ ರಮಾನಾಥ ರೈ ಅಭಿವೃದ್ದಿ ಕಾರ್ಯಕ್ಕೆ ಬಿಜೆಪಿಗರ ಸರ್ಟಿಫಿಕೇಟ್ ಬೇಕಾಗಿಲ್ಲ. ರೈ ಅಂದರೆ ಯಾರು ಹೇಗೆ ಎಂಬುದು ಇಡಿ ರಾಜ್ಯಕ್ಕೆ ತಿಳಿದಿದೆ. ರಾಜ್ಯ ರಾಜಕೀಯದಲ್ಲಿ ಕಪ್ಪು ಚುಕ್ಕೆ ಇಲ್ಲದ ಭ್ರಷ್ಠಾಚಾರ ರಹಿತ, ಅಭಿವೃದ್ದಿಯಲ್ಲಿ ರಾಜಿ ರಹಿತ ರಾಜಕೀಯ ಭೀಷ್ಮ ಎಂಬುದು ಜಗಜ್ಜಾಹೀರು. ಈ ಬಗ್ಗೆ ಇಂದು-ನಿನ್ನೆ ಪ್ರಚಾರಕ್ಕೆ ಬಂದ ಬಿಜೆಪಿಗರಿಂದ ಯಾರೂ ತಿಳಿದುಕೊಳ್ಳುವ ಅಗತ್ಯವಿಲ್ಲ ಎಂದರು.
ಅಭಿವೃದ್ದಿ ಏನು ಎಂಬುದನ್ನು ತಿಳಿದುಕೊಳ್ಳಲು ಬಿಜೆಪಿಗರು ರೈ ಅವರಲ್ಲಿ ಹತ್ತು ವರ್ಷ ತರಬೇತಿ ಪಡೆದುಕೊಳ್ಳಬೇಕಾಗಬಹುದು ಎಂದ ಅವರು ರಮಾನಾಥ ರೈ ಅಭಿವೃದ್ದಿ ಕಾರ್ಯಗಳು ಯಾವುದೂ ಗುಪ್ತವಾಗಿಲ್ಲ. ಎಲ್ಲವೂ ಕಣ್ಣಿಗೆ ಕಾಣುವಂತಹ ಶುಭ್ರ ವಜ್ರದಂತಿದೆ ಎಂದರು. ಸಮಾಜದ ಎಲ್ಲಾ ಸಮುದಾಯಗಳಿಗೂ ಸಮಾನ ಅವಕಾಶ ನೀಡಿ ಬೆಳೆಸಿದ ಕೀರ್ತಿ ರಮಾನಾಥ ರೈ ಅವರಿಗೆ ಸಲ್ಲಬೇಕಾಗಿದೆ. ರೈ ಅವರ ಅಭಿವೃದ್ದಿಗೆ ಮಾಧ್ಯಮಗಳೂ ಮನ್ನಣೆ ನೀಡಿ ವಿಶೇಷ ವರದಿಗಳನ್ನು ಜನರ ಮುಂದಿಟ್ಟಿದೆ. ಪತ್ರಿಕಾಗೋಷ್ಠಿ ನಡೆಸುವ ಮೂಲಕ ಮಾತಿನ ತೆವಲು ತೀರಿಸುವವರು ಮೊದಲು ರೈ ಬಗ್ಗೆ ತಿಳಿದುಕೊಳ್ಳಲಿ ಎಂದವರು ಸವಾಲೆಸೆದರು.
ಕೊರೋನಾ ಸಂದರ್ಭದಲ್ಲೂ ಅಧಿಕಾರ ಇಲ್ಲದಿದ್ದರೂ ಗ್ರಾಮ ಮಟ್ಟದಲ್ಲಿ ಜನತೆಗೆ ಸ್ಪಂದಿಸಿದ ಕೀರ್ತಿ ರೈ ಅವರಿಗೆ ಸಲ್ಲಬೇಕು. ಇದೆಲ್ಲವನ್ನು ಮಾಡಬೇಕಾದರೆ ಮಾನವೀಯ ಹೃದಯ ವೈಶಾಲ್ಯತೆ ಇರುವವರಿಂದ ಮಾತ್ರ ಸಾಧ್ಯ ಹೊರತು ನಾಲಗೆ ಚಪಲ ತೀರಿಸುವವರಿಂದ ಸಾಧ್ಯವಿಲ್ಲ ಎಂದರು. ವೈಯುಕ್ತಿಕ ನಿಂದನೆ, ಅಪಪ್ರಚಾರ ನಿಲ್ಲಿಸಿ ನೇರವಾಗಿ ರಾಜಕೀಯವಾಗಿ, ಅಭಿವೃದ್ದಿ ಪರವಾಗಿ ಚರ್ಚಿಸಲು ಸಾಧ್ಯವಾದರೆ ಅದಕ್ಕಾಗಿ ವೇದಿಕೆ ನಿರ್ಮಿಸಲಿ. ಈ ಬಗ್ಗೆ ಚರ್ಚಿಸಲು, ಪ್ರಶ್ನೆಗಳಿಗೆ ಉತ್ತರಿಸಲು ಯುವ ಕಾಂಗ್ರೆಸ್ ರಮಾನಾಥ ರೈ ಪರವಾಗಿ ಸದಾ ಸಿದ್ದವಿದೆ ಎಂದು ಇಬ್ರಾಹಿಂ ನವಾಝ್ ಸ್ಪಷ್ಟಪಡಿಸಿದರು. ಜನಮತ ಪಡೆದು ಅರ್ಹವಾಗಿ ಬಂಟ್ವಾಳ ಪುರಸಭೆಯಲ್ಲಿ ಕಾಂಗ್ರೆಸ್ ಅಧಿಕಾರ ಪಡೆದಿದೆ ಎಂದ ಮಾತ್ರಕ್ಕೆ ಬಾಯಿಗೆ ಬಂದ ಆರೋಪಗಳನ್ನು ಮಾಡಿದ ಮಾತ್ರಕ್ಕೆ ಕಾಂಗ್ರೆಸ್ ಪಕ್ಷವನ್ನು ಕುಗ್ಗಿಸಲು ಸಾಧ್ಯವಿಲ್ಲ. ರಮಾನಾಥ ರೈ ಪರವಾಗಿ ಅಸಂಖ್ಯ ಕಾರ್ಯಕರ್ತರು ಅವರ ಬೆನ್ನಿಗಿದ್ದಾರೆ. ಮಾತ್ರವಲ್ಲದೆ ಆಹೋ-ರಾತ್ರಿ ಜನರಿಗಾಗಿ ಸದಾ ಓಡಾಡಿದ ರಮಾನಾಥ ರೈ ಹಿಂದೆ ಕ್ಷೇತ್ರದ ಜನ ಯಾವತ್ತೂ ಇದ್ದಾರೆ ಎಂಬುದನ್ನು ಬಿಜೆಪಿಗರು ಅರ್ಥ ಮಾಡಿಕೊಳ್ಳಬೇಕು ಎಂದರು.
ಪುರಸಭಾಧಿಕಾರಕ್ಕಾಗಿ ಕಾಂಗ್ರೆಸ್ ಸದಸ್ಯರಿಗೆ ಆಮಿಷ ಒಡ್ಡಿದ್ದ ಬಿಜೆಪಿಗರು
ಇದೇ ವೇಳೆ ಮಾತನಾಡಿದ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ಪುರಸಭೆಯ ಅಧಿಕಾರಕ್ಕಾಗಿ ಬಿಜೆಪಿಗರು ಕಾಂಗ್ರೆಸ್ ಸದಸ್ಯರಿಗೆ ಆಮಿಷ ಒಡ್ಡಿದ್ದಾರೆ. ಕಾಂಗ್ರೆಸ್ ಸದಸ್ಯರುಗಳ ಮನೆ ಮನೆಗೆ ಭೇಟಿ ನೀಡಿ ವಾಮಮಾರ್ಗದ ಮೂಲಕ ಅಧಿಕಾರ ಪಡೆಯಲು ಹರಸಾಹಸ ಪಟ್ಟು ಕೊನೆಗೂ ಕೈ ಸುಟ್ಟುಕೊಂಡಿದ್ದಾರೆ ಎಂದು ಆರೋಪಿಸಿದರು. ಪಕ್ಷ ನಿಷ್ಠೆ ಮೆರೆದಿರುವ ಕಾಂಗ್ರೆಸ್ಸಿನ ಎಲ್ಲ ನಿಷ್ಠಾವಂತ ಪುರಸಭಾ ಸದಸ್ಯರು ಬಿಜೆಪಿಗರ ಆಸೆ-ಆಮಿಷಕ್ಕೆ ಬಲಿಯಾಗದೆ ರಮಾನಾಥ ರೈ ಅವರ ಕೈ ಬಲಪಡಿಸಿದ್ದಾರೆ. ಬಿಜೆಪಿಗರ ಆಮಿಷದ ಬಗ್ಗೆ ಈಗಾಗಲೇ ನಾವು ಪೊಲೀಸ್ ದೂರು ನೀಡಿದ್ದೇವೆ ಎಂದರು. ರಾಜಧರ್ಮ ಪಾಲನೆಯ ಮಾತಿನೊಂದಿಗೆ ಶಾಸಕರಾಗಿ ಅಧಿಕಾರ ಪಡೆದುಕೊಂಡಿರುವ ಬಂಟ್ವಾಳ ಶಾಸಕರು ಇದೀಗ ರಾಜಧರ್ಮ ಮರೆತು ನೀಚ ರಾಜಕಾರಣ ಮಾಡುತ್ತಿದ್ದಾರೆ ಎಂದು ಪ್ರಶಾಂತ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ಪದಾಧಿಕಾರಿಗಳಾದ ಸುರೇಶ್ ಪೂಜಾರಿ, ಆಲ್ವಿನ್ ಪ್ರಶಾಂತ್, ಪವನ್ ಆಳ್ವ, ಎನ್‍ಎಸ್‍ಯುಐ ಪದಾಧಿಕಾರಿಗಳಾದ ಪ್ರಮುಖರಾದ ವಿನಯ ಕುಮಾರ್, ಶಫೀಕ್ ಬಿ ಸಿ ರೋಡು, ಪ್ರಮುಖರಾದ ಗಣೇಶ್ ಪೂಜಾರಿ, ಸುಧೀರ್ ಶೆಟ್ಟಿ, ಅಂಕುಶ್ ಶೆಟ್ಟಿ, ವಿಶ್ವಜಿತ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment