ಬಂಟ್ವಾಳ, ನ. 12, 2020 (ಕರಾವಳಿ ಟೈಮ್ಸ್) : ತಾಲೂಕಿನಾದ್ಯಂತ ರಾಷ್ಟ್ರೀಯ ಹೆದ್ದಾರಿ ಕಳೆದ ಕೆಲ ತಿಂಗಳಿನಿಂದ ಹೊಂಡ-ಗುಂಡಿಗಳಿಂದ ತುಂಬಿ ಹೋಗಿದ್ದು, ವಾಹನ ಸಂಚಾರಕ್ಕೆ ಅಯೋಗ್ಯವಾದ ಸ್ಥಿತಿಯಲ್ಲಿತ್ತು. ಈ ಬಗ್ಗೆ ರಾಜಕೀಯ ಪಕ್ಷಗಳು, ಸಂಘಟನೆಗಳು ಪ್ರತಿಭಟನೆ ನಡೆಸಿ ಹೋರಾಟದ ಎಚ್ಚರಿಕೆ ನೀಡಿತ್ತು. ಮೊನ್ನೆಯಷ್ಟೆ ಜಿಲ್ಲಾಧಿಕಾರಿಗಳು ಕೂಡಾ ಹೆದ್ದಾರಿ ದುರಸ್ತಿಗೆ ಖಡಕ್ ಸೂಚನೆ ನೀಡಿದ್ದರು. ಈ ಎಲ್ಲ ಬೆಳವಣಿಗೆಗಳಿಂದ ಕೊನೆಗೂ ಎಚ್ಚೆತ್ತ ಹೆದ್ದಾರಿ ಇಲಾಖಾಧಿಕಾರಿಗಳು ಯಾವುದೇ ಪೂರ್ವ ಸೂಚನೆ ನೀಡದೆ ಹೆದ್ದಾರಿಗೆ ಹಗಲು ಹೊತ್ತು ಡಾಮರೀಕರಣ ನಡೆಸಲು ಪ್ರಾರಂಭಿಸಿದ ಪರಿಣಾಮ ಗುರುವಾರ ದಿನವಿಡೀ ಬಂಟ್ವಾಳ, ಬಿ ಸಿ ರೋಡು, ಪಾಣೆಮಂಗಳೂರು, ಮೆಲ್ಕಾರ್, ಬೋಳಂಗಡಿ ಕಲ್ಲಡ್ಕವರೆಗೂ ಹೆದ್ದಾರಿ ಬ್ಲಾಕ್ ಆಗಿ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಪರಿಣಾಮ ಅಗತ್ಯ ಕೆಲಸ ಕಾರ್ಯಗಳಿಗೆ ಹೊರಟು ಬಂದ ಸಾರ್ವಜನಿಕರು ನಿಗದಿತ ಸಮಯಕ್ಕೆ ನಿರ್ಧರಿತ ಸ್ಥಳಕ್ಕೆ ತಲುಪಲಾಗದೆ ವ್ಯವಸ್ಥೆಗೆ ಹಿಡಿಶಾಪ ಹಾಕುವಂತಾಯಿತು. ಹಲವು ಮಂದಿ ಅಗತ್ಯ ಕಾರ್ಯಗಳು, ಕಾರ್ಯಕ್ರಮಗಳನ್ನು ಹೆದ್ದಾರಿ ಬ್ಲಾಕಿನಿಂದಾಗಿ ಕಳೆದುಕೊಳ್ಳುವಂತಾಗಿದ್ದು, ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿರುವುದು ಕಂಡು ಬಂತು.
ರಾತ್ರಿ ಹೊತ್ತು ಅಥವಾ ಟ್ರಾಫಿಕ್ ವ್ಯವಸ್ಥೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಮಾಡಬೇಕಾದ ಕಾಮಗಾರಿಯನ್ನು ಏಕಾಏಕಿ ಯಾವುದೇ ಪೂರ್ವ ಸೂಚನೆ ಇಲ್ಲದೆ ನಡೆಸಿದ ಅಧಿಕಾರಿಗಳ ತುಘಲಕ್ ದರ್ಬಾರಿನಿಂದ ಈ ರೀತಿಯ ಪರಿಸ್ಥಿತಿ ಉಂಟಾಗಿತ್ತು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಸಂಬಂಧಪಟ್ಟ ಪೊಲೀಸ್ ಇಲಾಖೆಗಾಗಲೀ, ತೇಪೆ ಕಾಮಗಾರಿ ಬಗ್ಗೆ ಪತ್ರಿಕಾ ಪ್ರಕಟಣೆಯಾಗಲೀ ಹೆದ್ದಾರಿ ಇಲಾಖೆ ನೀಡದೆ ಕಾಮಗಾರಿ ಏಕಾಏಕಿ ಹಗಲಿನಲ್ಲಿ ಆರಂಭಿಸಿದ ಪರಿಣಾಮ ಗುರುವಾರ ದಿನವಿಡೀ ಹೆದ್ದಾರಿ ಬ್ಲಾಕ್ ಆಗಿದ್ದು, ಕಿಲೋಮೀಟರ್‍ಗಟ್ಟಲೆ ವಾಹನಗಳ ಸಾಲು ಹೆದ್ದಾರಿಯಲ್ಲಿ ಕಂಡುಬಂತು.
ಬಿ ಸಿ ರೋಡಿನಿಂದ ಮೆಲ್ಕಾರ್‍ವರೆಗೂ ಆರಂಭದಲ್ಲಿ ವಾಹನಗಳ ಸಾಲು ಹೆದ್ದಾರಿಯಲ್ಲಿ ಕಂಡು ಬಂದ ಪರಿಣಾಮ ಹೆಚ್ಚಿನ ವಾಹನ ಸವಾರರು ಟ್ರಾಫಿಕ್ ತಪ್ಪಿಸುವ ಉದ್ದೇಶದಿಂದ ಪಾಣೆಮಂಗಳೂರು ಹಳೆ ನೇತ್ರಾವತಿ ಸೇತುವೆ ಮೂಲಕ ಸಂಚರಿಸಿದ ಪರಿಣಾಮ ಪಾಣೆಮಂಗಳೂರು ಪೇಟೆ ಸಹಿತ ನಂದಾವರ ರಸ್ತೆಯಲ್ಲೂ ಟ್ರಾಫಿಕ್ ಜಾಂ ಕಂಡು ಬಂತು. ಬಳಿಕ ಅಖಾಡಕ್ಕಿಳಿದ ಬಂಟ್ವಾಳ ನಗರ, ಗ್ರಾಮಾಂತರ ಹಾಗೂ ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಹೆಚ್ಚುವರಿ ಸಿಬ್ಬಂದಿಗಳೊಂದಿಗೆ ಬಂದು ಕಾರ್ಯಾಚರಣೆ ನಡೆಸಿ ಹೆದ್ದಾರಿ ಅಸ್ತವ್ಯಸ್ತತೆ ನಿಯಂತ್ರಿಸುವಲ್ಲಿ ಸಾಕು ಸಾಕಾಗಿ ಹೋಗಿತ್ತು.
0 comments:
Post a Comment