ಬಂಟ್ವಾಳ, ನ. 10, 2020 (ಕರಾವಳಿಯ) : ತಾಲೂಕಿನ ಪೆರ್ನೆಯ ಅಡಿಕೆ ವ್ಯಾಪಾರಿ ದೀಪಕ್ ಶೆಟ್ಟಿ ಎಂಬವರಿಗೆ ಮಾರಕಾಸ್ತ್ರಗಳಿಂದ ಹಲ್ಲೆಗೈದು ಲಕ್ಷಾಂತರ ರೂಪಾಯಿ ದರೋಡೆಗೈದ ಪ್ರಕರಣ ಬೇಧಿಸಿದ ಉಪ್ಪಿನಂಗಡಿ ಪೊಲೀಸರು ಮೂರು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಸಜಿಪನಡು ಗ್ರಾಮದ, ಕೋಟೆಕಣಿ-ಮಿತ್ತಪದವು ನಿವಾಸಿ ಮುಹಮ್ಮದ್ ಅಶ್ರಫ್ ಎಂಬವರ ಪುತ್ರ ಅಫ್ರಿದ್ (22), ಕೊಡಗು ಜಿಲ್ಲೆ, ಸೋಮವಾರಪೇಟೆ ತಾಲೂಕು, ದೊಡ್ಡಹನಕೋಡು ಗ್ರಾಮದ ಕಾಗಡಿಕಟ್ಟೆ ನಿವಾಸಿ ಅಬ್ದುಲ್ ಎಂಬವರ ಪುತ್ರ ಜುರೈಝ್ (20) ಹಾಗೂ ಮೂಲತಃ ಬಂಟ್ವಾಳ ತಾಲೂಕು, ಬಡಗಬೆಳ್ಳೂರು ಗ್ರಾಮದ ಬಡಗಬೆಳ್ಳೂರು ಶಾಲಾ ಬಳಿ ನಿವಾಸಿ, ಪ್ರಸ್ತುತ ಕಡೇಶಿವಾಲಯ ಗ್ರಾಮದ ದೊಡ್ಡಾಜೆ ಎಂಬಲ್ಲಿ ವಾಸವಾಗಿರುವ ಅಬ್ದುಲ್ ಸತ್ತಾರ್ ಎಂಬವರ ಪುತ್ರ ಮುಹಮ್ಮದ್ ತಂಝೀಲ್ (22) ಎಂದು ಹೆಸರಿಸಲಾಗಿದೆ.
ಬಂಧಿತ ಆರೋಪಿಗಳಿಂದ ನೋಂದಣಿ ಸಂಖ್ಯೆ ಕೆಎ70 ಇ6423 ಸಂಖ್ಯೆಯ ಗ್ರೇ ಬಣ್ಣದ ಆಕ್ಟಿವಾ ದ್ವಿಚಕ್ರ ವಾಹನ, ಕೃತ್ಯಕ್ಕೆ ಬಳಸಿದ ಚೂರಿ, 3 ಮೊಬೈಲ್, 41 ಸಾವಿರ ರೂಪಾಯಿ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಇನ್ನಿಬ್ಬರು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಪ್ರಕರಣದ ಆರೋಪಿಗಳಲ್ಲಿ ಪ್ರಮುಖ ಆರೋಪಿಯು ಯಾವುದೇ ಸಾಕ್ಷ್ಯಗಳು ಸಿಗದಂತೆ ಪೂರ್ವ ಯೋಜನೆ ರೂಪಿಸಿ ನಂತರ ಈ ಕೃತ್ಯನಡೆಸಿದ್ದು, ಆರೋಪಿಗಳ ಪೈಕಿ ಇಬ್ಬರು ಸ್ಕೂಟರ್ ನಲ್ಲಿ ವ್ಯಾಪಾರಿಯನ್ನು ಹಿಂಬಾಲಿಸಿಕೊಂಡು ನಿರ್ಜನ ಪ್ರದೇಶದಲ್ಲಿ ಕೃತ್ಯ ನಡೆಸಿದ್ದು, ಉಳಿದ ಆರೋಪಿಗಳಲ್ಲಿ ಒಬ್ಬ ವ್ಯಾಪಾರಿಯ ಚಲನವಲನದ ಬಗ್ಗೆ ಮಾಹಿತಿ ನೀಡಿದ್ದು , ಬಳಿಕ ಕೃತ್ಯ ಎಸಗಿರುತ್ತಾರೆ ಎಂಬುದನ್ನು ಪೊಲೀಸರು ತನಿಖೆ ವೇಳೆ ಬಯಲಿಗೆಳೆದಿದ್ದಾರೆ.
ಕಳೆದ ಅ. 27 ರಂದು ಬಂಟ್ವಾಳ ತಾಲೂಕಿನ ಪೆರ್ನೆಯ ಆರ್ಶಿವಾದ ಕಟ್ಟಡದಲ್ಲಿ ಅಡಿಕೆ ಖರೀದಿ ವ್ಯಾಪಾರ ನಡೆಸುತ್ತಿದ್ದ ದೀಪಕ್ ಜಿ ಶೆಟ್ಟಿ ಎಂಬವರು ಅಡಿಕೆ ಮಾರಾಟ ಮಾಡಿದ 3.5 ಹಣವನ್ನು ಬ್ಯಾಗಿನಲ್ಲಿ ತುಂಬಿಸಿ ಅಂಗಡಿ ಬಂದ್ ಮಾಡಿ ತನ್ನ ಮನೆಗೆ ಮೋಟಾರ್ ಸೈಕಲ್ ನಲ್ಲಿ ಹೋಗುತ್ತಿದ್ದ ವೇಳೆ ಸಂಜೆ 6:30 ರ ವೇಳೆಗೆ ಬಂಟ್ವಾಳ ತಾಲೂಕು ಬಿಳಿಯೂರು ಗ್ರಾಮ ಪಜೆಕೋಡಿ ಎಂಬಲ್ಲಿಗೆ ತಲುಪುತ್ತಿದ್ದಂತೆ ದ್ವಿ ಚಕ್ರ ವಾಹನದಲ್ಲಿ ಬಂದ ಅಪರಿಚಿತರಿಬ್ಬರು ವಾಹನವನ್ನು ತಡೆದು ದ್ವಿ ಚಕ್ರ ವಾಹನದ ಸಹ ಸವಾರ ದೀಪಕ್ ಅವರ ಬಲ ಭಾಗದ ತಲೆಯ ಭಾಗಕ್ಕೆ ಹಾಗೂ ಹೊಟ್ಟೆಯ ಭಾಗಕ್ಕೆ ಚೂರಿಯಿಂದ ತಿವಿದು ಚೀಲದಲ್ಲಿದ್ದ 3.5 ಲಕ್ಷ ರೂಪಾಯಿ ಹಣದ ಬ್ಯಾಗ್ , ಕುತ್ತಿಗೆಯಲ್ಲಿದ್ದ ಸುಮಾರು 1 ½ ಪವನ್ ತೂಕದ ಚಿನ್ನದ ಸರ ಹಾಗೂ ಲಾವಾ ಕಂಪನಿಯ ಮೊಬೈಲ್ ಸೆಟ್ ಗಳನ್ನು ದರೋಡೆಗೈದು ಪರಾರಿಯಾಗಿದ್ದರು. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ: 341,394 ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಗಾಗಿ ವಿಶೇಷ ತಂಡವನ್ನು ರಚಿಸಿ ಕಾರ್ಯ ಪ್ರವೃತ್ತರಾದ ಪೊಲೀಸ್ ತಂಡ ಪ್ರಮುಖ ಆರೋಪಿಗಳನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಸಿಪಿಐ ಉಮೇಶ್ ಉಪ್ಪಳಿಕೆ ಅವರ ನೇತೃತ್ವದ ವಿಶೇಷ ಪತ್ತೆ ತಂಡದಲ್ಲಿ ಪಿ.ಎಸ್.ಐ ಈರಯ್ಯ, ಎಚ್.ಸಿ ಗಳಾದ ಹರೀಶ್ಷಂದ್ರ, ಪೊಲೀಸ್ ಕಾನ್ಸಟೇಬಲ್ ಗಳಾದ ಇರ್ಷಾದ್, ಜಗದೀಶ್ ಅತ್ತಾಜೆ, ಜಿಲ್ಲಾ ಗಣಕ ಯಂತ್ರ ವಿಭಾಗದ ದಿವಾಕರ, ಸಂಪತ್, ಬಂಟ್ವಾಳ ಸಂಚಾರ ಠಾಣಾ ಎಚ್.ಸಿ ದೇವದಾಸ್ ಹಾಗೂ ಉಪ್ಪಿನಂಗಡಿ ಠಾಣೆ ಹಾಗೂ ಪುತ್ತೂರು ಸರ್ಕಲ್ ಕಛೇರಿ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
0 comments:
Post a Comment