ಬಂಟ್ವಾಳ, ನ 07, 2020 (ಕರಾವಳಿ ಟೈಮ್ಸ್) : ನಾನು ಶಾಸಕ, ಸಚಿವನಾಗಿದ್ದಾಗ ನಡೆಸಿದ ಅಭಿವೃದ್ದಿ ಕಾರ್ಯಗಳು ಹಾಗೂ ಕಾಂಗ್ರೆಸ್ ಪಕ್ಷದ ಜನಪರ ಕಾರ್ಯಗಳನ್ನು ಮೆಚ್ಚಿ ಜನ ಶಿಫಾರಸ್ಸು ಮಾಡಿದ್ದರು. ಅದೇ ರೀತಿ ಪುರಸಭೆಗೆ ಆಯ್ಕೆಯಾದ ಜನಪ್ರತಿನಿಧಿಗಳೂ ಕೂಡಾ ಇದೀಗ ಕಾಂಗ್ರೆಸ್ ಕಾರ್ಯಕ್ಕೆ ಮನ್ನಣೆ ನೀಡಿದ ಕಾರಣ ಪುರಸಭೆಯ ಅಧಿಕಾರ ಕಾಂಗ್ರೆಸ್ ಪಾಲಿಗೆ ಬಂದಿದೆ ಹೊರತು ಯಾವುದೇ ರೀತಿಯ ಮೈತ್ರಿಯಾಗಲೀ, ಹೊಂದಾಣಿಕೆಯಾಗಲೀ ಇದರಲ್ಲಿ ನಡೆದಿಲ್ಲ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಸಾರಿದ್ದಾರೆ.
ಬಂಟ್ವಾಳ ಪುರಸಭಾ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಜಯಭೇರಿ ಭಾರಿಸಿದ ಕಾಂಗ್ರೆಸ್ ಉಮೇದುವಾರರನ್ನು ಅಭಿನಂದಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅಭಿವೃದ್ದಿ ಹಾಗೂ ಪಕ್ಷದ ತತ್ವ ಸಿದ್ದಾಂತಗಳನ್ನು ಮನಸಾರೆ ಒಪ್ಪಿಕೊಂಡು ಯಾರು ಕೂಡಾ ಪಕ್ಷಕ್ಕೆ ಬೆಂಬಲ ನೀಡಿದರೆ ಅದನ್ನು ಬೇಡ ಎನ್ನಲಾಗುವುದಿಲ್ಲ. ಆದರೆ ಅಧಿಕಾರಕ್ಕಾಗಿ ಯಾವುದೇ ರೀತಿಯ ಅಪವಿತ್ರ ಮೈತ್ರಿಯಾಗಲೀ, ಹೊಂದಾಣಿಕೆಯಾಗಲೀ ಮಾಡಿಕೊಳ್ಳಲು ಕಾಂಗ್ರೆಸ್ ಸಿದ್ದವಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಹಿಂದೆ ಬಂಟ್ವಾಳ ಪುರಸಭೆಯಲ್ಲಿ ಬಿಜೆಪಿಗರು ಬೆಂಬಲಿಸಿದ್ದರಿಂದ ಮುಸ್ಲಿಂ ಲೀಗಿನ ಆಮಿನಾಬಿ ಶೇಖ್ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದರು. ಮುಹಮ್ಮದ್ ಇಕ್ಬಾಲ್ ಅವರು ಉಪಾಧ್ಯಕ್ಷರಾಗಿದ್ದರು. ಆದರೆ ಸ್ಥಳೀಯಾಡಳಿತದಲ್ಲಿ ಇಂತಹ ಕೆಲವೊಂದು ಹೊಂದಾಣಿಕೆಗಳನ್ನು ಮೈತ್ರಿ, ಹೊಂದಾಣಿಕೆ ಎನ್ನಲು ಸಾಧ್ಯವಿಲ್ಲ ಎಂದು ಚುನಾವಣಾ ಪ್ರಕ್ರಿಯೆನ್ನು ಸಮರ್ಥಿಸಿಕೊಂಡರು.
ಕಾಂಗ್ರೆಸ್ ಸಂಪೂರ್ಣವಾಗಿ ಜಾತ್ಯಾತೀತ ಸಿದ್ದಾಂತವನ್ನು ಅಡಿಗಲ್ಲಾಗಿಟ್ಟುಕೊಂಡು ಹುಟ್ಟಿಕೊಂಡ ಪಕ್ಷ. ಆ ಕಾರಣಕ್ಕಾಗಿ ಕಾಂಗ್ರೆಸ್ ಪಕ್ಷದಲ್ಲಿ ಜಾತಿ-ಧರ್ಮ, ವರ್ಗಗಳ ವಗೀಕರಣ ಇಲ್ಲ. ಚುನಾವಣೆ ಸಂದರ್ಭ ನಮ್ಮ ಪಕ್ಷದ ಸದಸ್ಯರನ್ನು ಕಣಕ್ಕಿಳಿಸಿದ್ದೇವೆ ಹೊರತು ಜಾತಿ-ಧರ್ಮದ ವರ್ಗೀಕರಣದಿಂದಲ್ಲ. ಪಕ್ಷದಲ್ಲಿ ಹಿರಿತನಕ್ಕೆ ಆದ್ಯತೆ ನೀಡಿ ಶರೀಫ್ ಅವರನ್ನು ಅಧ್ಯಕ್ಷ ಹುದ್ದೆಗೆ ಕಣಕ್ಕಿಳಿಸಲಾಗಿತ್ತು. ಮೀಸಲಾತಿ ಪ್ರಕಾರ ಏಕೈಕ ಅಭ್ಯರ್ಥಿಯಾಗಿದ್ದ ಜೆಸಿಂತಾ ಅವರನ್ನು ಉಪಾಧ್ಯಕ್ಷ ಹುದ್ದೆಗೆ ಕಣಕ್ಕಿಳಿಸಲಾಗಿತ್ತು. ಇದೀಗ ಅವರಿಬ್ಬರೂ ಜಯ ಗಳಿಸಿದ್ದು ಅವರನ್ನು ಅಭಿನಂದಿಸುತ್ತೇನೆ ಎಂದರು. ಬಂಟ್ವಾಳ ಪುರಸಭೆಯಲ್ಲಿ ಮುಸ್ಲಿಂ ಅಭ್ಯರ್ಥಿಗಳು ಅಧ್ಯಕ್ಷರಾಗದೆ ಹಲವು ವರ್ಷಗಳಾಗಿರುವ ಹಿನ್ನಲೆಯಲ್ಲೂ ಶರೀಫ್ ಅವರು ಮತ್ತೊಮ್ಮೆ ಅಭಿನಂದಾನರ್ಹರು ಎಂದ ರಮಾನಾಥ ರೈ ಬಂಟ್ವಾಳ ಪುರಸಭೆಯಲ್ಲಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಜನತೆಗೆ ಪೂರಕವಾಗಿ ಅತ್ಯುತ್ತಮ ಆಡಳಿತ ನೀಡಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
0 comments:
Post a Comment