ಬಂಟ್ವಾಳ, ನ. 10, 2020 (ಕರಾವಳಿ ಟೈಮ್ಸ್) : ರಾಜಕೀಯ ಹಾಗೂ ಸಾಮಾಜಿಕ ಜೀವನದ ಸುದೀರ್ಘ ಅವಧಿಯಲ್ಲಿ ಅತ್ಯಂತ ಹೆಚ್ಚಿನ ರೀತಿಯಲ್ಲಿ ಪ್ರಾಮಾಣಿಕತೆಗೆ ಒತ್ತು ನೀಡುತ್ತಾ ಬಂದಿದ್ದೇನೆ. ವಿನಾ ಕಾರಣ ಯಾರಿಗೂ ಅನ್ಯಾಯವಾಗದ ರೀತಿಯಲ್ಲಿ ನೋಡಿಕೊಂಡು ಬಂದಿದ್ದು, ಬಿಳಿ ಹಾಳೆಯ ರೀತಿಯಲ್ಲಿ ಆತ್ಮಸಾಕ್ಷಿ ಒಪ್ಪಕೊಳ್ಳುವ ರೀತಿಯಲ್ಲಿ ಸ್ವಚ್ಛ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ಇದಕ್ಕೆ ಯಾರದೋ ಪಕ್ಷದಿಂದ ಪಕ್ಷಕ್ಕೆ ಹಾರುತ್ತಾ ಅಸ್ತಿತ್ವಕ್ಕಾಗಿ ಚಡಪಡಿಸುವ ಮಂದಿಯ ಸರ್ಟಿಫಿಕೇಟ್ ಅಗತ್ಯವಿಲ್ಲ ಎಂದು ಮಾಜಿ ಸಚಿವ ಬಿ ರಮಾನಾಥ ರೈ ತೀಕ್ಷ್ಣವಾಗಿ ಪ್ರತಿಕ್ರಯಿಸಿದರು.
ಬಿ ಸಿ ರೋಡಿನಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ದೇಶದ ರಾಜಕಾರಣದಲ್ಲಿದ್ದ ನೈತಿಕತೆ, ಮೌಲ್ಯ, ಪಾವಿತ್ರ್ಯತೆ ಎಲ್ಲದಕ್ಕೂ ಮಣ್ಣು ಹಾಕಿ ಕೇವಲ ಅಧಿಕಾರ, ಹಣ ಮೊದಲಾದ ಅನೈತಿಕತೆಯನ್ನೇ ಬಂಡವಾಳವಾಗಿಸಿಕೊಂಡು ಬಂದಿರುವ ಬಿಜೆಪಿಗರು ನಮ್ಮ ಪ್ರಾಮಾಣಿಕತೆಯನ್ನು ಪ್ರಶ್ನಿಸುವ ನೈತಿಕತೆಯನ್ನು ಉಳಿಸಿಕೊಂಡಿಲ್ಲ ಎಂದು ಕಿಡಿ ಕಾರಿದರು.
ಸುದೀರ್ಘ ರಾಜಕೀಯ ಜೀವನದಲ್ಲಿ ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಾ ಜನರ ಮಧ್ಯೆಯೇ ಇದ್ದು, ಜನರ ಪ್ರೀತಿ-ವಿಶ್ವಾಸದಿಂದಲೇ ಹಂತ-ಹಂತವಾಗಿ ಮೇಲೇರಿ ಬಂದವನಾಗಿದ್ದು, ಗೆದ್ದಾಗಲೂ, ಸೋತಾಗಲೂ, ಅಧಿಕಾರ ಇದ್ದರೂ, ಇಲ್ಲದಿದ್ದರೂ, ಸರಕಾರ ಇದ್ದರೂ, ಇಲ್ಲದಿದ್ದರೂ ಯಾವತ್ತೂ ಜನರ ಮನಸ್ಸಿನ ಪ್ರೀತಿಯಿಂದ ದೂರವಾಗಿಲ್ಲ. ಅಧಿಕಾರದಲ್ಲಿದ್ದಾಗ ಜನರ ಪ್ರೀತಿ-ವಿಶ್ವಾಸಗಳಿಗೆ ಧಕ್ಕೆ ಬರದ ರೀತಿಯಲ್ಲಿ ಶಕ್ತಿ ಮೀರಿ ಜನರ ಸೇವೆ ಮಾಡಿದ್ದೇನೆ. ಜನರ ಪ್ರೀತಿಯ ಕೊರತೆಯಿಂದ ನಾನೆಂದೂ ಸೋತಿಲ್ಲ. ಕೇವಲ ವಿರೋಧಿಗಳ ಅಪಪ್ರಚಾರದಿಂದ, ಸುಳ್ಳಿನ ಸರಮಾಲೆಯಿಂದ ಸೋಲಾಗಿರಬಹುದು, ಆದರೆ ಅದು ಕ್ಷಣಿಕ ಸೋಲಾಗಿದ್ದು, ಸತ್ಯಕ್ಕೆ ಎಂದೂ ಸೋಲಾಗುವುದಿಲ್ಲ. ಮಾಡಿದ ಜನಪರ ಕೆಲಸಗಳಿಗೆ ಯಾವತ್ತೂ ಜನ ಹ್ಯಾಟ್ಸಪ್ ಎನ್ನುವ ಮೂಲಕ ಗೌರವ ನೀಡಿದ್ದಾರೆ. ಗೌರವದ ರಾಜಕೀಯ ಜೀವನವನ್ನು ನಡೆಸುವುದು ಬಿಟ್ಟರೆ, ಬಿಟ್ಟಿ ಪ್ರಚಾರಕ್ಕೆ ಯಾರನ್ನೂ ವೈಯುಕ್ತಿಕವಾಗಿ ನಿಂದಿಸಿ, ಅವಹೇಳಿಸಿ, ನೀಚ ರಾಜಕಾರಣ ಇದುವರೆಗೆ ಮಾಡಿಲ್ಲ. ಇನ್ನು ಮಾಡುವುದೂ ಇಲ್ಲ. ಸಂಸ್ಕಾರಯುತ ಕುಟುಂಬದಿಂದ ಬಂದು ಜನರ ಮಧ್ಯೆ ಸಂಸ್ಕಾರಯುತವಾಗಿಯೇ ನಡೆದುಕೊಂಡಿದ್ದೇನೆ. ಆದರೆ ಸಂಸ್ಕಾರ ರಹಿತ ವ್ಯಕ್ತಿಗಳು ಡಿಎನ್‍ಎ ಯಂತಹ ಕೀಳು ಮಟ್ಟದ ಮಾತಿನ ಚಪಲದ ಹೇಳಿಕೆ ನೀಡಿದಾಗಲೂ ತಾಳ್ಮೆ ಕಳೆದುಕೊಳ್ಳದೆ ಎಲ್ಲವನ್ನೂ ರಾಜಕೀಯವಾಗಿ ಮಾತ್ರ ತೆಗೆದುಕೊಂಡಿದ್ದೇನೆಯೇ ಹೊರತು ಯಾವುದನ್ನೂ ವೈಯುಕ್ತಿಕವಾಗಿ ತೆಗೆದುಕೊಂಡಿಲ್ಲ ಎಂದು ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ಅವರು ಮಾಡಿರುವ ವೈಯುಕ್ತಿಕ ಟೀಕೆಗಳಿಗೆ ಭಾವನಾತ್ಮಕವಾಗಿ ಹಾಗೂ ಖಾರವಾಗಿ ತಿರುಗೇಟು ನೀಡಿದರು.
ಪುರಸಭೆಯಲ್ಲಿ ಜನಾದೇಶದ ಪ್ರಕಾರ ಅಧಿಕಾರ
ಪುರಸಭಾ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಯ ಬಗ್ಗೆ ಕೇಳಿ ಬರುತ್ತಿರುವ ಆರೋಪಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಯಿಸಿದ ರಮಾನಾಥ ರೈ ಅವರು, 2018ರ ಪುರಸಭಾ ಚುನಾವಣೆಯಲ್ಲಿ ನನ್ನ ಶಾಸಕತ್ವ ಇಲ್ಲದಿದ್ದರೂ ಇಲ್ಲಿನ ಜನ ಅಭಿವೃದ್ದಿ ಕಾರ್ಯಗಳಿಗೆ ಮನ್ನಣೆ ನೀಡಿ ಬಿಜೆಪಿಗಿಂತ 1 ಸೀಟು ಹೆಚ್ಚುವರಿಯಾಗಿ ನೀಡಿ ಜನಾದೇಶ ನೀಡಿದ್ದರು. ಆ ಪ್ರಕಾರವಾಗಿ ಅರ್ಹವಾಗಿ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗಳಿಗೆ ಉಮೇದುವಾರಿಕೆ ಸಲ್ಲಿಸಿದ್ದೇವೆ ಹೊರತು ಯಾರೊಂದಿಗೂ ಹೊಂದಾಣಿಕೆಯಾಗಲೀ, ಮಾತುಕತೆಯಾಗಲೀ ಮಾಡಿಲ್ಲ ಎಂದರು.
ಹೊಂದಾಣಿಕೆ ಎಂದರೆ ಕೊಡು-ಕೊಳ್ಳುವಿಕೆಯ ವ್ಯವಹಾರ. ಒಂದು ಸೀಟು ನಮಗೆ, ಒಂದು ಸೀಟು ಅವರಿಗೆ ಎಂಬ ಸಿದ್ದಾಂತ ಇರುತ್ತದೆ. ಆದರೆ ಬಂಟ್ವಾಳ ಪುರಸಭೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಎರಡೂ ಹುದ್ದೆಗಳು ನಮ್ಮ ಅಭ್ಯರ್ಥಿಗಳಿಗೇ ದೊರೆತಿದೆ. ಹೀಗಿರುತ್ತಾ ಅದೇಗೆ ಹೊಂದಾಣಿಕೆ ಆಗುತ್ತದೆ ಎಂದು ರಮಾನಾಥ ರೈ ಪ್ರಶ್ನಿಸಿದರು. ಹೊಂದಾಣಿಕೆ, ಮಾತುಕತೆ ಬಗ್ಗೆ ಆರೋಪ ಮಾಡುವವರು ಇದನ್ನು ತಾಕತ್ತಿದ್ದರೆ ಸಾಬೀತುಪಡಿಸಲಿ. ಸಾಮಾಜಿಕ ಜಾಲತಾಣಗಳು ಅತ್ಯಂತ ಕ್ಷಿಪ್ರವಾಗಿರುವ ಸನ್ನಿವೇಶದಲ್ಲಿ ನಮ್ಮ ಹೊಂದಾಣಿಕೆ, ಮಾತುಕತೆ ಬಗ್ಗೆ ಎಲ್ಲಿಯಾದರೂ ಒಂದು ತುಣುಕು ಪುರಾವೆ ಇದ್ದರೆ ಒದಗಿಸಿ ಸಾಬೀತುಪಡಿಸಲಿ ಎಂದು ಸವಾಲೆಸೆದರು.
ಈ ಸಂದರ್ಭ ಪುರಸಭಾಧ್ಯಕ್ಷ ಮುಹಮ್ಮದ್ ಶರೀಫ್ ಶಾಂತಿಅಂಗಡಿ, ಉಪಾಧ್ಯಕ್ಷೆ ಜೆಸಿಂತಾ ಡಿ’ಸೋಜ, ಜಿ ಪಂ ಸದದ್ಯರುಗಳಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಿ ಪದ್ಮಶೇಖರ್ ಜೈನ್, ಎಂ ಎಸ್ ಮುಹಮ್ಮದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ತಾ ಪಂ ಉಪಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಪುರಸಭಾ ಸದಸ್ಯರಾದ ಗಾಯತ್ರಿ ಪ್ರಕಾಶ್, ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಲುಕ್ಮಾನ್ ಬಿ ಸಿ ರೋಡು, ಹಸೈನಾರ್ ತಾಳಿಪಡ್ಪು, ಪ್ರಮುಖರಾದ ಮಾಯಿಲಪ್ಪ ಸಾಲ್ಯಾನ್, ಸಂಪತ್ ಕುಮಾರ್ ಶೆಟ್ಟಿ ಮೊದಲಾದವರು ಜೊತೆಗಿದ್ದರು.
0 comments:
Post a Comment