ಬೀದರ್ ಜಿಲ್ಲೆಯಲ್ಲಿ ಮಾತ್ರ ಇವಿಎಂ, ಉಳಿದೆಡೆ ಬ್ಯಾಲೆಟ್ ಪೇಪರ್ ಬಳಕೆ
ಬೆಂಗಳೂರು, ನ. 30, 2020 (ಕರಾವಳಿ ಟೈಮ್ಸ್) : ರಾಜ್ಯದಲ್ಲಿ ಗ್ರಾಮ ಪಂಚಾಯತ್ ಚುನಾವಣೆಗೆ ಕೊನೆಗೂ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದ್ದು, ಡಿಸೆಂಬರ್ 22 ಹಾಗೂ 27 ರಂದು 2 ಹಂತದಲ್ಲಿ ಚುನಾವಣೆ ನಡೆಯಲಿದೆ. ಡಿ. 30 ರಂದು ಮತ ಎಣಿಕೆ ನಡೆಯಲಿದೆ.
ಇಂದು ರಾಜ್ಯ ಚುನಾವಣಾ ಆಯೋಗದ ಮುಖ್ಯಸ್ಥರು ಸುದ್ದಿಗೋಷ್ಠಿ ನಡೆಸಿ ಈ ಮಾಹಿತಿ ಪ್ರಕಟಿಸಿದ್ದಾರೆ. ರಾಜ್ಯದ ಒಟ್ಟು 5,762 ಗ್ರಾಮ ಪಂಚಾಯತ್‍ಗಳಿಗೆ ಚುನಾವಣೆ ನಡೆಯಲಿದೆ. ಡಿ. 22 ರಂದು ಮೊದಲ ಹಂತದ ಚುನಾವಣೆ ನಡೆದರೆ ಡಿ. 27ರಂದು ಎರಡನೇ ಹಂತದ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ 113 ತಾಲ್ಲೂಕುಗಳ 2,930 ಗ್ರಾಮ ಪಂಚಾಯತ್‍ಗಳು ಹಾಗೂ ಎರಡನೇ ಹಂತದಲ್ಲಿ 113 ತಾಲ್ಲೂಕುಗಳ 2,832 ಗ್ರಾಮ ಪಂಚಾಯಿತ್‍ಗಳಿಗೆ ಚುನಾವಣೆ ನಡೆಯಲಿದೆ.
ರಾಜ್ಯದ 6,006 ಗ್ರಾಮ ಪಂಚಾಯತಿಗಳ ಪೈಕಿ ಒಟ್ಟು 5,762 ಗ್ರಾಮ ಪಂಚಾಯತ್‍ಗಳ ಒಟ್ಟು 92,121 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಗ್ರಾ.ಪಂ ಚುನಾವಣೆಗೆ ಒಟ್ಟು 11,949 ಚುನಾವಣಾ ಅಧಿಕಾರಿಗಳು ಹಾಗೂ ಸಹಾಯಕ ಚುನಾವಣಾ ಅಧಿಕಾರಿಗಳನ್ನು ನೇಮಿಸಲಾಗಿದೆ.
ಒಟ್ಟು ಮತದಾರರ ಸಂಖ್ಯೆ 2,96,15,048 ಇದ್ದು, ಒಟ್ಟು 45,125 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ. ಮತಗಟ್ಟೆಗೆ ಬರುವ ಮತದಾರರಿಗೆ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದ್ದು ಎಲ್ಲ ಮತಗಟ್ಟೆಗಳಲ್ಲಿ ಸ್ಯಾನಿಟೈಸರ್ ಬಳಕೆಯನ್ನು ಕಡ್ಡಾಯ ಮಾಡಲಾಗುತ್ತದೆ. ಕೋವಿಡ್ ಹಿನ್ನೆಲೆಯಲ್ಲಿ ನೂಕು ನುಗ್ಗಲು ತಪ್ಪಿಸಲು ಒಂದು ಮತಗಟ್ಟೆಯಲ್ಲಿ ಗರಿಷ್ಠ ಒಂದು ಸಾವಿರ ಮಂದಿಗೆ ಮಾತ್ರ ಮತದಾನಕ್ಕೆ ಅವಕಾಶ ನೀಡಲಾಗಿದೆ.
ಮೊದಲ ಹಂತದ ಮತದಾನ ಡಿ. 22 ರಂದು ನಡೆಯಲಿದ್ದು ಅಧಿಸೂಚನೆ ಡಿ. 7 ರಂದು ಪ್ರಕಟವಾಗಲಿದೆ. ಡಿ. 11 ರಂದು ನಾಮಪತ್ರ ಸಲ್ಲಿಕೆ ಕಡೇ ದಿನವಾಗಿದ್ದು. ಡಿ. 14ರಂದು ನಾಮಪತ್ರ ವಾಪಸ್ ಪಡೆಯಲು ಕಡೇ ದಿನವಾಗಿದೆ.
ಎರಡನೇ ಹಂತದ ಚುನಾವಣೆ ಡಿ. 27 ರಂದು ನಡೆಯಲಿದ್ದು ಡಿ. 11 ರಂದು ಅಧಿಸೂಚನೆ ಪ್ರಕಟವಾಗಲಿದೆ. ಡಿ. 16 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದ್ದು ಡಿ. 19 ರಂದು ನಾಮಪತ್ರ ಪಡೆಯಲು ಕೊನೆ ದಿನಾಂಕವಾಗಿದೆ.
ಬೀದರ್‍ನಲ್ಲಿ ಮಾತ್ರ ಇವಿಎಂ ಮೂಲಕ ಮತದಾನ ನಡೆದರೆ, ಬೇರೆ ಜಿಲ್ಲೆಗಳಲ್ಲಿ ಬ್ಯಾಲೆಟ್ ಪೇಪರ್‍ನಲ್ಲಿ ಚುನಾವಣೆ ನಡೆಯಲಿದೆ. ಬೆಳಗ್ಗೆ 7 ರಿಂದ 5 ಗಂಟೆಯವರೆಗೆ ಚುನಾವಣೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
0 comments:
Post a Comment