ಬಂಟ್ವಾಳ, ನ. 10, 2020 (ಕರಾವಳಿ ಟೈಮ್ಸ್) : ಕೊರೋನಾ ಸಾಂಕ್ರಾಮಿಕ ರೋಗದಿಂದ ದೇಶದಲ್ಲಿ ಅನಿರೀಕ್ಷಿತವಾಗಿ ಲಾಕ್‍ಡೌನ್ ಆಯಿತು. ಮೊದಲೇ ಸಂಕಷ್ಟದಲ್ಲಿರುವ ಕಾರ್ಮಿಕರ ಹಿತವನ್ನು ಕಾಪಾಡುವ ಬದಲಿಗೆ ಮತ್ತಷ್ಟು ಸಂಕಷ್ಟ ಮಾತ್ರವಲ್ಲ ದೇಶದ ಆರ್ಥಿಕ ಸಾರ್ವಭೌಮತೆಗೆ ಧಕ್ಕೆ ತರುವ ಮತ್ತು ಅನ್ನದಾತ ರೈತರ ಸಂಪತ್ತನ್ನು ಸೃಷ್ಟಿಸುವ ಶ್ರಮಿಕನನ್ನು ಪೂರ್ಣ ಗುಲಾಮಗಿರಿಗೆ ತಳ್ಳುವ ಕೇಂದ್ರದ ಸರ್ವಾಧಿಕಾರಿ ವರ್ತನೆ ಮಾಡುತ್ತಿರುವ ಪ್ರಭುತ್ವದ ವಿರುದ್ದ ದೇಶದಲ್ಲಿರುವ ಎಲ್ಲ ದೇಶ ಪ್ರೇಮಿ ಕಾರ್ಮಿಕ ಸಂಘಟನೆಗಳು, ಸ್ವತಂತ್ರ ಸಂಘಟನೆಗಳು ಎಲ್‍ಐಸಿ, ಬ್ಯಾಂಕ್, ರಕ್ಷಣಾ ವಲಯ, ರೈಲ್ವೆ, ಬಿಎಸ್‍ಎನ್‍ಎಲ್, ರಾಜ್ಯ ಮತ್ತು ಕೇಂದ್ರ ಸೇವೆ ಮುಂತಾದ ಅಖಿಲ ಭಾರತ ಸಂಘಟನೆಗಳು, ಕಾರ್ಮಿಕರು, ನೌಕರರು ಅಸಂಘಟಿತ ಕ್ಷೇತ್ರದ ಕಾರ್ಮಿಕರಾದ ಕಟ್ಟಡ, ಹಮಾಲಿ, ಬೀಡಿ, ತೋಟಗಾರಿಕೆ, ಗುತ್ತಿಗೆ ಕಾರ್ಮಿಕರು, ಪಂಚಾಯ್ತಿ ನೌಕರರು, ಬೀದಿ ಬದಿ ವ್ಯಾಪಾರಸ್ಥರು, ಮನೆ ಕೆಲಸಗಾರರು, ಆಟೋ, ಟ್ಯಾಕ್ಸಿ, ಸಾರಿಗೆಯಲ್ಲಿ ಕಾರ್ಯನಿರ್ವಹಿಸುವ ನೌಕರರು, ಅಂಗನವಾಡಿ, ಬಿಸಿಯೂಟ, ಆಶಾ ನೌಕರರು ಮತ್ತು ವಿದ್ಯಾರ್ಥಿ, ಯುವಜನ, ಮಹಿಳಾ, ರೈತ ಸಂಘಟನೆಗಳು ಜೊತೆಗೂಡಿ ಭಾರತದ ಸಂವಿಧಾನದ ಸಂಸ್ಥಾಪನ ದಿನವಾದ ನವೆಂಬರ್ 26 ರಂದು ಸಂವಿಧಾನಿಕ ಹಕ್ಕುಗಳಿಗಾಗಿ ಅಖಿಲ ಭಾರತ ಮುಷ್ಕರವನ್ನು ನಡೆಸಲಾಗುವುದು ಎಂದು ಮಂಗಳವಾರ ಬಂಟ್ವಾಳ ತಹಶೀಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ತಿಳುವಳಿಕೆ ಪತ್ರವನ್ನು ನೀಡಲಾಯಿತು.
ನಿಯೋಗದಲ್ಲಿ ಕಾರ್ಮಿಕ ಮುಖಂಡರಾದ ರಾಮಣ್ಣ ವಿಟ್ಲ, ಉದಂiÀi ಕುಮಾರ್ ಬಂಟ್ವಾಳ, ಲೋಲಾಕ್ಷಿ ಬಂಟ್ವಾಳ, ಲಿಯಾಕತ್ ಖಾನ್, ಈಶ್ವರ, ನಾರಾಯಣ ಪೊೈಲೋಡಿ , ಸೈಯದ್ ರಿಯಾಝ್ ಬಂಟ್ವಾಳ, ಮಹಮ್ಮದ್ ಶರೀಫ್ ನಾವೂರು, ವಿನಯ ನಡುಮೊಗರು, ಶಾರದಾ, ಲೀಲಾ, ಶಾಂತ ಮೊದಲಾದವರಿದ್ದರು.
ಇದೇ ವೇಳೆ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಸಿಐಟಿಯು ನೇತೃತ್ವದಲ್ಲಿ ಬಂಟ್ವಾಳ ತಾಲೂಕು ಪಂಚಾಯತ್ ಕಛೇರಿಯ ಎದುರು ಪ್ರತಿಭಟನಾ ಪ್ರದರ್ಶನ ನಡೆಸಿ ನವೆಂಬರ್ 26 ರ ಸಾರ್ವತ್ರಿಕ ಮುಷ್ಕರದ ಬೇಡಿಕೆಯ ಮನವಿಯನ್ನು ತಾ ಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ರಾಜ್ಯದ ಮುಖ್ಯಮಂತ್ರಿಗಳಿಗೆ ನೀಡಲಾಯಿತು.
ನೂತನ ಶಿಕ್ಷಣ ನೀತಿ 2020ನ್ನು ಜಾರಿ ಮಾಡುವಾಗ ಬಿಸಿಯೂಟ ಯೋಜನೆಯನ್ನು ಬಲಿಷ್ಠ ಪಡಿಸಿ ಈಗಿರುವ ಮಾದರಿಯನ್ನು ಮುಂದುವರಿಸಬೇಕು, ಕೇಂದ್ರೀಕೃತ ಅಡುಗೆ ಕೇಂದ್ರ ಮಾದರಿ ಬೇಡ. ಯಾವುದೇ ಖಾಸಗಿ ಸಂಸ್ಥೆಗಳಿಗೆ ಯಾವುದೇ ಸ್ವರೂಪದ ಜವಾಬ್ದಾರಿ ಕೊಡಬಾರದು, ಕೆಲಸದ ಅವಧಿಯನ್ನು 4 ಗಂಟೆಯಿಂದ 6 ಗಂಟೆಗೆ ಅಕ್ಷರ ದಾಸೋಹ ಕೈಪಿಡಿಯಲ್ಲಿ ಬದಲಾಯಿಸಬೇಕು, ಶಾಲೆಗಳಲ್ಲಿ ಗ್ರೂಪ್ ಡಿ ನೌಕರರು ಇಲ್ಲದಿರುವುದರಿಂದ ಈ ನೌಕರರಿಂದಲೇ ಶಾಲಾ ಸ್ವಚ್ಛತೆ, ಕೈತೋಟ ನಿರ್ವಹಣೆ ಶಾಲಾ ಸಮಯದ ಗಂಟೆ ಬಾರಿಸುವುದು ಇನ್ನಿತರ ಕೆಲಸ ನೀಡಿ ಈ ನೌಕರರಿಗೆ ಶಾಲಾ ಸಿಬ್ಬಂದಿಗಳೆಂದು ನೇಮಿಸಿ ನೇಮಕಾತಿ ಆದೇಶ ನೀಡಬೇಕು, ಕರೋನಾ ಸಂದರ್ಭದ ವೇತನ 2020 ಎಪ್ರಿಲ್ ನಿಂದಲೇ ಪಾವತಿಸಬೇಕು, ಬಿಸಿಯೂಟ ಮಹಿಳೆಯರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು, ಬಿಸಿಯೂಟ ನೌಕರರನ್ನು ನೇರವಾಗಿ ಶಿಕ್ಷಣ ಇಲಾಖೆಯಡಿಯಲ್ಲಿಯೇ ಮೇಲ್ವಿಚಾರಣೆ ನಡೆಸಬೇಕು, ಪ್ರತಿ ಶಾಲೆಯಲ್ಲಿ ಕನಿಷ್ಟ 2 ಜನ ಅಡುಗೆಯವರು ಇರಲೇಬೇಕು, ನಿವೃತ್ತಿ ವೇತನ ಮತ್ತು ಆರೋಗ್ಯ ಸೌಲಭ್ಯ ಒದಗಿಸಬೇಕು, ಲಾಕ್ ಡೌನ್ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಆದಾಯ ತೆರಿಗೆ ವ್ಯಾಪ್ತಿ ಹೊರಗಿರುವ ಕುಟುಂಬಗಳಿಗೆ 7500 ರೂಪಾಯಿ ನಗದು ಪರಿಹಾರ ನೀಡಬೇಕು, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕೆಲಸದ ದಿನಗಳನ್ನು ವಾರ್ಷಿಕ 200 ದಿನಗಳಿಗೆ ವಿಸ್ತರಿಸಿ ಕನಿಷ್ಟ ಕೂಲಿ 600 ರೂಪಾಯಿ ಹೆಚ್ಚಿಸಿ ಎಲ್ಲರಿಗೂ ನರೇಗಾ ಕೆಲಸ ಕೊಡಬೇಕು, ರೈತ ವಿರೋಧಿ ಕಾನೂನುಗಳು ಮತ್ತು ಕಾರ್ಮಿಕ ವಿರೋಧಿ ಸಂಹಿತೆಗಳನ್ನು ಹಿಂತೆಗೆದುಕೊಳ್ಳಬೇಕು, ಎಲ್ಲರಿಗೂ ಎಲ್.ಐ.ಸಿ. ಆಧಾರಿತ ಖಾಯಂ ಪಿಂಚಣಿ ಒದಗಿಸಬೇಕು ಎಂಬಿತ್ಯಾದಿ ಬೇಡಿಕೆಗಳುಳ್ಳ ಮನವಿಯನ್ನು ಸರಕಾರಕ್ಕೆ ಸಲ್ಲಿಸಲಾಯಿತು.
0 comments:
Post a Comment